

ಯಲಬುರ್ಗಾ: ವಿದ್ಯಾರ್ಥಿಗಳು ಜೀವನದಲ್ಲಿ ಸಕಾರಾತ್ಮಕ ಚಿಂತನೆ ಅಳವಡಿಸಿಕೊಳ್ಳಬೇಕು ಎಂದು ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಹೇಳಿದರು.
ಇದನ್ನೂ ಓದಿ: ಜೀವನದಿ ಕಾವೇರಿ ಒತ್ತುವರಿ ತೆರವಿಗೆ ಒತ್ತಾಯ
ತಾಲೂಕಿನ ಬೋದೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಪ್ರೇಮ ತಂಡದಿಂದ ಭಾನುವಾರ ಹಮ್ಮಿಕೊಂಡಿದ್ದ ಶಾಲೆಗೆ ಬಣ್ಣ ಹಚ್ಚುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿತ್ಯದ ಬದುಕಿನಲ್ಲಿ ಒಳ್ಳೆಯ ಕಾರ್ಯಗಳತ್ತ ಸಾಗಿದಾಗ ಜೀವನಕ್ಕೆ ಅರ್ಥ ಬರುತ್ತದೆ. ಸಸಿ ಬೆಳೆಸುವ ಮೂಲಕ ಸಾಲು ಮರದ ತಿಮ್ಮಕ್ಕ ನಾಡಿಗೆ ಹೆಸರಾಗಿದ್ದಾರೆ ಆದರೆ, ಗ್ರಾಮೀಣ ಭಾಗದಲ್ಲಿ ಅದೆಷ್ಟೋ ಶಾಲೆಗಳಿಗೆ ಸುಣ್ಣ ಬಣ್ಣ ಕಾಣದ ಪರಿಸ್ಥಿತಿ ನಿರ್ಮಾಣವಾಗಿದೆ.
ವಾರಕ್ಕೊಮ್ಮೆ ಶಾಲೆಗೆ ಭೇಟಿ ನೀಡುವ ಮೂಲಕ ಮಕ್ಕಳಿಗೆ ಉತ್ತಮ ಪರಿಸರ, ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವ ಸಲುವಾಗಿ ಈಗಾಗಲೇ ಜಿಲ್ಲೆ ಸೇರಿ ಶಿವಮೊಗ್ಗ, ಧಾರವಾಡ, ಬಾಗಲಕೋಟೆ ಇತರ ಕಡೆ 222ಕ್ಕೂ ಅಧಿಕ ಶಾಲೆಯಲ್ಲಿ ಸಸಿ ನೆಡುವುದು, ಬಣ್ಣ ಹಚ್ಚುವ ಕಾರ್ಯಗಳಿಗೆ ಅಣಿಯಾಗಿದೆ. ಇಂತಹ ಕೆಲಸ ಮಾಡುವ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕೈಜೋಡಿಸಲಾಗುತ್ತಿದೆ ಎಂದರು.
ತಾವರಗೇರಾ ಗ್ರಾಪಂ ಪಿಡಿಒ ಯಮನೂರಪ್ಪ ಕಬ್ಬಣ್ಣನವರ್ ಮಾತನಾಡಿದರು. ಮುಖ್ಯಶಿಕ್ಷಕ ಧರ್ಮಪ್ಪ ಬಿಂಗಿ, ಎಸ್ಡಿಎಂಸಿ ಅಧ್ಯಕ್ಷ ಶಿವಶರಣಪ್ಪ ಕುರ್ನಾಳ, ಶಿಕ್ಷಕ ಪ್ರಭಾಕರ್, ಪರಿಸರ ಪ್ರೇಮ ತಂಡದ ಜಿಲ್ಲಾಧ್ಯಕ್ಷ ರಾಮಣ್ಣ ಬಂಡಿಹಾಳ, ಗ್ರಾಪಂ ಕರವಸೂಲಿಗಾರ ರಾಮಣ್ಣ ಹೊಟ್ಟಿ, ಪ್ರಮುಖರಾದ ಅಜರುದ್ದೀನ್ ಕುಷ್ಟಗಿ ಇತರರಿದ್ದರು.