ಜೀವನದಿ ಕಾವೇರಿ ಒತ್ತುವರಿ ತೆರವಿಗೆ ಒತ್ತಾಯ

Urge to vacate the encroachment of Kaveri
Published on

ಮಡಿಕೇರಿ:

ಜೀವನದಿ ಕಾವೇರಿಯ ಒತ್ತುವರಿ ಸರ್ವೆ ಕಾರ್ಯ ಮತ್ತು ಮಾಲಿನ್ಯ ತಡೆಗಟ್ಟಲು ಜಿಲ್ಲಾಡಳಿತ ವಿಫಲವಾಗಿದ್ದು ನದಿ ಸಂರಕ್ಷಣೆಗಾಗಿ ಕಾನೂನು ಸೇರಿದಂತೆ ಸಾಧ್ಯವಿರುವ ಎಲ್ಲಾ ರೀತಿಯ ಹೋರಾಟಗಳನ್ನು ನಡೆಸಲಾಗುವುದು ಎಂದು ಪರಿಸರ ಮತ್ತು ಆರೋಗ್ಯ ಪ್ರತಿಷ್ಠಾನದ ಕಾರ್ಯದರ್ಶಿ ಕರ್ನಲ್ ಸಿ.ಪಿ. ಮುತ್ತಣ್ಣ ಎಚ್ಚರಿಸಿದ್ದಾರೆ. ಕೊಡಗಿನ ತಲಕಾವೇರಿಯಲ್ಲಿ ಹುಟ್ಟುವ ಕಾವೇರಿ ನದಿ 810 ಕಿಮೀ ದೂರ ಹರಿದು ತಮಿಳುನಾಡಿನಲ್ಲಿ ಬಂಗಾಳ ಕೊಲ್ಲಿ ಸೇರುತ್ತದೆ. ಆದರೆ ಭಾಗಮಂಡಲದಲ್ಲೇ ಕಾವೇರಿ ನದಿ ಮಲೀನ ಆಗಿರುತ್ತದೆ. 2023ರ ಆಕ್ಟೋಬರ್‌ಲ್ಲಿ ಕುಶಾಲನಗರದಲ್ಲೇ ಕಾವೇರಿ ನದಿ ನೀರು ಸಿ ದರ್ಜೆ ತಲುಪಿತ್ತು. ಇದು ಪ್ರಾಣಿಗಳು ಕೂಡ ಕುಡಿಯಲು ಯೋಗ್ಯವಲ್ಲದಷ್ಟು ಪ್ರಮಾಣದಲ್ಲಿ ಮಲೀನ ಆಗಿರುವುದನ್ನು ತೋರಿಸುತ್ತದೆ. ಈ ನೀರು ಮೀಸಲು ಅರಣ್ಯ, ವನ್ಯ ಜೀವಿ ವಲಯದ ಮೂಲಕವೂ ಹರಿಯುವುದರಿಂದ ಮನುಷ್ಯರು ಮಾತ್ರವಲ್ಲದೆ ಪ್ರಾಣಿಗಳ ಮೇಲೂ ದುಷ್ಪರಿಣಾಮ ಆಗಲಿದೆ ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.

ಮಡಿಕೇರಿ ಮತ್ತು ಕುಶಾಲನಗರದಲ್ಲಿ ಎಸ್‌ಟಿಪಿ ಮತ್ತು ಒಳಚರಂಡಿ ಕಾಮಗಾರಿಗಳು ಇನ್ನೂ ಪೂರ್ಣಗೊಳಿಸದೆ ಸರ್ಕಾರದ ಹಣ ಪೋಲು ಮಾಡಲಾಗುತ್ತಿದೆ. ಕಾವೇರಿ ನದಿ ಮಾಲಿನ್ಯ ಹೆಚ್ಚಳಕ್ಕೆ ಇದು ಕೂಡ ಒಂದು ಕಾರಣವಾಗಿದೆ. ಪೊನ್ನಂಪೇಟೆ ಈಗಾಗಲೇ ಪಟ್ಟಣ ಪಂಚಾಯಿತಿ ಆಗಿದೆ. ಗೋಣಿಕೊಪ್ಪವನ್ನೂ ಪಟ್ಟಣ ಪಂಚಾಯಿತಿಯನ್ನಾಗಿ ಮಾಡಲು ಸಿದ್ಧತೆ ನಡೆದಿದೆ. ಇದರಿಂದಾಗಿ ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತದೆ. ಎಸ್‌ಟಿಪಿ ಮತ್ತು ಯುಜಿಡಿ ಯೋಜನೆಗಳನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಗೂ ತರುವ ಅಗತ್ಯವಿದೆ.

ಹಸಿರು ನ್ಯಾಯಾಧಿಕರಣದ ಆದೇಶದಂತೆ ನದಿಯ ಬಫರ್ ಝೋನ್‌ಗಳಲ್ಲಿ ಕೃಷಿ ಬಿಟ್ಟು ಬೇರೆ ಯಾವುದೇ ಚಟುವಟಿಕೆ ನಡೆಸುವಂತಿಲ್ಲ. ಆದರೆ ಕೊಡಗಿನಲ್ಲಿ ಬಫರ್ ಝೋನ್‌ಗಳ ಒತ್ತುವರಿ ಆಗಿದ್ದು, ಭೂ ಪರಿವರ್ತನೆಯೂ ನಡೆದಿದೆ. ಜಿಲ್ಲೆಯಾದ್ಯಂತ ಕಾವೇರಿ ನದಿ ಜಾಗ ದೊಡ್ಡ ಪ್ರಮಾಣದಲ್ಲಿ ಒತ್ತುವರಿ ಆಗಿದ್ದು, ಇದರ ತೆರವು ಅಥವಾ ಸರ್ವೆ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗುತ್ತಿಲ್ಲ. ಈ ಬಗ್ಗೆ ಸಂಬAಧಿಸಿದವರು ಕ್ರಮ ತೆಗೆದುಕೊಳ್ಳದಿದ್ದರೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದರು.
ವಿರಾಜಪೇಟೆ ನಾಗರಿಕ ಸೇವಾ ಸಮಿತಿ ಪ್ರಮುಖರಾದ ಡಾ. ಐ.ಆರ್. ದುರ್ಗಾಪ್ರಸಾದ್ ಮಾತನಾಡಿ ನದಿ, ತೊರೆ, ಕೆರೆ, ತೋಡುಗಳನ್ನು ರಕ್ಷಿಸುವ ಕೆಲಸ ಆಗಬೇಕು. ವಿರಾಜಪೇಟೆಯಲ್ಲಿ ಮಲೆತಿರಿಕೆ ಬೆಟ್ಟದ ಬುಡದಿಂದ ಪಟ್ಟಣದ ಮಧ್ಯ ಭಾಗಕ್ಕಾಗಿ ಹರಿಯುವ ತೋಡು ಬಹುತೇಕ ಅತಿಕ್ರಮಣವಾಗಿದೆ. ಬೇತ್ರಿಗೆ ಸೇರಲಿರುವ ಈ ತೋಡಿಗೆ ಪಟ್ಟಣದ ತ್ಯಾಜ್ಯವೂ ಸೇರ್ಪಡೆ ಆಗುತ್ತಿದೆ. ಮತ್ತೆ ಇದೇ ನೀರು ಬೇತ್ರಿಯಿಂದ ವಿರಾಜಪೇಟೆಗೆ ಕುಡಿಯುವ ನೀರಿನ ರೂಪದಲ್ಲಿ ಸರಬಾರಾಜು ಆಗುತ್ತದೆ. ಕಾನೂನು ಪ್ರಕಾರ ತೋಡಿನಿಂದ 30 ಮೀ. ತನಕ ಕಟ್ಟಡಗಳು ಇರಬಾರದು. ಆದರೆ ವಿರಾಜಪೇಟೆಯಲ್ಲಿ ಈ ಕಾನೂನು ಗಾಳಿಗೆ ತೂರಲಾಗಿದೆ. ಇಲ್ಲಿನ ಅತಿಕ್ರಮ 7 ದಿನಗಳ ಒಳಗಾಗಿ ತೆರವು ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿ 70 ದಿನಗಳಾದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದರು.

ಕೊಡಗು ರಕ್ಷಣಾ ವೇದಿಕೆ ಪ್ರಮುಖರಾ ಗೋಪಿನಾಥ್ ಮಾತನಾಡಿ ರೆಸಾರ್ಟ್ಗಳಿಂದ ಮಾನವ ತ್ಯಾಜ್ಯ ನೇರವಾಗಿ ನದಿಗೆ ಬಿಡಲಾಗುತ್ತಿದೆ. ನದಿ ಬದಿಯಲ್ಲೇ ರೆಸಾರ್ಟ್, ಹೋಮ್‌ಸ್ಟೇಗಳಿವೆ. ಪ್ರವಾಸೋದ್ಯಮ ಇಲಾಖೆ ಇತ್ತ ಕಡೆ ಗಮನಹರಿಸಬೇಕು. ಮಾಲಿನ್ಯಕ್ಕೆ ಕಡಿವಾಣ ಹಾಕದಿದ್ದರೆ ಅನಾಹುತ ಖಂಡಿತ ಎಂದರು.
ಸೇವ್ ಕಾವೇರಿ ಸಂಘಟನೆ ಸಂಚಾಲಕ ಸರಸು ಸೋಮಣ್ಣ, ಕಾರ್ಯದರ್ಶಿ ಮಾಳೇಟಿರ ಕಾಳಯ್ಯ, ಪ್ರಮುಖರಾದ ಚೇಂದAಡ ಮಿಥುನ್ ಪೊನ್ನಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net