ಹಳೇಬೀಡಿನಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

29hbd2
ತಮಿಳುನಾಡಿಗೆ ಕಾವೇರಿ ನದೀ ನೀರು ಹರಿಸುವುದನ್ನು ಖಂಡಿಸಿ ಶುಕ್ರವಾರ ವಿವಿಧ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಪ್ರಯುಕ್ತ ವ್ಯಾಪಾರಿಗಳು ಅಂಗಡಿಗಳನ್ನು ಮುಚ್ಚಿ ಬೆಂಬಲ ವ್ಯಕ್ತಪಡಿಸಿದರು.
Published on

ಹಳೇಬೀಡು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ಖಂಡಿಸಿ ಶುಕ್ರವಾರ ವಿವಿಧ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಹಳೇಬೀಡು ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಹೋಬಳಿ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಇನ್ನಿತರ ಜನಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಉಗ್ರವಾಗಿ ಖಂಡಿಸಿ ಧಿಕ್ಕಾರ ಕೂಗಿದರು. ಬೆಳಗ್ಗೆ 9 ಗಂಟೆಗೆ ಪಟ್ಟಣದ ಹೊಯ್ಸಳ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಅಲ್ಲಲ್ಲಿ ತೆರೆದಿದ್ದ ಅಂಗಡಿ ಮುಂಗಟ್ಟುಗಳ ಬಳಿಗೆ ತೆರಳಿ ಪ್ರತಿಭಟನೆಗೆ ಕೈಜೋಡಿಸುವಂತೆ ವಿನಂತಿ ಮಾಡಿದರು. ಇದಕ್ಕೆ ಸ್ಪಂದಿಸಿದ ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ವಹಿವಾಟನ್ನು ನಿಲ್ಲಿಸಿ ಅಂಗಡಿಗಳನ್ನು ಮುಚ್ಚಿ ಕರ್ನಾಟಕ ಬಂದ್ ಬೆಂಬಲಿಸಿದರು.

ರೈತ ಮುಖಂಡ ಕುಮಾರ್ ಮಾತನಾಡಿ, ಬರಗಾಲದ ಮುನ್ಸೂಚನೆ ಸಿಕ್ಕಾಗಲೇ ರಾಜ್ಯ ಸರ್ಕಾರವು ಸರಿಯಾದ ನಿರ್ಧಾರ ಮಾಡಿದ್ದರೆ ಇಂತಹ ಕೆಟ್ಟ ಸ್ಥಿತಿ ಬರುತ್ತಿರಲಿಲ್ಲ. ಆಗೆಲ್ಲ ಚುನಾವಣೆ ಗೆದ್ದ ಸಂತಸದಲ್ಲಿ ಅಭಿವೃದ್ಧಿಯನ್ನು ಕಡೆಗಣಿಸಲಾಯಿತು. ಗ್ಯಾರಂಟಿ ಅನುಷ್ಠಾನದ ಭರದಲ್ಲಿ ರೈತರ ಹಿತಾಸಕ್ತಿಯನ್ನು ಮರೆತರು. ಈಗ ಅದರ ಫಲವನ್ನು ಅನ್ನದಾತರೇ ಅನುಭವಿಸಬೇಕಿದೆ. ಸರ್ವೋಚ್ಚ ನ್ಯಾಯಾಲಯದ ಮುಂದೆ ಅಂಕಿ-ಅಂಶಗಳ ಸಹಿತ ಸರಿಯಾಗಿ ವಾದವನ್ನು ಮಂಡಿಸಿ ವಸ್ತುಸ್ಥಿತಿಯನ್ನು ತೆರೆದಿಟ್ಟಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಮುಂದಿನ ದಿನಗಳಲ್ಲಿ ಕಾವೇರಿ ಕೊಳ್ಳದ ರೈತರು ಇನ್ನಷ್ಟು ಸಂಕಟ ಅನುಭವಿಸುವ ದಿನಗಳು ಬರಲಿವೆ. ಇದರ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಬೇಕಿದ್ದು ರೈತರನ್ನು ಸಂಕಷ್ಟದಿಂದ ಪಾರು ಮಾಡುವ ಬಗ್ಗೆ ಗಂಭಿರವಾಗಿ ಚಿಂತನೆ ನಡೆಸಬೇಕು ಎಂದರು.

ರೈತ ಮುಖಂಡರಾದ ಹಾಲಪ್ಪ, ಗಂಗಾಧರ್, ಚಂದ್ರಶೇಖರ, ಈಶ್ವರ್ , ಕನ್ನಡ ಪರ ಹಾಗೂ ಜನಪರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net