ರೈತರನ್ನು ಸಂಕಷ್ಟದಿಂದ‌ ಪಾರು ಮಾಡಿದ ವರುಣದೇವ : ಒಣಗುತ್ತಿದ್ದ ಬೆಳೆಗಳಿಗೆ ಜೀವಕಳೆ

rainnn
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಶನಿವಾರ ರಾತ್ರಿಯಿಂದ ಭಾನುವಾರ ರಾತ್ರಿಯವರೆಗೂ ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ತುಂಬೆಲ್ಲಾ ಉತ್ತಮ ಮಳೆಯಾಗಿದೆ. ತೀರಾ ಅಗತ್ಯದ ಮತ್ತು ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದ  ಸಮಯದಲ್ಲಿ  ವರುಣದೇವ ಕೃಪೆ ತೋರಿದ್ದರಿಂದ ಕಮರುತ್ತಿದ್ದ ಬೆಳೆಗಳಿಗೆ ಮತ್ತೇ ಜೀವಕಳೆ ಬಂದಿದೆ. ಸಕಾಲಕ್ಕೆ ಮಳೆ ಸುರಿಯುವ ಮೂಲಕ ಕೊಂಚ ರೈತರ ಕೈ ಹಿಡಿದಂತಾಗಿದೆ.  ಇಂದು ಸಹ ಮಳೆಯಾಗುವ ಮುನ್ಸೂಚನೆ ಇದೆ.
ಮಳೆಯು ಮಣ್ಣಿನ ಮಕ್ಕಳಲ್ಲಿ ತುಸು ಹರುಷ ತರಿಸಿದೆ. ಕಲಬುರಗಿ ಜಿಲ್ಲೆಯಲ್ಲಿ ಅಂದಾಜು ೫ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದ್ದು ರೈತರಿಗೆ ಮಳೆ ಬಂದಿದ್ದು ಖುಷಿ ತರಿಸಿದೆ. ಬರ ಕರಿಮೋಡ ಕೊಂಚ ಕರಗಿ ರೈತರಿಗೆ ಮಳೆರಾಯ ಸಾಥ್ ನೀಡಿದ್ದಾನೆ. ಇದರಿಂದಾಗಿ ಬೆಳೆಗಳಿಗೆ ಜೀವ ತುಂಬಿದೆ. ಅಲ್ಲದೆ ಹಿಂಗಾರು ಬಿತ್ತನೆಗೆ ಭೂಮಿ ಹಸಿಯಾದಂತೆ ಆಗಿದೆ.
ಶ್ರಾವಣ ಮಾಸದ ಆರಂಭಲ್ಲಿರುವ ಮಘ (ಮಗಿ) ಮಳೆ ಈ ಸಲ ದರುಶನವೇ ಕೊಡಲಿಲ್ಲ. ಒಂದು ಹನಿಯು ಸುರಿಯಲಿಲ್ಲ. ಶ್ರಾವಣವಿಡಿ ಜಡಿ ಮಳೆಯಾಗುತ್ತಲೇ ಇರುತ್ತಿತ್ತು. ಆದರೆ, ಈ ಸಲ ಮಳೆಯಾದ ಕರಣ ಶ್ರಾವಣದಲ್ಲಿಯೇ ಬೇಸಿಗೆಯ ಅನುಭವ  ಆದಂತ ವಾತಾವರಣ ನಿರ್ಮಾಣಗೊಂಡಿತ್ತು. ಬಳಿಕ ಹೂಡಿಕೆಯಾದ ಹುಬ್ಬಾ (ಹುಬ್ಬಿ) ಮಳೆಯು  ಕೃಪೆ ತೋರುವ ಮೂಲಕ  ಬೆಳೆಗಳಿಗೆ ಆಸರೆಯಾಯಿತು.  ಎಲ್ಲಡೆ ತಂಪನೆಯ ವಾತಾವರಣ ನಿರ್ಮಾಣಗೊಂಡಿದ್ದು, ಜತೆಗೆ ಕಮರುತ್ತಿದ್ದ ಬೆಳೆಗಳು ನಳನಳಿಸಲು ಮಳೆ ಪುಷ್ಟಿ ನೀಡಿದೆ.
ಈಗ ಸುರಿದ ಮಳೆಯಿಂದಾಗಿ ತೊಗರಿ, ಹತ್ತಿ ಇನ್ನಿತರ ಬೆಳೆಗಳಿಗೆ ತುಂಬಾ ಅನುವು ಆಗಿದೆ ಜತೆಗೆ, ಹಿಂಗಾರು ಹಂಗಾಮಿನ ಜೋಳ ಬಿತ್ತನೆಗೂ ಸಹ ಪೂರಕವಾಗಿದೆ. ಮುಂದಿನ ಮಳೆಯಾಗಿರುವ ಉತ್ತರಿ ಮಳೆ  ಒಂದಿಷ್ಟು ಆದರೆ, ಎಲ್ಲಡೆ ಹಿಂಗಾರು ಬೆಳೆಗಳ ಬಿತ್ತನೆ ಪೂರ್ಣಗೊಳ್ಳಲಿದೆ. ಶನಿವಾರ ಸಂಜೆಯಿAದ ಭಾನುವಾರ ಬೆಳೆಗಿನವರೆಗೂ ಸುರಿದ ಮಳೆಯು ಸೇಡಂನಲ್ಲಿ ಅತಿ ಹೆಚ್ಚಾಗಿದೆ. ಚಿಂಚೋಳಿ ತಾಲೂಕಿನಲ್ಲಿ  ಸಹ ಉತ್ತಮವಾಗಿದೆ.
ಭಾನುವಾರ ಬೆಳಗ್ಗೆ ಸ್ವಲ್ಪ ಹೊತ್ತು ಅಬ್ಬರದಿಂದ ಸುರಿದ ಮಳೆ ಬಳಿಕ ಮೋಡ ಕವಿದ ವಾತಾವರಣ ನಿರ್ಮಾಣಗೊಂಡು ಭಾನುವಾರ ದಿನವಿಡಿ ತುಂತುರು ಹನಿಯಾಗಿ ಮಳೆ ಬರುತ್ತಿದೆ. ಭಾನುವಾರ ಬೆಳಗ್ಗೆ  ಮತ್ತು ಶನಿವಾರ ರಾತ್ರಿ ನಗರದಲ್ಲಿ ಭಾರಿ ಬಿರುಸಿನ ಮಳೆಯಾಯಿತು. ಇದರಿಂದಾಗಿ ಎಲ್ಲ ರಸ್ತೆಗಳು ನೀರಾಗಿದ್ದವು. ಮಳೆಯಬ್ಬರಕ್ಕೆ  ಕೆಲವು ಮನೆಗಳಲ್ಲಿ ಮಳೆ ನೀರು ಸಹ ಪ್ರವೇಶಿಸಿತು.
ನಗರ ಮತ್ತು ಜಿಲ್ಲೆಯಲ್ಲಿ ಹೇಳಿಕೊಳ್ಳವಷ್ಟು ಅಬ್ಬರದ ಮಳೆಯಾಗಿಲ್ಲ. ಆದರೆ, ತುಂತುರು ಮಳೆಯಾಗಿದೆ. ಇದರಿಂದಾಗಿ ಭೂಮಿ  ತೇವಾಂಶ ಹೆಚ್ಚಾಗಿದೆ. ಹೊರತು  ಸರಾಸರಿ ಮಳೆಗೆ ಹೋಲಿಸಿದೆ ಇನ್ನೂ ಮಳೆಯ ಕೊರತೆ ಇದೆ. ಅಂತರಜಲ ಮಟ್ಟವೂ ಏರಿಕೆ ಕಂಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net