

ನಂಜನಗೂಡು: ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಕಳೆದ ತಿಂಗಳು ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮಕ್ಕೆ ತಾಲೂಕಿನ ವೀರಶೈವ-ಲಿಂಗಾಯತ ಸಮಾಜದ ಜನರು ಉತ್ತಮ ಸಹಕಾರ, ಬೆಂಬಲ ನೀಡಿ ಯಶಸ್ವಿಗೊಳಿಸಿದರು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನಂಜನಗೂಡು ತಾಲೂಕು ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ ತಿಳಿಸಿದರು.
ನಗರದ ಸಮೀಪದಲ್ಲಿರುವ ಶ್ರೀ ಮಲ್ಲನಮೂಲೆ ಮಠದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ಬಸವ ಜಯಂತಿ ಲೆಕ್ಕಪತ್ರ ಮಂಡನೆ ಸಭೆಯಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮ ಆಯೋಜನೆಗಾಗಿ ತಾಲೂಕಿನ ಸಮಾಜದ ಬಂಧುಗಳು 20 ಲಕ್ಷ 10 ಸಾವಿರ ರೂ. ನೆರವು ನೀಡಿದ್ದರು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ದೇವನೂರು ಶ್ರೀ ಮಹಾಂತ ಸ್ವಾಮೀಜಿ ಹಾಗೂ ಕಂಬಳೀಶ್ವರ ಮಠದ ಶ್ರೀ ಚೆನ್ನಬಸವ ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್, ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ವೇದಿಕೆ ನಿರ್ವಹಣೆಯ ಖರ್ಚು ಭರಿಸಿದ್ದರು. ಸಚಿವರಾದ ಈಶ್ವರ ಖಂಡ್ರೆ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ತಾಲೂಕಿನ ಸಮಾಜದ ಬಹುದಿನದ ಬೇಡಿಕೆಯಾದ ಬಸವ ಭವನ ನಿರ್ಮಾಣ 2018ರಲ್ಲಿ ಆರಂಭವಾಗಿ ಕಳೆದ 7 ವರ್ಷಗಳಿಂದ ಕುಂಟುತ್ತಾ ಸಾಗಿದೆ. ವೀರಶೈವ ಮಹಾಸಭಾದ ತಾಲೂಕು ಘಟಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಹೆಚ್ಚಿನ ಅನುದಾನ ನೀಡಿ ಬಸವಭವನ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಮನವಿ ಸಲ್ಲಿಸಲಾಗಿದೆ. ಜತೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಹಾಗೂ ಶಾಸಕ ದರ್ಶನ್ ಧ್ರುವ ನಾರಾಯಣ್ ಅವರಿಂದಲೂ ಉತ್ತಮ ಸ್ಪಂದನೆ ದೊರೆತಿದೆ ಎಂದು ಹೇಳಿದರು.
ಮಲ್ಲನಮೂಲೆ ಮಠದ ಶ್ರೀ ಚೆನ್ನಬಸವ ಸ್ವಾಮೀಜಿ, ಪ್ರಧಾನ ಕಾರ್ಯದರ್ಶಿ ಶಿವಪ್ಪ ದೇವರು, ಎಂ.ಪಿ.ನಟರಾಜು, ಎನ್.ಮಹೇಶ್, ಎಂ.ಜಿ.ಮಹದೇವಸ್ವಾಮಿ, ಶಶಿಕಲಾ ಗಿರೀಶ್, ರಾಜೇಂದ್ರ ಪ್ರಸಾದ್, ಕುರಹಟ್ಟಿ ಮಹೇಶ್, ಕೋಮಲಾ ಇದ್ದರು.