

ತಿ.ನರಸೀಪುರ: ತಾಲೂಕಿನ ಕಳ್ಳಿಪುರದ ಮಹದೇವಪ್ಪ ಕೃಷಿಯ ಜತೆಗೆ ಉಪ ಕಸುಬು ಹಾಗೂ ಹೈನುಗಾರಿಕೆ ಮಾಡುವ ಮೂಲಕ ಉತ್ತಮ ಆದಾಯ ಕಂಡುಕೊಂಡಿದ್ದಾರೆ. ಕುರಿ ಸಾಕಣೆ, ನಾಡ ಹಸು ಸಾಕಣೆಯಿಂದ ವಾರ್ಷಿಕ ಲಕ್ಷಾಂತರ ರೂ. ಆದಾಯ ಗಳಿಕೆಯಾಗುತ್ತಿದೆ.
ರೈತರ ಬೆಳೆಗೆ ಬೆಂಬಲ ಬೆಲೆ ಇಲ್ಲದೆ ಸಾಲದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳುವುದು ಒಂದೆಡೆಯಾದರೆ, ಉದ್ಯೋಗಕ್ಕಾಗಿ ಪಟ್ಟಣಕ್ಕೆ ತೆರಳುವವರು ಸಂಖ್ಯೆ ಕಡಿಮೆ ಇಲ್ಲ. ಇಂತಹ ಕಾಲಘಟ್ಟದಲ್ಲಿ, ಮಹದೇವಪ್ಪ ಕೃಷಿಯನ್ನೇ ಜೀವಾಳ ವಾಗಿಸಿಕೊಂಡು ಮಾದರಿ ರೈತರಾಗಿ ಬದುಕು ನಡೆಸುತ್ತಿದ್ದಾರೆ.
60 ರಿಂದ 70 ವರ್ಷ ಕೃಷಿಯ ಜತೆಗೆ ಕುರಿ ಸಾಕಣೆ ಮಾಡುತ್ತಿರುವ ಮಹದೇವಪ್ಪ ಕುರಿ ಸಾಕಣೆಯಿಂದಲೇ ವಾರ್ಷಿಕ 6ರಿಂದ 8 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಜಮೀನಿನಲ್ಲಿ ರಾಗಿ, ಭತ್ತ, ಕಬ್ಬು, ತೆಂಗು, ಬೆಳೆಯುವುದರ ಜತೆಗೆ ನಾಡ ಹಸು ಸಾಕಣೆಯನ್ನು ಕೂಡ ಮಾಡುತ್ತಿದ್ದಾರೆ.
ಪೂರ್ವಿಕರ ಕಾಲದಿಂದ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿರುವ ಕುಟುಂಬ ಇವರದಾಗಿದ್ದು, ಕೃಷಿಯ ಜತೆಗೆ ಉಪ ಕಸುಬು ಅವಲಂಬಿಸಿದರೆ ಯಶಸ್ವಿಯಾಗಬಹುದು ಎಂಬ ಸೂತ್ರ ಅಳವಡಿಸಿಕೊಂಡಿದ್ದಾರೆ. ರಸಗೊಬ್ಬರಗಳ ಜತೆ ಇತರ ವಸ್ತುಗಳ ಬೆಲೆ ಏರಿಕೆಯ ದಿನಗಳಲ್ಲಿ ಸಾಲ ಮಾಡದೆ ಕೃಷಿ ಮಾಡುವುದು ಕಷ್ಟಸಾಧ್ಯ ಎನ್ನುವ ಸಂದರ್ಭದಲ್ಲಿ ಹಣಕ್ಕೆ ತೊಂದರೆ ಉಂಟಾದರೆ ಸಾಲ ಮಾಡದೆ ಕುರಿಗಳ ಮಾರಾಟ ಮಾಡುವ ಮೂಲಕ ಕೃಷಿ ಚಟುವಟಿಕೆ ನಡೆಸುತ್ತಾರೆ ಮಹದೇವಪ್ಪ.
ತಮ್ಮ ಸಾಕಣೆಯಲ್ಲಿ ವರ್ಷಕ್ಕೆ 10ರಿಂದ 15 ಕುರಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕುರಿ ಸಾಕಣೆಯಿಂದ ನಷ್ಟ ಸಂಭವಿಸುವುದಿಲ್ಲ ಎಂಬುದು ಸಾಬೀತಾಗಿದೆ. ಪೂರ್ವಿಕರ ಕಾಲದಿಂದ ಬಳುವಳಿಯಾಗಿ ಬಂದ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸುತ್ತಾ ಬಂದಿದ್ದು, ಕೂಲಿ ಹಾಗೂ ರಸಗೊಬ್ಬರ ಬೆಲೆ ಹೆಚ್ಚಾಗುತ್ತಿರುವ ಕಾಲಘಟ್ಟದಲ್ಲೂ, ವ್ಯವಸಾಯ ಮಾಡುತ್ತಾ ಬಂದಿದ್ದು, ಇದುವರೆಗೆ ಯಾವುದೇ ರೀತಿಯ ಆರ್ಥಿಕ ಸಮಸ್ಯೆಗಳು ಉಂಟಾಗಿಲ್ಲ. ವ್ಯವಸಾಯದ ಜತೆಗೆ ಹೈನುಗಾರಿಕೆ ಮಾಡಿಕೊಂಡು ಬಂದಿರುವುದರಿಂದ ಇಲ್ಲಿವರೆಗೆ ಬ್ಯಾಂಕ್ ಸಾಲ ಸೇರಿದಂತೆ ಯಾವುದೇ ರೀತಿಯ ಸಾಲ ಮಾಡುವ ಪ್ರಸಂಗ ಏರ್ಪಟ್ಟಿಲ್ಲ ಎನ್ನುತ್ತಾರೆ ಮಹದೇವಪ್ಪ.
ಇರುವ ಎಂಟು ಎಕರೆ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದು, ಕುಟುಂಬದ ಸದಸ್ಯರು ಕಾಯಕದಲ್ಲಿ ಕೈ ಜೋಡಿಸಿದ್ದಾರೆ. ಮನೆಯವರೇ ಜಮೀನಿನಲ್ಲಿ ದುಡಿಯುವುದರಿಂದ ಕಾರ್ಮಿಕರ ಸಮಸ್ಯೆಯಾಗಲಿ, ಖರ್ಚು ಇನ್ನಿತರ ಸಮಸ್ಯೆಗಳು ಬರುತ್ತಿಲ್ಲ. ಕುರಿ ಹಾಗೂ ಹಸುಗಳಿಗೆ ಬೇಕಾದ ಮೇವು ಕೃಷಿ ಜಮೀನಿನಿಂದಲೇ ಲಭಿಸುತ್ತಿದ್ದು, ಮೇವುಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಎನ್ನುತ್ತಾರೆ.
ಪಂಪ್‌ಸೆಟ್ ಅಳವಡಿಕೆ
ಕುಟುಂಬದ ಹಿರಿಯರಿಂದ ಬಂದ 8 ಎಕರೆ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸಿಕೊಂಡು ಬರುತ್ತಿದ್ದು, ಹಿಂದೆ ಮಳೆಯಾಶ್ರಿತ ಬೆಳೆ ರಾಗಿ, ಕಾಳುಗಳನ್ನು ಬೆಳೆಯಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಪಂಪ್‌ಸೆಟ್ ಅಳವಡಿಸಿಕೊಂಡಿದ್ದು, ಕಬ್ಬು, ಬಾಳೆ, ಭತ್ತ ಬೆಳೆಯಲಾಗುತ್ತಿದೆ. ಮನೆಯ ಬಳಕೆಗೆ ಬೇಕಾಗುವಷ್ಟು ಭತ್ತ ಇಟ್ಟುಕೊಂಡು ಉಳಿದಿದ್ದನ್ನು ಮಾರಾಟ ಮಾಡಲಾಗುತ್ತಿದೆ. ಕೃಷಿ ಹಾಗೂ ಹೈನುಗಾರಿಕೆಯ ಹಾದಿಯಲ್ಲಿ ಒಬ್ಬ ಪುತ್ರ ಸಹಕಾರ ನೀಡುತ್ತಿದ್ದಾನೆ. ಇನ್ನೊಬ್ಬ ಪುತ್ರ ಉದ್ಯೋಗದಲ್ಲಿದ್ದಾನೆ. ನಿಷ್ಠೆಯಿಂದ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡರೆ ವ್ಯವಸಾಯದಿಂದಲೂ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎನ್ನುತ್ತಾರೆ ಮಹದೇವಪ್ಪ.