

* ಬೆಂಗಳೂರು-ಮೈಸೂರು ಹೆದ್ದಾರಿಯ ಲೋಕೋಪಯೋಗಿ ಇಲಾಖೆಗೆ ಸೇರಿದ ಕಟ್ಟಡ
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ನಗರದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಲೋಕೋಪಯೋಗಿ ಇಲಾಖೆಗೆ ಸೇರಿದ ವಸತಿ ಗೃಹಗಳು ಪಾಳುಬಿದ್ದು ಹಲವು ವರ್ಷಗಳು ಕಳೆದರೂ ಈ ಬಗ್ಗೆ ಸಂಬಂಧಿಸಿದವರು ಗಮನ ಹರಿಸುತ್ತಿಲ್ಲ.
ಹೌದು..., ನಗರದ ಹೃದಯಭಾಗದಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ ಹಳೆಯ ವಸತಿಗೃಹಗಳಿವೆ. ಸದ್ಯ ಎರಡು ಕಟ್ಟಡದಲ್ಲಿ ಲೋಕೋಪಯೋಗಿ ಇಲಾಖೆಯ ವಿಭಾಗವೊಂದು ಕಾರ್ಯನಿರ್ವಹಿಸುತ್ತಿದೆ. ಆದರೆ, ಇದರ ಪಕ್ಕದಲ್ಲಿರುವ ತಹಸೀಲ್ದಾರ್ ವಸತಿಗೃಹ ಸೇರಿ ಇನ್ನೊಂದು ವಸತಿಗೃಹ ಸಂಪೂರ್ಣ ಶಿಥಿಲವಾಗಿದೆ. ಒಳಗೆ ಕಾಲಿಡಲು ಸಾಧ್ಯವಿಲ್ಲ ಎಂಬ ಸ್ಥಿತಿಗೆ ಈ ಕಟ್ಟಡ ತಲುಪಿದೆ. ಗಿಡಗಂಟಿಗಳು ಬೆಳೆದುಕೊಂಡು ಹಾವುಚೇಳಿನ ವಾಸಸ್ಥಾನವಾಗಿ ಬದಲಾಗಿದೆ. ಸದ್ಯ ನಗರಕ್ಕೆ ಕಪ್ಪುಚುಕ್ಕೆಯಂತೆ ಭಾಸವಾಗುತ್ತಿದೆ.
ಹೆದ್ದಾರಿಗೆ ಹೊಂದಿಕೊಂಡಿರುವ ಈ ವಸತಿಗೃಹದ ಜಾಗವನ್ನು ಸಮರ್ಪಕವಾಗಿ ಬಳಸಿಕೊಂಡರೆ ಸಾಕಷ್ಟು ಅನುಕೂಲವಾಗಲಿದೆ. ಹೆದ್ದಾರಿಯಲ್ಲಿ ವಾಣಿಜ್ಯ ಸಮುಚ್ಚಯಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಈ ಕಟ್ಟಡಗಳನ್ನು ತೆರವು ಮಾಡಿ ಈ ಜಾಗದಲ್ಲಿ ಬೃಹತ್ ವಾಣಿಜ್ಯ ಸಂಕಿರ್ಣ ನಿರ್ಮಿಸಿದರೆ ಇಲಾಖೆಗೆ ವಾರ್ಷಿಕ ಕೋಟ್ಯಂತರ ಬಾಡಿಗೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಶಿಥಿಲಗೊಂಡಿರುವ ವಸತಿಗೃಹಗಳನ್ನು ತೆರವು ಮಾಡಿ ಈ ಜಾಗದಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಾಣ ಮಾಡಿದರೆ, ಅಭಿವೃದ್ಧಿ ಜತೆಗೆ ಲೋಕೋಪಯೋಗಿ ಇಲಾಖೆಗೆ ಆದಾಯವೂ ಬರಲಿದೆ. ಆದರೆ, ಸಂಬಂಧಿಸಿದವರು ಈ ಬಗ್ಗೆ ಜಾಣಕುರುಡುತನ ಪ್ರದರ್ಶನ ಮಾಡುತ್ತಿರುವ ಕಾರಣದಿಂದ ಈ ಜಾಗ ಪಾಳುಕೊಂಪೆಯಂತಾಗಿದೆ.
ತಹಸೀಲ್ದಾರ್ ವಸತಿ ಗೃಹ ಸೇರಿ ಪಕ್ಕದಲ್ಲಿರುವ ಲೋಕೋಪಯೋಗಿ ಇಲಾಖೆ ಕಚೇರಿ, ಸ್ಪೆಷಲ್ ಡಿವಿಷನ್, ಇಒ ವಸತಿ ಗೃಹ ಎಲ್ಲವನ್ನು ತೆರವು ಮಾಡಿದರೆ ವಿಶಾಲವಾದ ಜಾಗ ಲಭ್ಯವಾಗಲಿದ್ದು, ಈ ಜಾಗವನ್ನು ಬಳಸಿಕೊಂಡರೆ ಇಲಾಖೆಗೆ ಸಾಕಷ್ಟು ಲಾಭವಾಗಲಿದೆ. ವಸತಿಗೃಹಗಳನ್ನು ತೆರವು ಮಾಡಿ ವಾಣಿಜ್ಯ ಸಂಕಿರ್ಣಗಳನ್ನು ನಿರ್ಮಾಣ ಮಾಡುವುದು ಸಾಧ್ಯವಿಲ್ಲವಾದರೆ, ಸರ್ಕಾರಿ ಕಚೇರಿಗಳ ಉಪಯೋಗಕ್ಕಾದರೂ ಈ ಜಾಗವನ್ನು ಬಳಸಿಕೊಳ್ಳಬಹುದಾಗಿದೆ. ತಾಲೂಕಿನಲ್ಲಿ ಹಲವು ಇಲಾಖೆಗಳಿಗೆ ಸ್ವಂತ ಕಟ್ಟಡ ಇಲ್ಲದೆ ಖಾಸಗಿ ಕಟ್ಟಡಗಳಲ್ಲಿ ಬಾಡಿಗೆ ನೀಡಿ ಕಾರ್ಯ ನಿರ್ವಹಿಸುತ್ತಿವೆ. ವಿಶಾಲವಾದ ಜಾಗದಲ್ಲಿ ಸೂಕ್ತ ರೂಪುರೇಷೆ ಸಿದ್ಧಪಡಿಸಿದರೆ, ಸರ್ಕಾರಕ್ಕೆ ಲಾಭವಾಗುವ ಜತೆಗೆ, ಪಾಳುಬಿದ್ದು ನಗರಕ್ಕೆ ಕಪ್ಪುಚುಕ್ಕಿಯಾಗಿರುವ ಈ ಜಾಗ ಪ್ರಮುಖ ವಾಣಿಜ್ಯ ಕೇಂದ್ರವಾಗಿ ರೂಪುಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ಸೇರಿ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ಕಾಳಜಿವಹಿಸಲಿ ಎಂಬುದು ಬಹುತೇಕರ ಅಭಿಪ್ರಾಯವಾಗಿದೆ.
ಈ ಜಾಗದಲ್ಲಿರುವ ತಹಸೀಲ್ದಾರ್ ವಸತಿಗೃಹ ಪಾಳುಬಿದ್ದು ಹಲವು ವರ್ಷಗಳೇ ಕಳೆದಿದೆ. ಈ ಜಾಗವನ್ನು ಸದ್ಬಳಕೆ ಮಾಡಿಕೊಳ್ಳಲು ಈ ಹಿಂದೆಯೇ ಯೋಜನೆ ರೂಪಿಸಲಾಗಿತ್ತು. ಆದರೆ, ಇಚ್ಛಾಶಕ್ತಿ ಕೊರತೆಯಿಂದ ಅದು ಕೇವಲ ಯೋಜನೆಯಾಗಿಯೇ ಉಳಿಯಿತು. ಈ ಜಾಗದಲ್ಲಿ ವಾಣಿಜ್ಯ ಸಂಕಿರ್ಣ ನಿರ್ಮಾಣ ಮಾಡುವ ಜತೆಗೆ ಮಿನಿ ಕಂದಾಯ ಭವನ ನಿರ್ಮಾಣ ಮಾಡಿ ಬಾಡಿಗೆ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಲವು ಸರ್ಕಾರಿ ಇಲಾಖೆಗಳನ್ನು ಒಂದೆಡೆ ತರಬಹುದಾಗಿದೆ. ಈಗಲಾದರೂ, ಸಂಬಂಧಿಸಿದವರು ಈ ಜಾಗದ ಬಗ್ಗೆ ಆಸಕ್ತಿವಹಿಸಲಿ ಎಂಬುದೇ ಪತ್ರಿಕೆಯ ಆಶಯವಾಗಿದೆ.
ನಗರದಲ್ಲಿ ಹೆದ್ದಾರಿಯಲ್ಲಿರುವ ಈ ಜಾಗಕ್ಕೆ ಸಾಕಷ್ಟು ಬೆಲೆಯಿದೆ. ಇದರ ಪಕ್ಕದಲ್ಲಿ ಖಾಸಗಿಯಾಗಿ ಹಲವು ವಾಣಿಜ್ಯ ಸಂಕಿರ್ಣಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ಈ ಜಾಗವನ್ನು ಸೂಕ್ತವಾಗಿ ಬಳಸಿಕೊಂಡರೆ ಇಲಾಖೆಗೆ ಖಂಡಿತವಾಗಿ ಆದಾಯ ಬರಲಿದೆ. ನಗರದ ಹೃದಯಭಾಗದಲ್ಲಿ ವಸತಿಗೃಹ ಪಾಳುಬಿದ್ದಿರುವುದು ನಗರಕ್ಕೂ ಒಂದು ರೀತಿಯಲ್ಲಿ ಕಳಂಕ ಎನ್ನಬಹುದು. ಈ ಬಗ್ಗೆ ಸಂಬಂಧಿಸಿದವರು ಗಮನಹರಿಸಲಿ.ಪಟ್ಲು ಕೆಂಚೇಗೌಡ, ಸಾರ್ವಜನಿಕ.ಈ ಜಾಗದಲ್ಲಿ ಲೋಕೋಪಯೋಗಿ ವಿಶೇಷ ವಿಭಾಗ ಕಾರ್ಯನಿರ್ವಹಿಸುತ್ತಿದೆ. ಇದರ ಪಕ್ಕದಲ್ಲಿರುವ ವಸತಿಗೃಹಗಳು ಪಾಳುಬಿದ್ದಿರುವುದು ನಿಜ. ಈ ಜಾಗದ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಯಾವುದಾದರೂ ಕ್ರಮವಹಿಸಲಾಗುವುದು.ಶಿವ ಪ್ರಸಾದ್, ಎಇಇ ಲೋಕೋಪಯೋಗಿ ಇಲಾಖೆ