ಗೂಗಲ್ ಸಮೀಕ್ಷೆ ಎಡವಟ್ಟು!

water tap
Published on

ರಾಜೇಂದ್ರ ಶಿಂಗನಮನೆ ಶಿರಸಿ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷಿ ಜಲಜೀವನ ಮಿಷನ್ ಯೋಜನೆ ಅನುಷ್ಠಾನಕ್ಕೆ ಖಾಸಗಿ ಸಂಸ್ಥೆಯಿಂದ ನಡೆಸಿದ ಮನೆಗಳ ಸಮೀಕ್ಷೆಯಲ್ಲಿ ಎಡವಟ್ಟಾಗಿದೆ.

2024ರ ಒಳಗೆ ಗ್ರಾಮಾಂತರ ಪ್ರದೇಶದ ಪ್ರತಿಮನೆಗೂ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರು ನೀಡಬೇಕೆಂಬ ಯೋಜನೆ ಇದಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 200ಕ್ಕೂ ಹೆಚ್ಚು ಗ್ರಾಮಗಳಲ್ಲಿ 332 ಕಾಮಗಾರಿಗಳನ್ನು ಯೋಜನೆಯಡಿ ಆಯ್ಕೆ ಮಾಡಲಾಗಿದೆ. ಮನೆಮನೆ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಆದರೆ, ಈ ಸಮೀಕ್ಷೆ ನಡೆಸಿರುವುದು ಗೂಗಲ್ ಮ್ಯಾಪ್ ಮೂಲಕ. ಸಮೀಕ್ಷೆ ಕುರಿತು ಈಗ ಸಾರ್ವಜನಿಕ ವಲಯದಲ್ಲಿ ಅಪಸ್ವರ ಕೇಳಿ ಬರುತ್ತಿದೆ.

ಗೂಗಲ್​ನಲ್ಲಿ ಸೂರಿನ ಲೆಕ್ಕ: ಒಬ್ಬ ವ್ಯಕ್ತಿಗೆ ಕನಿಷ್ಠ 55 ಲೀಟರ್​ನಂತೆ 365 ದಿನವೂ ನೀರು ಒದಗಿಸುವುದು ಯೋಜನೆಯ ಉದ್ದೇಶವಾಗಿದೆ. ಯೋಜನೆಯ ಶೇ. 37.5 ಕೇಂದ್ರದ ಪಾಲಾಗಿದ್ದು, ಶೇ. 37 ರಾಜ್ಯ ಸರ್ಕಾರ ನೀಡಲಿದೆ. ಶೇ. 15ರಷ್ಟನ್ನು ಗ್ರಾಮ ಪಂಚಾಯಿತಿ ಭರಣ ಮಾಡಬೇಕಿದ್ದು, ಇನ್ನುಳಿದ ಶೇ. 10ರಷ್ಟನ್ನು ಫಲಾನುಭವಿ ನೀಡಬೇಕು. ಈ ಹಿನ್ನೆಲೆಯಲ್ಲಿ ಮನೆಮನೆ ಸಮೀಕ್ಷೆ ನಡೆಸುವಂತೆ ಪುಣೆ ಮೂಲದ ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಲಾಗಿತ್ತು. ಆದರೆ, ಖಾಸಗಿ ಸಂಸ್ಥೆಯ ಸಿಬ್ಬಂದಿ ಮನೆಮನೆಗೆ ಭೇಟಿ ನೀಡದೆ, ಗೂಗಲ್ ಮ್ಯಾಪ್ ಮೂಲಕ ಗ್ರಾಮದಲ್ಲಿ ಕಾಣುವ ಪ್ರತಿ ಸೂರಿನ ಲೆಕ್ಕ ಹಾಕಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಇದರಲ್ಲಿ ಮನೆಗಳ ಜತೆಗೆ ಕೊಟ್ಟಿಗೆ, ಬಚ್ಚಲುಮನೆ, ಹುಲ್ಲಿನಮನೆ, ವಾಹನ ಶೆಡ್​ಗಳನ್ನೂ ಮನೆ ಎಂದೇ ವರದಿಯಲ್ಲಿ ದಾಖಲಿಸಲಾಗಿದೆ. ಇದರಿಂದ ಗ್ರಾಮದಲ್ಲಿರುವ ವಾಸ್ತವಿಕ ಮನೆಗಳ ಸಂಖ್ಯೆ ಹಾಗೂ ಸಂಸ್ಥೆ ನೀಡಿದ ಮಾಹಿತಿ ನಡುವೆ ಅಜಗಜಾಂತರ ವ್ಯತ್ಯಾಸ ಕಾಣುತ್ತಿದೆ.

ಇಂಜಿನಿಯರ್​ಗಳ ಅನುಮೋದನೆ: ತಾಲೂಕಿನ ಮೇಲಿನ ಓಣಿಕೇರಿ ಗ್ರಾಮವನ್ನು ಯೋಜನೆಯಡಿ ಗುರುತಿಸಲಾಗಿದ್ದು, ಇಲ್ಲಿನ ಮನೆಗಳಿಗೆ ನೀರಿನ ಸೌಲಭ್ಯ ಕಲ್ಪಿಸಲು 25 ಲಕ್ಷ ರೂ. ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಈ ಗ್ರಾಮದಲ್ಲಿ ವಾಸ್ತವಿಕವಾಗಿ 48 ಮನೆಗಳಿವೆ. ಆದರೆ, ಸಮೀಕ್ಷೆ ಪ್ರಕಾರ 67 ಮನೆಗಳನ್ನು ತೋರಿಸಲಾಗಿದೆ. ಇದೇ ರೀತಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಗೊಂದಲ ಸೃಷ್ಟಿಯಾಗಿದೆ. ದುರಂತದ ಸಂಗತಿ ಏನೆಂದರೆ, ಖಾಸಗಿ ಸಂಸ್ಥೆ ಮಾಡಿದ ಗೂಗಲ್ ಸಮೀಕ್ಷೆಯನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಂಜಿನಿಯರ್​ಗಳು ಅನುಮೋದಿಸಿದ್ದಾರೆ. ಜತೆಗೆ, ಖಾಸಗಿ ಸಂಸ್ಥೆ ಜತೆ ಸರ್ಕಾರದ ತಂತ್ರಾಂಶವನ್ನೂ ಆಧರಿಸಿ ಸಮೀಕ್ಷೆಗೆ ಅನುಮೋದನೆ ನೀಡಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಸಮಜಾಯಿಷಿ ನೀಡುತ್ತಿದ್ದಾರೆ.

ಆಗುವ ಸಮಸ್ಯೆಗಳು

ಗ್ರಾಮೀಣ ಪ್ರದೇಶದಲ್ಲಿ ವಿಭಜಿತ ಕುಟುಂಬಗಳ ಸಂಖ್ಯೆ ಹೆಚ್ಚಿದೆ. ಗೂಗಲ್ ಮ್ಯಾಪ್ ಬಳಸಿ ಸಮೀಕ್ಷೆ ನಡೆಸಿದರೆ ಇಂಥ ಮನೆಗಳ ಸಂಖ್ಯೆ ಕೈ ತಪ್ಪುತ್ತದೆ.

ಕೊಟ್ಟಿಗೆ, ವಾಹನ ಶೆಡ್ ನಾಳೆ ಇರದಿದ್ದರೆ ಸಮೀಕ್ಷೆ ಪ್ರಕಾರ ಆ ಸರ್ವೆ ನಂಬರಿನಲ್ಲಿರುವ ಮನೆಯೇ ಇಲ್ಲವೆಂದಾಗುತ್ತದೆ. ಆಗ ನಿಜವಾದ ಫಲಾನುಭವಿಗೆ ಅನ್ಯಾಯವಾಗುತ್ತದೆ.

2052ರ ಜನಸಂಖ್ಯೆ ಬೆಳವಣಿಗೆ ಅಂದಾಜಿಸಿ ಜಲಜೀವನ ಮಿಷನ್ ಯೋಜನೆ ಅನುಷ್ಠಾನ ಮಾಡಲಾಗಿದೆ. ಸದ್ಯ ಇರುವ ಪ್ರತಿ ಮನೆಗೂ ನಲ್ಲಿ ನೀರು ಕೊಡಲು ಯೋಜನೆ ರೂಪಿಸಲಾಗಿದೆ. ಮನೆಮನೆ ಸಮೀಕ್ಷೆಯಲ್ಲಿ ವ್ಯತ್ಯಾಸವಾಗಿದೆ ಎಂಬ ದೂರಿದ್ದರೆ ಪರಿಶೀಲಿಸಲಾಗುವುದು. | ಪ್ರಿಯಾಂಗಾ ಎಂ, ಜಿಪಂ ಸಿಇಒ

ಯೋಜನೆ ಅನುಷ್ಠಾನ ಮಾಡುವಾಗ ಮನೆಮನೆಗೆ ಭೇಟಿ ಮಾಡಿ ಸರ್ವೆ ನಡೆಸಬೇಕು. ಹಾಗಾದಾಗ ಮಾತ್ರ ನೈಜ ಚಿತ್ರಣ ಸಿಗುತ್ತದೆ. ಪ್ರಸ್ತುತ ನಡೆದ ಸಮೀಕ್ಷೆ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಸಂಸ್ಥೆ ಎಲ್ಲಿದೆಯೋ ಅಲ್ಲಿಂದಲೇ ಗೂಗಲ್ ಮಾಹಿತಿ ಆಧರಿಸಿ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದೆ. ಇದನ್ನು ಸರಿಪಡಿಸದಿದ್ದರೆ ಯೋಜನೆ ಹಳ್ಳ ಹಿಡಿಯುವ ಸಾಧ್ಯತೆಯಿದೆ. | ರವಿ ಹಳದೋಟ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net