

ಬೆಂಗಳೂರು: ಚಿತ್ರಮಂದಿರಗಳ ಮಾಲೀಕರ ಒತ್ತಾಯಕ್ಕೆ ನಿನ್ನೆಯಷ್ಟೇ ಮಣಿದು ಪೂರ್ತಿ ಆಸನ ಭರ್ತಿಗೆ ಒಪ್ಪಿದ್ದ ಸರ್ಕಾರ, ಇಂದು ಜಿಮ್ ಮಾಲೀಕರ ಒತ್ತಾಯಕ್ಕೆ ಮಣಿದು ಜಿಮ್ ತೆರೆಯಲು ಕೂಡ ಅನುಮತಿ ನೀಡಿದೆ. ಆದರೆ ಕೆಲವು ಷರತ್ತುಗಳನ್ನು ವಿಧಿಸಿದ್ದು, ಅವುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದೆ.
ಕರೊನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಮಾರ್ಗಸೂಚಿ ಹೊರಡಿಸಿ ಕೆಲವೊಂದು ನಿರ್ಬಂಧಗಳನ್ನು ವಿಧಿಸಿದ್ದ ಸರ್ಕಾರ, ಜಿಮ್ಗಳನ್ನು ಮುಚ್ಚುವಂತೆ ಆದೇಶ ನೀಡಿತ್ತು. ಆದರೆ ಈ ಬಗ್ಗೆ ಇಂದು ಚಿತ್ರನಟರಾದ ರಾಕಿಂಗ್ ಸ್ಟಾರ್ ಯಶ್, ದುನಿಯಾ ವಿಜಯ್ ಕೂಡ ದನಿ ಎತ್ತಿದ್ದು, ಜಿಮ್ ತೆರೆಯಲು ಅನುಕೂಲ ಮಾಡಿಕೊಡುವಂತೆ ಟ್ವೀಟ್ ಮೂಲಕ ಒತ್ತಾಯಿಸಿದ್ದರು. ಅಲ್ಲದೆ #savefitnessindustry #savegym ಹ್ಯಾಷ್ಟ್ಯಾಗ್ಗಳ ಮೂಲಕ ಟ್ವಿಟರ್ನಲ್ಲಿ ಅಭಿಯಾನ ಕೂಡ ಆರಂಭವಾಗಿ, ಅದಕ್ಕೆ ಉತ್ತಮ ಬೆಂಬಲವೂ ವ್ಯಕ್ತವಾಗಿತ್ತು.
ಈ ಮಧ್ಯೆ ಜಿಮ್ ಮಾಲೀಕರ ಅಹವಾಲನ್ನು ಕೇಳಿಸಿಕೊಂಡ ಸರ್ಕಾರ ಜಿಮ್ ತೆರೆಯಲು ಅನುವು ಮಾಡಿಕೊಟ್ಟಿದೆ. ಆದರೆ ಜಿಮ್ನಲ್ಲಿ ಕಸರತ್ತು ನಡೆಸಲು ಶೇ. 50 ಮಂದಿಗಷ್ಟೇ ಅವಕಾಶ ನೀಡಬೇಕು. ಮುನ್ನೆಚ್ಚರಿಕೆ ಸಲುವಾಗಿ ಮಾಸ್ಕ್, ಸೋಷಿಯಲ್ ಡಿಸ್ಟೆನ್ಸ್, ಸ್ಯಾನಿಟೈಸರ್ ಬಳಕೆಯನ್ನು ಪಾಲಿಸಬೇಕು. ಪ್ರತಿಯೊಬ್ಬರೂ ಬಳಸಿದ ಬಳಿಕ ಉಪಕರಣಗಳನ್ನು ಸ್ಯಾನಿಟೈಸ್ ಮಾಡಬೇಕು. ಒಂದು ವೇಳೆ ಈ ಎಲ್ಲ ನಿಯಮಗಳನ್ನು ಪಾಲಿಸದಿದ್ದರೆ ಕೋವಿಡ್ ಹಾವಳಿ ಮುಗಿಯುವವರೆಗೂ ಜಿಮ್ಗಳನ್ನು ಮುಚ್ಚಿಸಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.