

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ನನೆಗುದಿಗೆ ಬಿದ್ದಿದ್ದ ಕಾವೇರಿ ನೀರಾವರಿ ನಾಲಾ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕ್ರಮವಹಿಸಿದ್ದು, 125 ಕೋಟಿ ರೂ. ಮಂಜೂರು ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕ್ರಮ ಕೈಗೊಂಡಿದ್ದಾರೆ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.
ತಾಲೂಕಿನ ಕೊಡಿಯಾಲ ಗ್ರಾಮದಲ್ಲಿ ಮಂಗಳವಾರ 95 ಕೋಟಿ ರೂ. ವೆಚ್ಚದಲ್ಲಿ ವಿಶ್ವೇಶ್ವರಯ್ಯ ಸಂಪರ್ಕ ನಾಲೆ ಅಭಿವೃದ್ಧಿ ಹಾಗೂ 1 ಮತ್ತು 2ನೇ ವಿತರಣಾ ನಾಲೆಗಳ ಆಧುನೀಕರಣ ಸೇರಿದಂತೆ 40 ಲಕ್ಷ ರೂ. ವೆಚ್ಚದಲ್ಲಿ ಗ್ರಾಮದ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನಲ್ಲಿ ನಾಲೆಗಳು ಸಾಕಷ್ಟು ಹಾಳಾಗಿ ನೀರು ಪೋಲಾಗುತ್ತಿದ್ದು, ಅವುಗಳ ದುರಸ್ತಿಗೆ ರೈತರಿಂದ ಒತ್ತಾಯ ಕೇಳಿಬಂದಿತ್ತು. ರಾಜ್ಯ ಕಾಂಗ್ರೆಸ್ ಸರ್ಕಾರ ಈ ಸಮಸ್ಯೆ ಅರಿತು ನಮ್ಮ ಭಾಗಕ್ಕೆ ಹೆಚ್ಚು ಒತ್ತು ನೀಡಿ ತಕ್ಷಣ ಮುಖ್ಯ ನಾಲೆಗಳ ಆಧುನೀಕರಣದ ಜತೆಗೆ ವಿತರಣಾ ನಾಲೆಗಳ ದುರಸ್ತಿಗೊಳಿಸುವ ಕಾಮಗಾರಿಗೆ ಚಾಲನೆ ನೀಡಿದ್ದು, ಇದರಿಂದ ಆಲಗೂಡು, ತಡಗವಾಡಿ, ಗೊಬ್ಬರಗಾಲ, ವಡಿಯಾಂಡಹಳ್ಳಿ, ಪರಮಾಂಡಹಳ್ಳಿ, ಗರ್ಕಹಳ್ಳಿ, ಅರಕೆರೆ, ಬಳ್ಳಕೆರೆ, ನೇರಳೆಕೆರೆ, ಬನ್ನಹಳ್ಳಿ, ಬೆಟ್ಟಹಳ್ಳಿ, ಮಾಡ್ರಹಳ್ಳಿ, ದೊಡ್ಡಹಾರಹಳ್ಳಿ, ಚಿಕ್ಕಹಾರಹಳ್ಳಿ ಗ್ರಾಮಗಳು ಸೇರಿದಂತೆ ಸುಮಾರು 3 ಸಾವಿರಕ್ಕೂ ಹೆಚ್ಚು ಎಕರೆ ಕೃಷಿಭೂಮಿಗೆ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರ ವಿಧಾನಸಭಾ ಚುನಾವಣಾ ಪೂರ್ವ ಘೋಷಣೆ ಮಾಡಿದ್ದ ಎಲ್ಲ್ಲ ಗ್ಯಾರಂಟಿ ಭರವಸೆಗಳನ್ನು ಈಡೇರಿಸುವ ಮೂಲಕ ಜನರ ಆಶಯಗಳಿಗೆ ಸ್ಪಂದಿಸಿದೆ. ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿ 2 ಸಾವಿರ ರೂ.ಪ್ರೋತ್ಸಾಹ ಧನ, ಶಕ್ತಿ ಯೋಜನೆಯಡಿ ರಾಜ್ಯಾದ್ಯಂತ ಸ್ತ್ರೀಯರಿಗೆ ಉಚಿತ ಸಾರಿಗೆ, 200 ಯೂನಿಟ್ ಉಚಿತ ವಿದ್ಯುತ್, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಪ್ರತಿ ತಲೆಗೆ ಅಕ್ಕಿಯ ಹಣ 170 ರೂ.ನೀಡಲಾಗುತ್ತಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಜಿಲ್ಲೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಗಮಂಗಲದ ವೆಂಕಟರಮಣೇಗೌಡ ಅಲಿಯಾಸ್ ಸ್ಟಾರ್ ಚಂದ್ರು ಸ್ಪರ್ಧಿಸುತ್ತಿದ್ದಾರೆ. ಕ್ಷೇತ್ರದಲ್ಲಿ ನನಗೆ ಬೆಂಬಲ ನೀಡಿದಂತೆ ಸಂಸತ್ತು ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ನೀಡಿ ಅವರ ಗೆಲುವಿಗೆ ಸಹಕರಿಸುವ ಜತೆಗೆ ಜಿಲ್ಲೆಯ ಸರ್ವೋತೋಮುಖ ಅಭಿವೃದ್ಧಿಗೆ ಕಾರಣೀಕರ್ತರಾಗಿ ಎಂದು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್‌ಗೆ ಶ್ರೀರಕ್ಷೆಯಾಗಿದೆ. ಶಾಸಕ ರಮೇಶ ಬಂಡಿಸಿದ್ದೇಗೌಡ ಅವರು ಮೈಶುಗರ್ ಕಾರ್ಖಾನೆ ವಿಚಾರದಲ್ಲಿ ಸದನದಲ್ಲಿ ದನಿ ಎತ್ತಿದ ಪರಿಣಾಮ ನೂತನ ಕಾರ್ಖಾನೆ ನಿರ್ಮಾಣ ಕುರಿತು ಸರ್ಕಾರದ ಬಜೆಟ್‌ನಲ್ಲಿ ಪ್ರಪ್ತಾಪಿಸಿ ಘೋಷಣೆ ಮಾಡಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲೂ ನಮ್ಮ ಸರ್ಕಾರಕ್ಕೆ ಬೆಂಬಲ ನೀಡಿ ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸಿ ಎಂದು ಮನವಿ ಮಾಡಿದರು.
ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ, ಕೊಡಿಯಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋದಾ, ಉಪಾಧ್ಯಕ್ಷೆ ಲಕ್ಷ್ಮೀ ರವಿ, ಮಾಜಿ ಅಧ್ಯಕ್ಷರಾದ ದಿನೇಶ್, ದೊಡ್ಡಹಾರೋಹಳ್ಳಿ ಚೇತನ್, ಸದಸ್ಯ ರಾಜಶೇಖರ್, ಮುಖಂಡರಾದ ಕಾಮರಾಜು, ಹುಣಸನಹಳ್ಳಿ ಸತೀಶ್, ಚೊಟ್ಟನಹಳ್ಳಿ ಅಭಿಷೇಕ್, ಕಾಂಗ್ರೆಸ್ ಮುಖಂಡ ಅರಕೆರೆ ಬೋರೇಗೌಡ, ಗುತ್ತಿಗೆದಾರ ಹಂಗರಹಳ್ಳಿ ಗೋವಿಂದೇಗೌಡ, ನೀರಾವರಿ ಇಲಾಖೆಯ ಎಇಇ ವಾಸುದೇವ್, ಎಇ ತಮ್ಮಣ್ಣೇಗೌಡ ಮತ್ತಿತರರು ಹಾಜರಿದ್ದರು.