

ಕೆ.ಆರ್.ನಗರ: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದ ಆಶಯದಲ್ಲಿ ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಡುತ್ತಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆಯ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂತಕವಿ ಸರ್ವಜ್ಞ, ಛತ್ರಪತಿ ಶಿವಾಜಿ ಮಹಾರಾಜ ಹಾಗೂ ಸಂತ ಸೇವಾಲಾಲ್ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿ ಸಮುದಾಯದ ಪರವಾಗಿ ನಿರಂತರ ಹೋರಾಟ ಮತ್ತು ತಮ್ಮ ತತ್ವ, ಸಿದ್ಧಾಂತಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ ಸಾಧಕರನ್ನು ಅವರ ಜಯಂತಿಗಳ ಮೂಲಕ ನೆನೆಯುವುದರಿಂದ ನಾವು ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ನಮ್ಮ ಕಾಂಗ್ರೆಸ್ ಪಕ್ಷ ಎಲ್ಲ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ನೀಡಿ ಸಮಾಜದ ಆರ್ಥಿಕ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿಕೊಂಡು ಆ ಸಮುದಾಯಗಳ ಹೇಳಿಕೆಗೆ ಅನುಕೂಲ ಮಾಡಿಕೊಡುತ್ತಿದೆ. ಆದ್ದರಿಂದಲೇ ಎಲ್ಲ ಸಮುದಾಯಗಳ ದಾರ್ಶನಿಕರ ಜಯಂತಿ ಕಾರ್ಯಕ್ರಮಗಳನ್ನು ಸರ್ಕಾರದ ಕಾರ್ಯಕ್ರಮವಾಗಿ ಆಚರಿಸುವ ಜತೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಆಶಯದಡಿಯಲ್ಲಿ ಸಮಾಜ ಸುಧಾರಣೆ ಮತ್ತು ಸಾಮಾಜಿಕ ನ್ಯಾಯ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸನ್ಮಾನ: ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಪತ್ರಕರ್ತ ರಾಜೇಂದ್ರರಾವ್, ಭೀಮರಾವ್ ಸಾಟೆ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಲಾಯಿತು.
ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ, ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜ್, ಸಾಹಿತಿ ಹೆಗ್ಗಂದೂರು ಪ್ರಭಾಕರ್, ತಾಲೂಕು ಕುಂಬಾರ ಸಂಘದ ಗೌರವಾಧ್ಯಕ್ಷ ತಿಮ್ಮಶೆಟ್ಟಿ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ತಾಲೂಕು ಅಧ್ಯಕ್ಷ ಗೋಪಾಲ ರಾವ್ ಕದಂ, ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕರಾದ ಕೆ.ಎನ್.ಪ್ರಸನ್ನಕುಮಾರ್, ಸೈಯದ್ ಜಾಬೀರ್, ಪುರಸಭಾ ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ಪುರಸಭಾ ಮಾಜಿ ಸದಸ್ಯರಾದ ಕೆ.ಎಲ್.ಕುಮಾರ್, ಮೀರಾಬಾಯಿ, ಶ್ರೀನಿವಾಸ್, ರಾಜೇಶ್, ಗ್ರಾಪಂ ಮಾಜಿ ಸದಸ್ಯ ತಿಪ್ಪೂರು ವಿಷ್ಣು, ಕುಂಬಾರ ಸಂಘದ ತಾಲೂಕು ಅಧ್ಯಕ್ಷ ವೀರಭದ್ರಶೆಟ್ಟಿ, ಸಾಹಿತಿ ತಿಪ್ಪೂರು ಕೃಷ್ಣ ಸೇರಿದಂತೆ ಇನ್ನಿತರರರು ಹಾಜರಿದ್ದರು.