ತ್ರಾಸಿಯಲ್ಲಿಲ್ಲ ವ್ಯವಸ್ಥಿತ ಚರಂಡಿ

Thrasi Junction
ರಾಷ್ಟ್ರೀಯ ಹೆದ್ದಾರಿ-66ರ ತ್ರಾಸಿ ಜಂಕ್ಷನ್‌ನಲ್ಲಿ ಮಳೆ ನೀರು ರಾಷ್ಟ್ರೀಯ ಹೆದ್ದಾರಿ ಮೇಲೆ ಹರಿಯುತ್ತಿದೆ.
Published on

ಗಂಗೊಳ್ಳಿ: ಪ್ರಮುಖ ಪ್ರವಾಸಿ ತಾಣವಾಗಿರುವ ತ್ರಾಸಿ ಜಂಕ್ಷನ್‌ನಲ್ಲಿ ಅಪೂರ್ಣ ಮತ್ತು ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ-66 ಚತುಷ್ಪಥ ರಸ್ತೆ ಕಾಮಗಾರಿಯಿಂದ ಸ್ಥಳೀಯರು ಹಾಗೂ ಪ್ರಯಾಣಿಕರು ಇನ್ನೂ ತೊಂದರೆ ಅನುಭವಿಸುತ್ತಿದ್ದಾರೆ.

ತ್ರಾಸಿ ಜಂಕ್ಷನ್‌ನಲ್ಲಿ ಗಂಗೊಳ್ಳಿಯಿಂದ ಬರುವ ಎರಡು ಸೀಳುದಾರಿಗಳು ದಕ್ಷಿಣದಲ್ಲಿ ಮತ್ತು ಹಳೇ ಹೆದ್ದಾರಿ ಉತ್ತರದಲ್ಲಿ ಹೆದ್ದಾರಿಯನ್ನು ಸೇರಿಕೊಳ್ಳುತ್ತವೆ. ಅದಕ್ಕಾಗಿ ಇಲ್ಲಿ ‘ಯು’ ತಿರುವು ನೀಡಲಾಗಿದೆ. ಆದರೆ ಇಕ್ಕೆಲಗಳಲ್ಲಿ ಮಳೆ ನೀರು ಹರಿದುಹೋಗಲು ಚರಂಡಿ ರಚಿಸಿಲ್ಲ. ಹೆದ್ದಾರಿಯ ಪೂರ್ವದಲ್ಲಿ ಎತ್ತರದ ಸ್ಥಳವಿದೆ. ಇಲ್ಲಿಂದ ಇಳಿದು ಹೆದ್ದಾರಿಗೆ ಬರುವ ಮಳೆನೀರು ಮತ್ತು ಹೆದ್ದಾರಿಯ ಮೇಲೆ ಹರಿದು ಬರುವ ಮಳೆನೀರು ಸೇರಿಕೊಂಡು ಹೆದ್ದಾರಿಯ ಮೇಲೆ ಪ್ರವಾಹದಂಥ ಸ್ಥಿತಿಯನ್ನು ಸೃಷ್ಟಿಸುತ್ತಿದೆ. ಇಲ್ಲಿ ಹೆದ್ದಾರಿಗೆ ಚರಂಡಿ ನಿರ್ಮಿಸದಿರುವುದರ ದುಷ್ಪರಿಣಾಮವನ್ನು ಪ್ರಸಕ್ತ ವರ್ಷದ ಮೊದಲ ಮಳೆಯ ವೇಳೆ ಸ್ಥಳೀಯರು, ವಾಹನ ಚಾಲಕರು ಅನುಭವಿಸಿದ್ದಾರೆ.

ತ್ರಾಸಿ ಜಂಕ್ಷನ್‌ನಲ್ಲಿ ಪ್ರತಿನಿತ್ಯ ನೂರಾರು ಪ್ರಯಾಣಿಕರು ದೂರದ ಊರುಗಳಿಗೆ ಪ್ರಯಾಣ ಬೆಳೆಸುತ್ತಾರೆ. ತ್ರಾಸಿ ಜಂಕ್ಷನ್ ಸಮೀಪ ರಿಕ್ಷಾ ನಿಲ್ದಾಣ ಕೂಡ ಇದೆ. ಕುಂದಾಪುರ, ಬೈಂದೂರು ಮತ್ತು ಗಂಗೊಳ್ಳಿ ಕಡೆಗೆ ಹೋಗುವ ಪ್ರಯಾಣಿಕರು ಇಲ್ಲಿ ಹೆದ್ದಾರಿ ಅಂಚಿನಲ್ಲಿ ನಿಂತು ಬಸ್‌ಗಳಿಗೆ ಕಾಯುತ್ತಾರೆ. ಅವರಿಗೆ ರಸ್ತೆ ದಾಟುವುದು, ನಿಲ್ಲುವುದು ಸಾಧ್ಯವಾಗುವುದಿಲ್ಲ. ವಾಹನಗಳು ಮಳೆ ನೀರನ್ನು ದೂರದವರೆಗೂ ಚಿಮ್ಮಿಸುತ್ತ ಚಲಿಸುತ್ತವೆ. ಇನ್ನೊಂದೆಡೆ ಅಸಮರ್ಪಕ ಕಾಮಗಾರಿಯಿಂದಾಗಿ ರಸ್ತೆ ಬದಿ ಹಾಕಲಾದ ಮಣ್ಣು ನೀರಿನ ರಭಸಕ್ಕೆ ಕೊಚ್ಚಿ ಹೋಗಲಾರಂಭಿಸಿದೆ.

ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ನಿರ್ಮಾಣದ ಹಂತದಲ್ಲೇ ಸ್ಥಳೀಯರು ಇಲ್ಲಿ ಉಂಟಾಗುವ ತೊಂದರೆಯನ್ನು ಮುಂದಾಗಿ ಕಂಡು ಗುತ್ತಿಗೆದಾರರ ಮತ್ತು ಇಂಜಿನಿಯರ್‌ಗಳ ಗಮನ ಸೆಳೆದಿದ್ದರು. ಆದರೂ ಸ್ಥಳೀಯ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಈ ಬಾರಿಯ ಪ್ರಥಮ ಮಳೆಗೆ ರಾಷ್ಟ್ರೀಯ ಹೆದ್ದಾರಿಯ ನಿಜ ಬಣ್ಣ ಮತ್ತೊಮ್ಮೆ ಬಯಲಾಗಿದ್ದು, ಮಳೆಗಾಲದಲ್ಲಿ ವಾಹನ ಸವಾರರು ಮತ್ತು ಪ್ರಯಾಣಿಕರು ತೊಂದರೆ ಅನುಭವಿಸುವುದು ಗ್ಯಾರಂಟಿ.

ರಾಷ್ಟ್ರೀಯ ಹೆದ್ದಾರಿ 66 ಚತುಷ್ಪಥ ನಿರ್ಮಾಣದ ಹಂತದಲ್ಲೇ ಸ್ಥಳೀಯರು ಇಲ್ಲಿ ಉಂಟಾಗುವ ತೊಂದರೆಯನ್ನು ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಶಾಸಕರ ಗಮನಕ್ಕೆ ತಂದಿದ್ದರು. ಆದರೂ ಸ್ಥಳೀಯ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಹೆದ್ದಾರಿಗೆ ಚರಂಡಿ ನಿರ್ಮಿಸದಿರುವುದರಿಂದ ಬಹಳಷ್ಟು ತೊಂದರೆಗಳಾಗುತ್ತಿದ್ದು, ಭಾರಿ ಮಳೆ ಪ್ರಾರಂಭವಾಗುವುದರ ಒಳಗಾಗಿ ಈ ಸಮಸ್ಯೆ ಪರಿಹರಿಸಬೇಕು.-ಸುರೇಶ, ಛಾಯಾಗ್ರಾಹಕ, ತ್ರಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net