

ಬಾಗಲಕೋಟೆ: ಹಳೇ ಪಿಂಚಣಿ ಜಾರಿಗೊಳಿಸಬೇಕು, ಏಳನೇ ವೇತನ ಆಯೋಗ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ಕರೆ ನೀಡಿದ್ದ ಮುಷ್ಕರಕ್ಕೆ ಜಿಲ್ಲೆಯಲ್ಲಿ ಬುಧವಾರ ಉತ್ತಮ ಪ್ರತಿಕ್ರಿಯೆ ದೊರೆಯಿತು. ಕೋಟೆನಾಡಲ್ಲಿ ಅಕ್ಷರಶಃ ಸರ್ಕಾರಿ ಕಚೇರಿಗಳು ಸ್ತಬ್ಧಗೊಂಡಿದ್ದವು.
ಜಿಲ್ಲಾ ಕೇಂದ್ರ ಸ್ಥಾನ ಬಾಗಲಕೋಟೆ ನಗರ ಸೇರಿದಂತೆ ಮುಧೋಳ, ಬಾದಾಮಿ, ಜಮಖಂಡಿ, ರಬಕವಿ-ಬನಹಟ್ಟಿ, ತೇರದಾಳ, ಮಹಾಲಿಂಗಪುರ, ಬೀಳಗಿ, ಗುಳೇದಗುಡ್ಡ, ಹುನಗುಂದ, ಇಳಕಲ್ಲ ಸೇರಿದಂತೆ ಎಲ್ಲೆಡೆ ಸರ್ಕಾರಿ ಕಚೇರಿಗಳು ತನ್ನ ಕಾರ್ಯವೈಖರಿ ನಿಲ್ಲಿಸಿದ್ದವು. ಜಿಲ್ಲೆಯಾದ್ಯಂತ ಆಡಳಿತ ಯಂತ್ರವೇ ಬೆಳಗ್ಗೆಯಿಂದ ಬಂದ್ ಆಗಿತ್ತು. ಆಯೋಗದ ಮಧ್ಯಂತರ ವರದಿ ಅನುಸಾರ ವೇತನ ಹೆಚ್ಚಳಕ್ಕೆ ಕ್ರಮ ತೆಗೆದುಕೊಳ್ಳುತ್ತಿದ್ದಂತೆ ನೌಕರರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಳಿಕ ಮಧ್ಯಾಹ್ನ ನಂತರ ಕರ್ತವ್ಯಕ್ಕೆ ಹಾಜರಾದರು. ನಂತರ ಆಡಳಿತ ಯಂತ್ರಕ್ಕೆ ಜೀವ ಕಳೆ ಬಂದಿತು.
ನೌಕರರ ಮುಷ್ಕರದ ಪರಿಣಾಮ ಬಾಗಲಕೋಟೆ ನಗರದ ಜಿಲ್ಲಾಡಳಿತ ಭವನ, ತಹಸೀಲ್ದಾರ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ಯುಕೆಪಿ ಕಚೇರಿ, ಜಿಲ್ಲಾ ಆಸ್ಪತ್ರೆ, ೫೦ ಹಾಸಿಗೆ ಆಸ್ಪತ್ರೆಗಳು ಹಾಗೂ ವಿವಿಧ ಇಲಾಖೆಗಳ ಕಚೇರಿಗಳು ನೌಕರರು ಇಲ್ಲದೆ ಬಿಕೋ ಎನ್ನುತ್ತಿದ್ದವು. ಇದರಂತೆ ಜಿಲ್ಲೆಯ ವಿವಿಧ ತಾಲೂಕಿನ ತಹಸೀಲ್ದಾರ ಕಚೇರಿ, ಸಬ್ ರಜಿಸ್ಟರ ಕಚೇರಿ, ಬಿಇಒ ಕಚೇರಿಗಳಲ್ಲಿ ವಾತವರಣ ಕಂಡು ಬಂದಿತು. ಜಿಲ್ಲೆಯಲ್ಲಿ ಕೆಎಎಸ್‌ನಿಂದ ಗ್ರೂಫ -ಡಿ ನೌಕರರ ವರೆಗೆ ೨೪೮೦೦ ಸರ್ಕಾರಿ ನೌಕರರು ಮುಷ್ಕರದಲ್ಲಿ ಭಾಗವಹಿಸಿದ್ದರು. ನೌಕರರು ಸರ್ಕಾರ ವಿರುದ್ಧ ಘೋಷಣೆ, ಪ್ರತಿಭಟನೆ ಮಾಡಲಿಲ್ಲ. ಬದಲಾಗಿ ಮೌನವಾಗಿ ಕರ್ತವ್ಯಕ್ಕೆ ಗೈರು ಹಾಜರಾಗಿದ್ದರಿಂದ ಸಾರ್ವಜನಿಕರಿಗೆ ಸಮರ್ಪಕ ಸೇವೆ ದೊರೆಯದೇ ಪರದಾಡಿದರು.
ಮುಷ್ಕರದ ಬಗ್ಗೆ ಮೊದಲೆ ಮಾಹಿತಿ ನೀಡಿದ್ದರು ಸಹ ಅನೇಕ ಜನ ಅನಾರೋಗ್ಯ ಕಾರಣಕ್ಕೆ ಸರ್ಕಾರಿ ಆಸ್ಪತ್ರೆ, ಕಚೇರಿಗಳಿಗೆ ಆಗಮಿಸಿದ್ದರು. ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ ಆದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಒಪಿಡಿ ಬಂದ್ ಆಗಿದ್ದರಿಂದ ರೋಗಿಗಳು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಿದರು. ತುರ್ತು ವೈದ್ಯಕೀಯ ಸೇವೆ, ಆಸ್ಪತ್ರೆಗಳಲ್ಲಿ ದಾಖಲಾಗಿದ್ದ ರೋಗಿಗಳಿಗೆ ಮಾತ್ರ ವೈದ್ಯಕೀಯ ಸೇವೆ ಒದಗಿಸಲಾಯಿತು.
ಸಾರ್ವಜನಿಕರಿಗೂ ತಟ್ಟಿದ ಬಿಸಿ: ಸರ್ಕಾರಿ ನೌಕರರ ಮುಷ್ಕರ ಪರಿಣಾಮ ಸಾರ್ವಜನಿಕರಿಗೂ ಬಿಸಿ ಜೋರಾಗಿ ತಟ್ಟಿತು. ಪೌರ ಕಾರ್ಮಿಕರು ಗೈರು ಉಳಿದ ಪರಿಣಾಮ ಜಿಲ್ಲೆಯ ನಗರದ ಪ್ರದೇಶದ ಸ್ವಚ್ಛತಾ ಕಾರ್ಯ ನಡೆಯಲಿಲ್ಲ. ಕಸ, ಗಲೀಜು ರಾಶಿಗಟ್ಟಲೆ ಬಿದ್ದಿತ್ತು. ಸರ್ಕಾರಿ ಪ್ರೌಢ, ಪ್ರಾಥಮಿಕ ಹಾಗೂ ಅನುದಾನಿತ ಪ್ರಾಥಮಿಕ, ಪ್ರೌಢ, ಪದವಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಇನ್ನೂ ಶಾಲಾ, ಕಾಲೇಜುಗಳಿಗೆ ರಜೆ ಇದ್ದರು ಅನೇಕ ಜನ ಪಾಲಕರು ತಮ್ಮ ಮಕ್ಕಳು ಕರೆದುಕೊಂಡು ಬಂದಿದ್ದರು. ಜ್ಞಾನ ದೇಗುಲಗಳು ಬಂದ್ ಆಗಿರುವುದು ಗಮನಿಸಿ ಮಕ್ಕಳು ಮನೆಗೆ ವಾಪಸ್ ಆದರು. ಇದಲ್ಲಿ ಅನೇಕ ರೀತಿಯಲ್ಲಿ ಸಾರ್ವಜನಿಕರಿಗೆ ಮುಷ್ಕರದ ಬಿಸಿ ತಟ್ಟಿತು.