ಸರ್ಕಾರಿ ಶಾಲೆ ಸೌಲಭ್ಯ ವಂಚಿತ

Siddapura school
ಬಾಹ್ಯ ಹಾಗೂ ಆಂತರಿಕ ಸೌಂದರ್ಯದಿಂದ ಕಣ್ಮನ ಸೆಳೆಯುವ ಸಿದ್ದಾಪುರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ.
Published on

-ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

ಸರ್ಕಾರಿ ಶಾಲೆ ಮಕ್ಕಳ ಕೊರತೆಯಿಂದ ಮುಚ್ಚಿಕೊಳ್ಳುತ್ತಿದ್ದರೆ, ಮತ್ತಷ್ಟು ಶಾಲೆ ಕದವಿಕ್ಕುವ ಹಂತದಲ್ಲಿದೆ. ಹಳೇ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು ವಿದ್ಯಾಭಿಮಾನಿಗಳು ಸರ್ಕಾರಿ ಶಾಲೆ ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ಪರಿಣಾಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಸರ್ಕಾರ ಶಾಲೆಗಳ ಮೂಲಸೌಲಭ್ಯ ಹೆಚ್ಚಿಸುವ ಬದಲು ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಬಿಜಿಯಾಗಿದೆ.

ಬೈಂದೂರು ಕ್ಷೇತ್ರ ವ್ಯಾಪ್ತಿಯ ಸಿದ್ದಾಪುರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮೂಲಸೌಲಭ್ಯ ವಂಚಿತ. ಆರು ತಿಂಗಳ ಹಿಂದೆ ಕೊಳವೆ ಬಾವಿ ಮಂಜೂರಾಗಿದ್ದರೂ, ಕೊಳವೆ ಬಾವಿ ಕೊರೆಯದೆ ಪ್ರಸ್ತುತ ಶಾಲೆ ನೀರಿನ ಸಮಸ್ಯೆ ಎದುರಿಸುತ್ತಿದೆ. ಶಾಲೆಯಲ್ಲಿ 300ಕ್ಕೂ ಮಿಕ್ಕಿ ಮಕ್ಕಳಿದ್ದು, ಒಂದರಿಂದ 7ನೇ ತರಗತಿ ತನಕ ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯ ವಿಶೇಷ ಎಂದರೆ ಹೆಣ್ಣುಮಕ್ಕಳದ್ದೇ ಸಿಂಹಪಾಲು. ಗೃಹಲಕ್ಷ್ಮೀ, ಸ್ತ್ರೀ ಶಕ್ತಿ ಯೋಜನೆ ಮೂಲಕ ಮಹಿಳೆಯರ ಸಬಲೀಕರಣ ಎನ್ನುವ ಸರ್ಕಾರ ಸಿದ್ದಾಪುರ ಸರ್ಕಾರಿ ಶಾಲೆ ಮಕ್ಕಳು ನೀರಿಲ್ಲದೆ ಶೌಚಗೃಹವಿದ್ದರೂ ಬಳಸದ ಸ್ಥಿತಿಯಲ್ಲಿದೆ. ಸರ್ಕಾರ ಮೊದಲು ಸರ್ಕಾರಿ ಶಾಲೆಗಳ ಮೂಲಸೌಲಭ್ಯದ ಕಡೆ ಗಮನ ಹರಿಸಲಿ. ಆಮೇಲೆ ಬೇಕಾದರೆ ಪಠ್ಯಪುಸ್ತಕ ಪರಿಷ್ಕರಿಸಲಿ. ಊಟಕ್ಕೆ ಬಟ್ಟಲಿಡದೆ ಅನ್ನಹಾಕಿದರೆ ಹೇಗೆ ಎನ್ನುವ ಮಕ್ಕಳ ಮುಗ್ಧ ಪ್ರಶ್ನೆಗೆ ಸರ್ಕಾರವೇ ಉತ್ತರ ಕೊಡಬೇಕು.

ಸಿದ್ದಾಪುರ ಎರಡೂ ಶಾಲೆಯೂ ಫೇಮಸ್..

ಸಿದ್ದಾಪುರದಲ್ಲಿ ಇರುವ ಸರ್ಕಾರಿ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆ ಗುಣಮಟ್ಟದ ಕಲಿಕೆ ಮೂಲಕ ಫೇಮಸ್. ಸರ್ಕಾರಿ ಪ್ರೌಢಶಾಲೆ ್ದಾೃರ್ಥಿಗಳು ರಾಜ್ಯಮಟ್ಟದ ರ‌್ಯಾಂಕ್ ಗಳಿಸಿದ್ದಾರೆ. ಇಲ್ಲಿನ ಬೋಧನಾ ಮಟ್ಟ ಉತ್ಕೃಷ್ಟದಲ್ಲಿದೆ. ಬೇರೆ ಬೇರೆ ಕಡೆಯಿಂದ ಹಾಗೂ ಖಾಸಗಿ ಶಾಲೆಯಿಂದಲೂ ಸಿದ್ದಾಪುರ ಪ್ರೌಢಶಾಲೆಗೆ ದಾಖಲಾಗುತ್ತಿರುವುದು ಬೋಧನಾ ಮಟ್ಟಕ್ಕೆ ಸಾಕ್ಷಿ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೂ ಉತ್ತಮ ಶಿಕ್ಷಣ ಮೂಲಕ ಗ್ರಾಮೀಣ ಭಾಗದ ಮಕ್ಕಳನ್ನು ಸೆಳೆಯುತ್ತಿದೆ. ಇದುವರೆಗೆ ಶಾಲೆ ಮಕ್ಕಳ ಕೊರತೆ ಕಂಡಿಲ್ಲ. ಯಾವುದೇ ವರ್ಷ ಶೂನ್ಯ ದಾಖಲಾತಿ ಕಂಡಿಲ್ಲ. ಪ್ರಸಕ್ತ ದಾನಿಯೊಬ್ಬರು ತಮ್ಮೂರ ಶಾಲೆ ಎನ್ನುವ ಅಭಿಮಾನದಲ್ಲಿ ಉಚಿತ ನೀರು ಪೂರೈಕೆ ಮಾಡುತ್ತಿದ್ದಾರೆ.

ಅಕ್ಷರ ದಾಸೋಹಕ್ಕೂ ನೀರಿಲ್ಲ

ಸಿದ್ದಾಪುರ ಸರ್ಕಾರಿ ಶಾಲೆ ನೀರಿನ ಸಮಸ್ಯೆ ಪರಿಹಾರಕ್ಕೆ ಕೊಳವೆ ಬಾವಿ ಮಂಜೂರಾಗಿದ್ದರೂ ಸಬೂಬು ಹೇಳುತ್ತಾ ಆರು ತಿಂಗಳ ಕಾಲಹರಣ ಮಾಡಿದ್ದೇ ಸಾಧನೆ. ಕೊಳವೆ ಬಾವಿ ಕೊರೆಸಿ ಅಂತ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಕೇಳಿಕೊಂಡರೆ, ನಮಗೆ ನಿಮ್ಮದೊಂದೆ ಶಾಲೆ ಅಲ್ಲ ಬೇರೆ ಶಾಲೆಗಳನ್ನೂ ನೋಡಬೇಕು ಎನ್ನುತ್ತಾರೆ. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಮನಕ್ಕೂ ತಂದಿದ್ದೇವೆ. ನೀರಿಲ್ಲದೆ ಅಕ್ಷರದಾಸೋಹ, ಶೌಚಗೃಹ ಇದ್ದರೂ ಬಳಸಲಾಗದ ಸ್ಥಿತಿ. ಕೊಳವೆ ಬಾವಿ ಕೊರೆದು ನಮ್ಮೂರ ಶಾಲೆ ಉಳಿಸಿಕೊಡುವ ಹೊಣೆ ಇಲಾಖೆ ಮೇಲಿದೆ ಎಂದು ವಿದ್ಯಾಭಿಮಾನಿಗಳು ವಿಜಯವಾಣಿ ಜತೆ ಬೇಸರ ಹಂಚಿಕೊಂಡಿದ್ದಾರೆ.

ಸಿದ್ದಾಪುರ ಸರ್ಕಾರಿ ಶಾಲೆಯಲ್ಲಿ ಕೊಳವೆ ಬಾವಿ ಕೊರೆಯಲು ಮಂಜೂರಾತಿ ಸಿಕ್ಕಿದೆ. ಅಗ್ರಿಮೆಂಟ್ ಮಾಡಿ ಕೊಳವೆ ಬಾವಿ ಕೊರೆದರೆ ಸ್ಥಳೀಯ ಗ್ರಾಪಂ ಪಿಡಿಒ ಹಣ ನೀಡುತ್ತಾರೆ. ಅನುದಾನದ ಕೊರತೆಯೂ ಇಲ್ಲ. ಸಿದ್ದಾಪುರ ಕೊಳವೆ ಬಾವಿ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಲಾಗುತ್ತದೆ.-ಪ್ರಸನ್ನ ಎಚ್. ಮುಖ್ಯಕಾರ್ಯನಿರ್ವಹಣಾಧಿಕಾರಿ, ಜಿಪಂ ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net