ಕಾರವಾರ ಬಂದ್​ಗೆ ಉತ್ತಮ ಸ್ಪಂದನೆ

16KWR1
Published on

ಕಾರವಾರ: ಟ್ಯಾಗೋರ್ ಕಡಲ ತೀರದಲ್ಲಿ ಅಲೆ ತಡೆಗೋಡೆ ನಿರ್ಮಾಣ ಹಿನ್ನೆಲೆಯಲ್ಲಿ ಇಡೀ ಕಾರವಾರ ಕ್ರೋಧಗೊಂಡಿದೆ.

ಮೀನುಗಾರ ಸಂಘಟನೆಗಳು ನೀಡಿದ್ದ ಬಂದ್ ಕರೆಗೆ ಸಮಸ್ತ ಕಾರವಾರದ ಜನತೆ ಸ್ಪಂದಿಸಿದ್ದು, ಗುರುವಾರ ಶಹರ ಸಂಪೂರ್ಣ ಸ್ತಬ್ಧವಾಗಿತ್ತು.

ಅಂಗಡಿ ಮುಂಗಟ್ಟು, ಹೋಟೆಲ್​ಗಳು ಬೆಳಗ್ಗೆಯಿಂದಲೇ ಬಾಗಿಲು ತೆರೆಯಲಿಲ್ಲ. ಎನ್​ಡಬ್ಲ್ಯುಕೆಎಸ್​ಆರ್​ಟಿಸಿ ಬಸ್​ಗಳು ಅಂಕೋಲಾ ಹಾಗೂ ಗೋವಾ ಗಡಿಯಲ್ಲಿ ನಿಂತವು. ಬೆಳಗ್ಗೆ 10ರ ನಂತರ ನಗರದಲ್ಲಿ ಯಾವುದೇ ಬಸ್​ಗಳು ಓಡಾಡಲಿಲ್ಲ. ಗೋವಾ ಕದಂಬ ಸಾರಿಗೆ ವಾಹನಗಳೂ ಕಾರವಾರದತ್ತ ಸುಳಿಯಲಿಲ್ಲ. ಆಟೋ ರಿಕ್ಷಾ, ಟೆಂಪೊ ಸಂಚಾರ ಸಂಪೂರ್ಣ ಬಂದ್ ಆಗಿತ್ತು.

ಕೆಲವು ಖಾಸಗಿ ಹಾಗೂ ಅನುದಾನಿತ ಶಾಲೆ, ಕಾಲೇಜ್​ಗಳಿಗೆ ರಜೆ ಘೊಷಿಸಲಾಗಿತ್ತು. ಸರ್ಕಾರಿ ಶಾಲೆ, ಕಾಲೇಜ್​ಗಳಿಗೆ ರಜೆ ನೀಡದಿದ್ದರೂ ಮಕ್ಕಳ ಸಂಖ್ಯೆ ಕಡಿಮೆ ಇತ್ತು. ಸರ್ಕಾರಿ ಕಚೇರಿಗಳಿಗೆ ಹೊರ ಊರುಗಳಿಂದ ಆಗಮಿಸುವ ಅಧಿಕಾರಿ, ಸಿಬ್ಬಂದಿ ಬಸ್ ಇಲ್ಲದೆ ಪರದಾಡಿದರು. ಸಾಯಂಕಾಲದ ನಂತರ ಅಂಗಡಿಗಳು ತೆರೆದುಕೊಂಡು ಸಣ್ಣಪುಟ್ಟ ವಹಿವಾಟು ನಡೆದವು. ಸತತ ನಾಲ್ಕನೇ ದಿನ ಮೀನುಗಾರಿಕೆ, ಮಾರುಕಟ್ಟೆ ಇಡೀ ತಾಲೂಕಿನಲ್ಲಿ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಮೀನು ದೊರೆಯದೇ ಮತ್ಸ್ಯ ಪ್ರಿಯ ಕಾರವಾರಿಗರು ಬೇಸರಗೊಂಡಿದ್ದಾರೆ.

ಬೃಹತ್ ಮೆರವಣಿಗೆ: ಕಾರವಾರ ಮೀನುಗಾರರ ಸಂಕಷ್ಟ ಎದುರಿಸಲು ಜಿಲ್ಲೆಯ ಎಲ್ಲೆಡೆ ಬೆಸ್ತರು ಸಾಥ್ ನೀಡಿದ್ದಾರೆ. ಅಂಕೋಲಾ, ಕುಮಟಾ, ಹೊನ್ನಾವರ ಭಾಗದಿಂದಲೂ ವಾಹನಗಳ ಮೂಲಕ ಸಾವಿರಾರು ಮೀನುಗಾರರು ಗುರುವಾರ ನಡೆಸಿದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ವಕೀಲರು, ಪತ್ರಕರ್ತರು, ಕನ್ನಡ ಪರ ಸಂಘಟನೆಗಳು, ಹೀಗೆ ತಾಲೂಕಿನ ಎಲ್ಲ ಸಂಘಟನೆಗಳು ಮೆರವಣಿಗೆಯಲ್ಲಿ ಭಾಗವಹಿಸಿ ಬೆಂಬಲ ನೀಡಿದವು. ರಾಜ್ಯ ರೈತ ಸಂಘದ ಸದಸ್ಯರೂ ಮಂಡ್ಯದಿಂದ ಆಗಮಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು,ವಿಶೇಷವಾಯಿತು. ಯೋಜನೆ ಕೈಬಿಡದಿದ್ದರೆ ಸಾವಿರಾರು ಸಂಖ್ಯೆಯಲ್ಲಿ ಜನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವರು ಎಂದು ರಾಜ್ಯ ರೈತ ಸಂಘದ ಮಂಜೆಗೌಡ ತಿಳಿಸಿದ್ದಾರೆ. ಒಟ್ಟಾರೆ ಎಂಟು ಸಾವಿರಕ್ಕೂ ಅಧಿಕ ಜನರು ಗುರುವಾರ ಪ್ರತಿಭಟನೆ ಮೆರವಣಿಗೆಯಲ್ಲಿ ಪಾಲ್ಗೊಂಡು ನ್ಯಾಯಕ್ಕಾಗಿ ಒತ್ತಾಯಿಸಿದರು. ಕಡಲ ತೀರ ಉಳಿಸಿ ಎಂಬ ಕೂಗು ಮೊಳಗಿಸಿದರು.

ಮಿತ್ರ ಸಮಾಜದಿಂದ ಪ್ರಾರಂಭವಾದ ಪ್ರತಿಭಟನೆ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಅಮದಳ್ಳಿ ಬಂಟ ದೇವರ ಯುವಕ ಸಂಘದ ಸದಸ್ಯರು ಕಡಲ ತೀರ ಉಳಿಸಿ ಎಂಬ ಲಾವಣಿಗಳನ್ನು ಹಾಡಿ ಗಮನ ಸೆಳೆದರು. ಬಿಲ್ಟ್ ಸರ್ಕಲ್ ಬಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಮರು ಪರಿಶೀಲನೆ ಭರವಸೆ: ಬಿಲ್ಟ್ ಸರ್ಕಲ್ ಬಳಿ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ., ಯೋಜನೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಬೆಂಗಳೂರಿಗೆ ಕರೆಸಿ ಮರು ಪರಿಶೀಲನೆ ಮಾಡುವುದಾಗಿ ಮೀನುಗಾರಿಕೆ ಸಚಿವರು ತಿಳಿಸಿದ್ದಾರೆ. ಕಾಮಗಾರಿಗೆ ತಡೆ ನೀಡುವಂತೆ ಮೀನುಗಾರರು ಕೇಳುತ್ತಿದ್ದು, ಅದು ನಮ್ಮ ಹಂತದಲ್ಲಿಲ್ಲ. ಮಾನ್ಯ ಸಚಿವರಿಗೆ ಮನವಿ ಮಾಡಿದ್ದು, ಅವರು ಮೀನುಗಾರರ ಮನವಿಗೆ ಸ್ಪಂದಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಪೊಲೀಸ್ ಭದ್ರತೆ: ಎಸ್​ಪಿ ಶಿವಪ್ರಕಾಶ ದೇವರಾಜು ನೇತೃತ್ವದಲ್ಲಿ 300ರಷ್ಟು ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು ಭದ್ರತೆಯ ವ್ಯವಸ್ಥೆ ನೋಡಿಕೊಂಡರು. 2 ಕೆಎಸ್​ಆರ್​ಪಿ ತುಕಡಿ, 4 ಡಿಎಆರ್ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಜಿಲ್ಲೆಯ ಎಲ್ಲ ಇನ್ಸ್​ಪೆಕ್ಟರ್, ಪಿಎಸ್​ಐಗಳನ್ನು ಕಾರವಾರಕ್ಕೆ ಕರೆಸಿಕೊಳ್ಳಲಾಗಿತ್ತು.

ಖಾಸಗಿಗೆ ಬಂದರು...?: ಈ ಯೋಜನೆಯ ಖಾಸಗಿ, ಸರ್ಕಾರಿ ಸಹಭಾಗಿತ್ವದ ಪಿಪಿಪಿ ಮಾದರಿಯದ್ದಾಗಿದೆ. ಇದರಿಂದ ಬಂದರನ್ನು ಸಂಪೂರ್ಣವಾಗಿ ಖಾಸಗಿಗೆ ಅಂದರೆ ಅದಾನಿಯಂಥ ಕಂಪನಿಗಳಿಗೆ ಹಸ್ತಾಂತರಿಸುವ ಹುನ್ನಾರ ನಡೆದಿದೆ ಎಂದು ಕಡಲ ಜೀವಶಾಸ್ತ್ರಜ್ಞ ಡಾ.ವಿ.ಎನ್.ನಾಯಕ ದೂರಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಯೋಜನೆಯಿಂದ ಮುಂದೆ ಟ್ಯಾಗೋರ್ ಕಡಲ ತೀರದಲ್ಲಿ ತೀವ್ರ ಸ್ವರೂಪದ ಮರಳಿನ ಕೊರೆತ ಉಂಟಾಗಬಹುದು. ಮೀನು ಸಂತತಿ ಕಾರವಾರ ತೀರದಿಂದ ದೂರವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಹೆದ್ದಾರಿ ಸಂಚಾರ ವ್ಯತ್ಯಯ: ಪ್ರತಿಭಟನೆಗೆ ಸಾವಿರಾರು ಜನ ಆಗಮಿಸಿದ್ದರಿಂದ ಗೋವಾ ಗಡಿಯಲ್ಲಿ ಹಾಗೂ ಬಿಣಗಾ ಸಮೀಪವೇ ಬೃಹತ್ ವಾಹನಗಳನ್ನು ತಡೆಯಲಾಗಿತ್ತು. 11ರಿಂದ ಸುಮಾರು 1 ಗಂಟೆಯವರೆಗೆ ಭಾರಿ ವಾಹನಗಳು ಹೆದ್ದಾರಿಯಲ್ಲಿ ಸರದಿಯಲ್ಲಿ ನಿಂತಿದ್ದವು.

ಸಾಮಾಜಿಕ ಜಾಲತಾಣಗಳಲ್ಲಿ ಕ್ಲಾಸ್: ಸಾಗರ ಮಾಲಾ ಯೋಜನೆಯಿಂದ ಕಾರವಾರ ಕಡಲ ತೀರಕ್ಕೆ ಯಾವುದೇ ತೊಂದರೆ ಇಲ್ಲ ಎಂಬ ಶಾಸಕಿ ರೂಪಾಲಿ ನಾಯ್ಕ ಸಾಮಾಜಿಕ ಜಾಲತಾಣದ ಮೂಲಕ ನೀಡಿದ ಹೇಳಿಕೆಗೆ ಜನ ಅಲ್ಲೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಯೋಜನೆಯ ನಕ್ಷೆ, ಕಡಲ ತೀರದಲ್ಲಿ ಕಲ್ಲು ಹಾಕಿರುವ ಚಿತ್ರಗಳನ್ನು ಹಾಕಿ ‘ನೀವು ಸುಳ್ಳು ಭರವಸೆ ನೀಡುತ್ತಿದ್ದೀರಿ. ಜನರ ಎದುರು ಬಂದು ಚರ್ಚೆ ನಡೆಸಿ’ ಎಂದು ಕ್ಷೇತ್ರದ ಮತದಾರರು ಜಾಲತಾಣಗಳಲ್ಲಿ ಶಾಸಕಿಗೆ ಕಮೆಂಟ್ ಮಾಡಿದ್ದಾರೆ. ಮೀನುಗಾರರಿಗೂ ತೊಂದರೆ ಇಲ್ಲ. ಯಾರೋ ಹೇಳಿದ ಸುಳ್ಳು ಮಾತಿಗೆ ಬೆಲೆ ಕೊಡಬೇಡಿ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ರಷ್ಮಿ ಮಹೇಶ್, ಮೆರಿಟೈಮ್ ಬೋರ್ಡ್ ಸಿಇಒ ಉಜ್ವಲಕುಮಾರ ಘೊಷ್ ಅವರ ಜತೆ ಚರ್ಚೆ ಮಾಡಿದ್ದೇನೆ ಎಂದು ರೂಪಾಲಿ ಫೇಸ್​ಬುಕ್​ನಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಕಾರವಾರ ಬಂದರು ಅಭಿವೃದ್ಧಿ ಆತಂಕ ಬೇಡ: ಕಾರವಾರ ಬಂದರು 2ನೇ ಹಂತದ ಅಭಿವೃದ್ಧಿ ಕಾಮಗಾರಿಯಿಂದ ಮೀನುಗಾರರು, ಪರಿಸರ ವಾದಿಗಳು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಶಶಿಕಲಾ ಜೊಲ್ಲೆ, ಶಾಸಕಿ ರೂಪಾಲಿ ನಾಯಕ್ ಜಂಟಿ ಸುದ್ದಿಗೋಷ್ಠಿಯಲ್ಲಿ ಪುನರುಚ್ಛರಿಸಿದರು.

ಕಾರವಾರ ಬಂದರು ನಿರ್ಮಾಣ ಮಾಡುವ ವಿಚಾರದಲ್ಲಿ ಮೀನುಗಾರರು ಹಾಗೂ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ. ವಾಣಿಜ್ಯ ಬಂದರು ನಿರ್ಮಾಣ ಮಾಡುವುದರಿಂದ ರವೀಂದ್ರನಾಥ ಠಾಗೋರ್ ಬೀಚ್ ಅಸ್ತಿತ್ವ ಕಳೆದುಕೊಳ್ಳುತ್ತೆ ಎಂದು ಕೆಲವರು ಹೇಳಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಸಾಗರ ಮಾಲಾ ಯೋಜನೆಯಡಿ ಈ ಕಾಮಗಾರಿ ಕೈಗೆತ್ತಿಕೊಂಡಿದ್ದು, ಮೀನುಗಾರರು ಹಾಗೂ ನೈಸರ್ಗಿಕ ಸೌಂದರ್ಯಕ್ಕೆ ಯಾವುದೇ ರೀತಿ ಸಮಸ್ಯೆ ಆಗದ ರೀತಿ ಸರ್ಕಾರ ಕ್ರಮ ವಹಿಸಲಿದೆ ಎಂದು ಭರವಸೆ ನೀಡಿದರು. ತಮ್ಮ ಹಾಗೂ ಸರ್ಕಾರದ ಭರವಸೆಯಿಂದ ಮೀನುಗಾರರು, ಪರಿಸರವಾದಿಗಳು, ಸಾರ್ವಜನಿಕರಿಗೆ ಆತಂಕ ನಿವಾರಣೆ ಆಗದೇ ಇದ್ದಲ್ಲಿ ವಿಧಾನಸೌಧದಲ್ಲಿ ಸಭೆಯೊಂದನ್ನು ಆಯೋಜಿಸಿ ಯೋಜನೆ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಡಿಸೆಂಬರ್ 6, 2017 ರಂದು ಅಂದಿನ ಸಿಎಂ ಸಿದ್ದರಾಮಯ್ಯ ಈ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಅಂದು ಶಾಸಕರಾಗಿದ್ದು, ಶಂಕು ಸ್ಥಾಪನೆಯಲ್ಲಿ ಭಾಗವಹಿಸಿದ ಸತೀಶ್ ಸೈಲ್ ಅವರೇ ಇಂದು ಯೋಜನೆಯನ್ನು ವಿರೋಧಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಕೇವಲ ರಾಜಕೀಯಕ್ಕಾಗಿ ಸತೀಶ್ ಸೈಲ್ ಈ ರೀತಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಯಾವುದೇ ಮೀನುಗಾರರ ಕುಟುಂಬಕ್ಕೆ ಧಕ್ಕೆ ಆಗದ ರೀತಿ ಸರ್ಕಾರ ಕ್ರಮ ವಹಿಸಲಿದೆ ಎಂದು ಸ್ಪಷ್ಟಪಡಿಸಿದರು.

ಶಾಂತಿ ಭಂಗಕ್ಕೆ ಪ್ರಯತ್ನ: ಕಾರವಾರದಲ್ಲಿ ಶಾಂತಿ ಭಂಗಕ್ಕೆ ಪ್ರಯತ್ನ ನಡೆಯುತ್ತಿದೆ. ಮಾಜಿ ಶಾಸಕ ಸತೀಶ್ ಸೈಲ್ ಈ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಕಾಮಗಾರಿ ಉದ್ಘಾಟನೆ ಸಹಕಾರ ಕೊಟ್ಟಿದ್ದರು. ಇದೀಗ ಅವರೇ ಪ್ರತಿಭಟನೆ ಮಾಡುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಶಾಸಕಿ ರೂಪಾಲಿ ನಾಯ್್ಕ ಪ್ರಶ್ನಿಸಿದರು.

ಉದ್ದೇಶ ಪೂರ್ವಕವಾಗಿ ಸತೀಶ್ ಸೈಲ್ ಅಲ್ಲಿನ ಜನರನ್ನು ಎತ್ತುಕಟ್ಟುವ ಕೆಲಸ ಮಾಡುತ್ತಿದ್ದಾರೆ. ಕಾರವಾರದ ಬೀಚ್​ಗೆ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ. ನಾನು ಆ ಭಾಗದ ಶಾಸಕಳಾಗಿ ಕ್ಷೇತ್ರದ ಜನರ ಹಿತ ಕಾಯುತ್ತೇನೆ. ಕಾರವಾರದಲ್ಲಿ ಇರುವುದು ಒಂದು ಕಡಲ ತೀರ. ರವೀಂದ್ರನಾಥ ಠಾಗೋರ್ ಬೀಚ್ ಇವೆಲ್ಲವೂ ನಮ್ಮವು. ಇವುಗಳನ್ನು ಹಾಳಾಗಲು ನಾವು ಬಿಡುತ್ತೇವಾ ಎಂದು ಕೇಳಿದರು.

ವ್ಯಾಪಾರ, ವಾಣಿಜ್ಯ ಸುಧಾರಣೆಗೆ ಸಹಕಾರಿ: ಸಾಗರಮಾಲಾ ಯೋಜನೆಯಿಂದ ಉತ್ತರ ಕನ್ನಡ ಜಿಲ್ಲೆಗಷ್ಟೇ ಅಲ್ಲ, ಇಡೀ ರಾಜ್ಯಕ್ಕೆ ಹಾಗೂ ಪ್ರಮುಖವಾಗಿ ಉತ್ತರ ಕರ್ನಾಟಕದ ವ್ಯಾಪಾರ, ವಾಣಿಜ್ಯ ಸುಧಾರಣೆಗೆ, ರಾಜ್ಯದ ಅನೇಕ ನಗರಗಳಿಂದ ಬಂದರು ತಲುಪಲು ಚತುಷ್ಟಥ ನಿರ್ವಣಕ್ಕೆ, ಉದ್ಯೋಗ ಸೃಷ್ಟಿಗೆ ನೆರವಾಗಲಿದೆ ಎಂದು ಮಾಜಿ ಶಾಸಕ ಸುನೀಲ ಹೆಗಡೆ ಹೇಳಿದರು. ದಾಂಡೇಲಿ ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರವಾರದ ಸಮುದ್ರ ತೀರದ ಮೀನುಗಾರರಿಗೆ ಈ ಯೋಜನೆಯಲ್ಲಿ ನ್ಯೂನತೆಗಳು ಕಂಡುಬಂದಲ್ಲಿ ಜಿಲ್ಲಾಧಿಕಾರಿ ರ್ಚಚಿಸಿ ಸಮಸ್ಯೆ ಬಗೆಹರಿಸಲು ತೀರ್ವನಿಸಿದ್ದಾರೆ. 2020-25ರೊಳಗೆ ಉ.ಕ. ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಸಂಕಲ್ಪದಿಂದ ಮಂಗಳೂರಿನ ಬದಲು ಕಾರವಾರಕ್ಕೆ ಈ ಯೋಜನೆಯನ್ನು ಸಂಸದರು ಕೇಂದ್ರದ ಮೇಲೆ ಒತ್ತಾಯ ಹೇರಿ ತಂದಿದ್ದಾರೆ. ಇದು ನಮ್ಮ ಜಿಲ್ಲೆಯ ಒಳಿತಿಗಾಗಿ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು. ಯೋಜನೆ ವಿರೋಧಿಸಿ ಪ್ರತಿಭಟಿಸುತ್ತಿರುವವರು ಸಂಸದ ಅನಂತಕುಮಾರ ಹೆಗಡೆ, ಕಾರವಾರ ಶಾಸಕಿ ರೂಪಾಲಿ ನಾಯ್ಕ ಅವರಿಗೆ ಅವಮಾನ ಮಾಡುತ್ತಿರುವುದು ಖಂಡನೀಯ ಎಂದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಚಂದ್ರಕಾಂತ ಕ್ಷೀರಸಾಗರ, ಬಸವರಾಜ ಕಲಶೆಟ್ಟಿ, ಗುರು ಮಠಪತಿ, ನಗರಸಭೆ ಸದಸ್ಯರು, ಇತರರಿದ್ದರು.

ಚಪ್ಪಲಿ ಹಾರ ಹಾಕಿದರೂ ಕ್ಷಮಿಸುತ್ತೇನೆ: ಕಾರವಾರ ಬಂದರು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಸಲ್ಲದು. ಮೀನುಗಾರರು ಯಾರದ್ದೋ ಮಾತು ಕೇಳಿ ದುಡುಕುವುದು ಬೇಡ. ನನ್ನ ಫೋಟೋಗೆ ಚಪ್ಪಲಿ ಹಾರ ಹಾಕಿದವರನ್ನು, ಸಗಣಿ ಮೆತ್ತಿದವರನ್ನು ನಾನು ಕ್ಷಮಿಸುತ್ತೇನೆ. ಬೀಚ್ ಉಳಿಸಲು, ಮೀನುಗಾರರ ಹಿತ ಕಾಪಾಡಲು ನಾನು ಬದ್ಧಳಿದ್ದೇನೆ. ಪ್ರತಿಭಟನೆಗೆ ಮಹಿಳೆಯರನ್ನು ಬಳಸಿಕೊಳ್ಳುವುದು ಬೇಡ. ದಯವಿಟ್ಟು ಬೇರೆಯವರ ಮಾತು ಕೇಳಬೇಡಿ ಎಂದು ಶಾಸಕಿ ರೂಪಾಲಿ ನಾಯ್್ಕ ಮನವಿ ಮಾಡಿದರು. ಈ ಯೋಜನೆಯಿಂದ ನನಗೇನೂ ಆಗಬೇಕಿಲ್ಲ. ನನ್ನ ಜನರಿಗೆ ಬೇಡ ಎಂದಾದರೆ ನನಗೂ ಬೇಡ. ಸುಮ್ಮನೇ ನನ್ನ ಹೆಸರು ಎಳೆತಂದು ಕೆಟ್ಟದಾಗಿ ಬಿಂಬಿಸುವುದು ಸರಿಯಲ್ಲ ಎಂಬು ರೂಪಾಲಿ ನಾಯ್್ಕ ಭಾವುಕದಾದರು.

ಕಡಲ ತೀರ ಸಂರಕ್ಷಣೆಗೆ ಮುಂದಾಗಿ: ರಾಜಕೀಯ ಮರೆತು ಮೀನುಗಾರರ, ಕಡಲ ತೀರ ಸಂರಕ್ಷಣೆಗೆ ಮುಂದಾಗಬೇಕು ಎಂದು ಮಾಜಿ ಸಚಿವ ಪ್ರಮೋದ ಮಧ್ವರಾಜ್ ಹೇಳಿದರು.

ಕಾರವಾರ ನಗರಕ್ಕೆ ಗುರುವಾರ ಆಗಮಿಸಿದ ಅವರು, ಬಂದರು ವಿಸ್ತರಣೆಗಾಗಿ ಟ್ಯಾಗೋರ್ ತೀರದಲ್ಲಿ ನಡೆಸುತ್ತಿರುವ ಅಲೆ ತಡೆಗೋಡೆ ಕಾಮಗಾರಿ ವೀಕ್ಷಿಸಿದರು. ನಂತರ ಪ್ರತಿಭಟನಾ ನಿರತ ಮೀನುಗಾರರನ್ನು ಭೇಟಿಯಾಗಿ ರ್ಚಚಿಸಿದರು. ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸ್ಥಳಕ್ಕೆ ಭೇಟಿ ನೀಡಿ, ಇಲ್ಲಿನ ಪರಿಸ್ಥಿತಿ ಅರಿತು ಮೀನುಗಾರರ ಜತೆ ರ್ಚಚಿಸುವಂತೆ ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕರೆ ಮಾಡಿ ಮನವಿ ಮಾಡಿದ್ದೇನೆ ಎಂದರು.

ರಾಜಕೀಯ ಮುಖಂಡರ ನಡುವೆ ಸ್ವ ಪ್ರತಿಷ್ಠೆ: ಬಂದರು ವಿಸ್ತರಣೆಯಿಂದ ಇಡೀ ಕಾರವಾರ ನಗರಕ್ಕೆ ಕಂಟಕ ಬಂದೊದಗುತ್ತದೆಯೋ? ಕಡಲ ತೀರದ ಸೌಂದರ್ಯ ನಾಶವಾಗುತ್ತದೆಯೋ? ಮೀನುಗಾರಿಕೆ ಬಂದ್ ಆಗುವುದೋ? ಎಂಬ ಆತಂಕದಲ್ಲಿ ಜನರಿದ್ದಾರೆ. ಆದರೆ, ರಾಜಕೀಯ ಮುಖಂಡರು ತಮ್ಮ ಬೇಳೆ ಬೇಯಿಸಿಕೊಳ್ಳುವ ತವಕದಲ್ಲಿರುವುದು ಜನರ ಬೇಸರಕ್ಕೆ ಕಾರಣವಾಗಿದೆ.

ಬಂದರು ವಿಸ್ತರಣೆಯ ಆಗು ಹೋಗುಗಳ ಬಗ್ಗೆ ಚರ್ಚೆ ನಡೆಯುವ ಬದಲು ರಾಜಕೀಯ ಮುಖಂಡರ ನಡುವೆ ಸ್ವ ಪ್ರತಿಷ್ಠೆ, ಪರಸ್ಪರ ಕೆಸರೆರಚಾಟ, ತಮ್ಮ ಶಕ್ತಿ ಪ್ರದರ್ಶನದ ಉದ್ದೇಶ ಎದ್ದು ಕಾಣುತ್ತಿದೆ.

ಅಲೆ ತಡೆಗೋಡೆ ಕಾಮಗಾರಿ ತಡೆಯುವಂತೆ ಮೀನುಗಾರರು ಸಾಕಷ್ಟು ಬಾರಿ ಶಾಸಕಿ ಬಳಿ ಮನವಿ ಮಾಡಿದ್ದರು. ಆದರೆ, ಅದನ್ನು ತಡೆಯುವಲ್ಲಿ ಅವರು ವಿಫಲವಾದ ಹಿನ್ನೆಲೆಯಲ್ಲಿ ಅವರ ವಿರುದ್ಧ ಮೀನುಗಾರರು ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.

ಮೀನುಗಾರರ ಜತೆ ಬಂದು ರ್ಚಚಿಸಿ ಸಮಸ್ಯೆ ಬಗೆಹರಿಸುವ ಬದಲು ಬಿಜೆಪಿ ಅದನ್ನು ಇನ್ನೊಬ್ಬರ ಮೇಲೆ ಆರೋಪ ಹೊರಿಸಿ ತಮ್ಮ ತಲೆ ಉಳಿಸಿಕೊಳ್ಳಲು ಮುಂದಾಗಿದೆ.

‘ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದು, ಆಗಿನ ಸಿಎಂ ಸಿದ್ದರಾಮಯ್ಯ. ಆಗ ಶಾಸಕರಾಗಿದ್ದವರು ಸತೀಶ ಸೈಲ್. ಅವರು ಅಲೆ ತಡೆಗೋಡೆ ಕಾಮಗಾರಿಗೆ ಕಲ್ಲು ಪೂರೈಸುವ ಗುತ್ತಿಗೆ ಪಡೆದಿದ್ದಾರೆ. ಈಗ ಇನ್ನೊಂದೆಡೆ ಕಾಮಗಾರಿ ಬೇಡ ಎಂದು ಹೋರಾಟ ಮಾಡುವ ಮೂಲಕ ಇಬ್ಬಗೆಯ ನೀತಿ ಪ್ರದರ್ಶಿಸುತ್ತಿದ್ದಾರೆ’ ಎಂದು ಶಾಸಕಿ ರೂಪಾಲಿ ನಾಯ್ಕ, ಬಿಜೆಪಿ ವಕ್ತಾರ ರಾಜೇಶ ನಾಯ್ಕ ದೂರಿದ್ದಾರೆ.

ಸತೀಶ ಸೈಲ್ ತಮ್ಮ ಮೇಲೆ ಬಂದ ಆರೋಪ ದೂರ ಮಾಡಲು ಗುರುವಾರ ಪ್ರತಿಭಟನೆ ನೇತೃತ್ವ ವಹಿಸಿದ್ದಲ್ಲದೆ, ಇಡೀ ಪ್ರತಿಭಟನೆಯನ್ನು ನಿಯಂತ್ರಿಸಲು ಮುಂದಾದರು. ಆದರೆ, ಅದಕ್ಕೆ ಅವಕಾಶ ಸಿಗದಾಗ ಅಸಮಾಧಾನಗೊಂಡು ದೂರ ನಿಂತಿದ್ದೂ ಆಯಿತು.

ಇನ್ನೊಂದೆಡೆ ಇನ್ನೊಬ್ಬ ಮುಖಂಡ ಆನಂದ ಅಸ್ನೋಟಿಕರ್ ಗುರುವಾರ ಪ್ರತಿಭಟನೆ ಮೆರವಣಿಗೆಯಲ್ಲಿ ಕಾಣಿಸಿಕೊಂಡರು. ಆದರೆ, ತಮ್ಮ ಬೆಂಬಲಿಗರ ಜತೆ ಪ್ರತ್ಯೇಕವಾಗಿ ತೆರಳಿ ಜಿಲ್ಲಾಧಿಕಾರಿಗೆ ಮನವಿ ಅರ್ಪಿಸಿದರು. ಮೀನುಗಾರರ ಸಭೆ ನಡೆಸಿ ರ್ಚಚಿಸುವಂತೆ ಮನವಿ ಮಾಡಿದರು.

ಸದಸ್ಯರ ಇಕ್ಕಟ್ಟು: ಶಾಸಕಿ ರೂಪಾಲಿ ನಾಯ್ಕ ಬಂದರು ವಿಸ್ತರಣೆ ಯೋಜನೆಯ ಪರ ನಿಂತರೆ, ನಗರಸಭೆ ಬಿಜೆಪಿ ಸದಸ್ಯರು ಯೋಜನೆಯ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ. ನಾವು ಮೀನುಗಾರರು, ಕಾರವಾರದ ಜನರ ಜತೆ ಇದ್ದೇವೆ ಎಂದು ಬಿಜೆಪಿ ಕೌನ್ಸಿಲರ್​ಗಳಲ್ಲಿ ಹಿರಿಯರಾದ ಡಾ. ನಿತಿನ್ ಪಿಕಳೆ ಹೇಳಿದ್ದಾರೆ.

ಕಾರವಾರ ಕಡಲ ತೀರ ಉಳಿಯಬೇಕು ಎಂಬುದು ಎಲ್ಲರ ಉದ್ದೇಶ. ಈ ಹೋರಾಟಕ್ಕೆ ಯಾರೋ ಒಬ್ಬರು ನಾಯಕರಲ್ಲ. ತೀರಕ್ಕೆ ಕುತ್ತು ಬರುವ ಸಂದರ್ಭ ಬಂದಾಗ ಈ ಹಿಂದೆಯೂ ಎಲ್ಲರೂ ಸೇರಿ ಹೋರಾಟ ನಡೆಸಿದ್ದೆವು’ | ಗಂಗಾಧರ ಹಿರೇಗುತ್ತಿ, ಪತ್ರಕರ್ತ

ಸಾಗರ ಮಾಲಾ ಯೋಜನೆ ಅನುಷ್ಠಾನಕ್ಕೆ ಈ ಹಿಂದೆ ಉತ್ಸುಕತೆ ತೋರಿದ್ದ ಮಾಜಿ ಶಾಸಕ ಸತೀಶ ಸೈಲ್ ಈಗ ಮುಗ್ಧ ಮೀನುಗಾರರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಹೋರಾಟವು ಸೈಲ್ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ರಾಜಕೀಯ ಹುನ್ನಾರವಾಗಿದೆ. ಯೋಜನೆಯ ಬಗ್ಗೆ ಮೊದಲೇ ಅರಿತಿದ್ದ ಸೈಲ್ ಅವರು ಕಾಮಗಾರಿಗಾಗಿ ಕಲ್ಲುಗಳನ್ನು ಅನಧಿಕೃತವಾಗಿ ಶೇಖರಿಸಿಟ್ಟಿದ್ದಾರೆ. ಇತ್ತ ತಮ್ಮ ವ್ಯವಹಾರ ಕುದುರಿಸಲು ಹಾಗೂ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಸಾರ್ವಜನಿಕರು ಇಂಥವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. | ಕೆ.ಜಿ.ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net