ಸರ್ಕಾರಿ ಹಾಸ್ಟೆಲ್​ಗಳಲ್ಲಿ ಸುರಕ್ಷತೆ, ಸ್ವಚ್ಛತೆಗೆ ಒತ್ತು ಕೊಡಿ

Adc_Thippeswamy
Published on

ತುಮಕೂರು: ಎಲ್ಲಾ ಸರ್ಕಾರಿ ಹಾಸ್ಟೆಲ್​ಗಳ ವಾರ್ಡನ್​ಗಳು ಕೇಂದ್ರ ಸ್ಥಾನದಲ್ಲಿದ್ದು, ಯಾವುದೇ ಸಮಸ್ಯೆಗಳು ತಲೆದೋರದಂತೆ ಎಚ್ಚರಿಕೆವಹಿಸುವಂತೆ ಅಪರ ಜಿಲ್ಲಾಧಿಕಾರಿ ಹಾಗೂ ತುಮಕೂರು ತಾಲೂಕು ವಿದ್ಯಾರ್ಥಿ ನಿಲಯಗಳ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್​.ತಿಪ್ಪೇಸ್ವಾಮಿ ಖಡಕ್​ ಆದೇಶ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್​ ಸಭಾಂಗಣದಲ್ಲಿ ಮಂಗಳವಾರ ಮೆಟ್ರಿಕ್​ ಪೂರ್ವ ಮತ್ತು ಮೆಟ್ರಿಕ್​ ನಂತರದ ವಿದ್ಯಾರ್ಥಿನಿಲಯ ಪಾಲಕರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿನಿಲಯಗಳಲ್ಲಿ ಮೂಲಭೂತ ಸೌಕರ್ಯ ಒದಗಿಸುವುದರ ಜತೆಗೆ ಸುರಕ್ಷತೆ ಮತ್ತು ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ವಾರ್ಡನ್​ಗಳು ಯಾವುದೇ ಸಬೂಬು ಹೇಳದಂತೆ ತಾಕೀತು ಮಾಡಿದರು.

ಮೆನುಚಾರ್ಟ್​ ಕಡ್ಡಾಯ: ಸರ್ಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ಕಡ್ಡಾಯವಾಗಿ ಮೆನು ಚಾರ್ಟ್​ಗಳನ್ನು ಪ್ರದರ್ಶಿಸಬೇಕು. ಅಲ್ಲದೆ, ಮೆನು ಚಾರ್ಟ್​ನಲ್ಲಿರುವಂತೆ ಪ್ರತಿನಿತ್ಯ ಉಪಹಾರ, ಭೋಜನ ವ್ಯವಸ್ಥೆ ಮಾಡಬೇಕು ಎಂದು ತಿಪ್ಪೇಸ್ವಾಮಿ ಸೂಚನೆ ನೀಡಿದರು.

ಗುಣಮಟ್ಟದ ಆಹಾರ, ಗ್ರಂಥಾಲಯ, ಕ್ರೀಡಾಕಿಟ್​, ಶೌಚಾಲಯ, ವಿದ್ಯುತ್​ ಸಂಪರ್ಕ, ಸಮವಸ್ತ್ರ, ಸಿಸಿ ಕ್ಯಾಮರಾ, ಕಂಪ್ಯೂಟರ್​, ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು. ತಾಲೂಕು ಮಟ್ಟದ ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿ ನಡೆಯುತ್ತಿರುವ ವಿದ್ಯಾರ್ಥಿ ನಿಲಯಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲಿಸಲಾಗುವುದು. ಈ ಸಂದರ್ಭದಲ್ಲಿ ಮೇಲ್ವಿಚಾರಕರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಹಾಜರಿರುವಂತೆ ನಿರ್ದೇಶಿಸಿದರು.

ಸಭೆಯಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ವಿ.ಎಸ್​. ಶಿವಣ್ಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ರಂಗಸ್ವಾಮಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ತಿಪ್ಪೇಸ್ವಾಮಿ ಸೇರಿದಂತೆ ತಾಲೂಕಿನ ವಿವಿಧ ವಿದ್ಯಾರ್ಥಿ ನಿಲಯಗಳ ಪಾಲಕರು ಉಪಸ್ಥಿತರಿದ್ದರು.

ಹೆಣ್ಣುಮಕ್ಕಳಿಗೆ ಸ್ಯಾನಿಟರಿ ನ್ಯಾಪ್​ಕಿನ್​ ಒದಗಿಸಿ

ಬಾಲಕಿಯರ ಹಾಸ್ಟೆಲ್​ಗಳಲ್ಲಿ ಸ್ಯಾನಿಟರಿ ನ್ಯಾಪ್​ಕಿನ್​ ನೀಡುವುದು ಕಡ್ಡಾಯ. ಪ್ರತಿ ತಿಂಗಳು ವಿದ್ಯಾರ್ಥಿನಿಯರಿಗೆ ಒದಗಿಸಬೇಕು. ತಿಂಗಳಿಗೊಮ್ಮೆ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಬೇಕು. ನಿಲಯಗಳಲ್ಲಿ ಯಾವುದಾದರು ಸಮಸ್ಯೆಗಳಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು. ಇನ್ನೂ ವಿದ್ಯಾರ್ಥಿ ನಿಲಯಗಳ ಒಳಾಂಗಣ ಮತ್ತು ಹೊರಾಂಗಣದಲ್ಲಿ ಶುಚಿತ್ವ ಕಾಪಾಡುವಂತೆ ಡಾ.ಎನ್​.ತಿಪ್ಪೇಸ್ವಾಮಿ ಎಚ್ಚರಿಕೆ ಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net