ಗೌರಿ-ಗಣೇಶ ಮೂರ್ತಿ ಶೋಭಾಯಾತ್ರೆ

29ss1ganesamurthy
Published on

ಶನಿವಾರಸಂತೆ: ಗಣೇಶ ಹಬ್ಬದ ಪ್ರಯುಕ್ತ ಶನಿವಾರಸಂತೆ ತ್ಯಾಗರಾಜ ಕಾಲನಿಯ ವಿಜಯ ವಿನಾಯಕ ಯುವಕ ಸಂಘದ ವತಿಯಿಂದ ಶ್ರೀ ವಿಜಯ ವಿನಾಯಕ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ-ಗಣೇಶಮೂರ್ತಿಯನ್ನು ವಿವಿಧ ಕಲಾತಂಡಗಳ ಅದ್ದೂರಿ ಮೆರವಣಿಗೆಯೊಂದಿಗೆ ಶನಿವಾರ ವಿಸರ್ಜಿಸಲಾಯಿತು.


ಶ್ರೀವಿಜಯ ವಿನಾಯಕ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ವಿಶೇಷ ಪೂಜೆ, ಹೋಮ ಹವನ ನಡೆಸಲಾಯಿತು. ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗದೊಂದಿಗೆ ಪೂಜಾ ಕಾರ್ಯಕ್ರಮವನ್ನು ಸಂಪನ್ನಗೊಳಿಸಲಾಯಿತು. ಈ ಸಂದರ್ಭ ನೂರಾರು ಭಕ್ತರು ಪಾಲ್ಗೊಂಡಿದ್ದರು. ಗಣೇಶಮೂರ್ತಿ ವಿಸರ್ಜನಾ ಕಾರ್ಯಕ್ರಮದ ಅಂಗವಾಗಿ ದೇವಸ್ಥಾನ ಸಮಿತಿ ಮತ್ತು ವಿಜಯ ವಿನಾಯಕ ಸೇವಾ ಸಂಘದ ವತಿಯಿಂದ ಮಧ್ಯಾಹ್ನದಿಂದ ಸಂಜೆಯ ವರೆಗೂ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.


ಮಡಿಕೇರಿ ದಸರಾದಲ್ಲಿ ನಡೆಸಲಾಗುವ ವಿವಿಧ ಮಂಟಪಗಳ ಶೋಭಾಯಾತ್ರೆ ಮಾದರಿಯಲ್ಲಿ ಗೌರಿ-ಗಣೇಶನ ವಿಸರ್ಜನಾ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಅಲಂಕರಿಸಿದ್ದ ವಾಹನದಲ್ಲಿ ಗೌರಿ-ಗಣೇಶಮೂರ್ತಿಯನ್ನು ಕೂರಿಸಲಾಗಿತ್ತು. ಗಣೇಶನ ವಿವಿಧ ಅವತಾರದ ಬೃಹತ್ ಮಾದರಿಗಳನ್ನು ಪ್ರತ್ಯೇಕ ವಾಹನಗಳಲ್ಲಿ ಅಳವಡಿಸಿ ಬಗೆಬಗೆ ಅಲಂಕಾರ, ಲೇಸರ್ ಬೆಳಕಿನಿಂದ ಮಡಿಕೇರಿ ದಸರಾ ಮಂಟಪಗಳಂತೆ ಕಂಗೊಳಿಸುತ್ತಿತ್ತು.
ಶೋಭಾಯಾತ್ರೆ ಸಂದರ್ಭ ಡಿಜೆ, ಲೇಸರ್ ಷೋನೊಂದಿಗೆ ಕೀಲುಕುದುರೆ, ಗೊಂಬೆಕುಣಿತ, ಡೊಳ್ಳು ಕುಣಿತ, ಸುಗ್ಗಿ ಕುಣಿತ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ನಡೆಸಲಾಯಿತು.

ತ್ಯಾಗರಾಜ ಕಾಲನಿಯ ವಿಜಯ ವಿನಾಯಕ ದೇವಸ್ಥಾನದಿಂದ ಹೊರಟ ಶೋಭಾಯಾತ್ರೆಯು ಕೆಆರ್‌ಸಿ ವೃತ್ತ, ಮುಖ್ಯರಸ್ತೆ, ಮಧ್ಯಪೇಟೆ, ಚಂದ್ರಮೌಳೇಶ್ವರ ಗಣಪತಿ ದೇವಸ್ಥಾನ ಮೂಲಕ ಬೈಪಾಸ್ ರಸ್ತೆ ಮೂಲಕ ಚಂಗಡಹಳ್ಳಿ ರಸ್ತೆ ಮೂಲಕವಾಗಿ ಕಾಜೂರು ಗ್ರಾಮದ ಹೊಳೆಯಲ್ಲಿ ರಾತ್ರಿ 11 ಗಂಟೆಗೆ ಗೌರಿ-ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು. ಮೆರವಣಿಗೆಯಲ್ಲಿ ಪಟ್ಟಣ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಿಂದ 10 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net