

ಹಾನಗಲ್ಲ: 2019-20ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲೆ ಹಾಗೂ ತಾಲೂಕಿನಲ್ಲಿ ಅತಿ ಹೆಚ್ಚು ಅಂಕ ಪಡೆದ ಐವರು ವಿದ್ಯಾರ್ಥಿಗಳಿಗೆ ಶಾಸಕ ಸಿ.ಎಂ.ಉದಾಸಿ, ಸಂಸದ ಶಿವಕುಮಾರ ಉದಾಸಿ ಅವರು ಮಂಗಳವಾರ ಲ್ಯಾಪ್ಟಾಪ್ ವಿತರಿಸಿದರು.
ಶಾಸಕರ ಗೃಹ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ರಮ್ಯಾ ಸೋಮಪ್ಪನವರ, ದೀಪಾ ಚಿಕ್ಕೇರಿ, ಕವನಾ ಕ್ಯಾಲಕೊಂಡ, ಸಂಗೀತಾ ಪೂಜಾರ, ರಮ್ಯಾ ಮೂಲಿಮನಿ ಅವರಿಗೆ ಲ್ಯಾಪ್ಟಾಪ್ ನೀಡಿ ಪ್ರೋತ್ಸಾಹಿಸಲಾಯಿತು. ಇದೇ ಸಂದರ್ಭದಲ್ಲಿ ಬಿಸಿಎಂ ಇಲಾಖೆಯಿಂದ ಉಚಿತವಾಗಿ ಹೊಲಿಗೆ ತರಬೇತಿ ಪಡೆದಿದ್ದ ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ತಾಲೂಕಿನ ಹಿರೇಬಾಸೂರ ಗ್ರಾಮದಲ್ಲಿ 1978ರಿಂದ ಭೂ-ಸಾಗುವಳಿ ಮಾಡಿದ್ದ 70 ರೈತರಿಗೆ ಸಾಂಕೇತಿಕವಾಗಿ ಹಕ್ಕುಪತ್ರ ವಿತರಿಸಲಾಯಿತು.
ನಂತರ ಮಾತನಾಡಿದ ಶಾಸಕ ಸಿ.ಎಂ. ಉದಾಸಿ, ತಾಲೂಕಿನ ಹಿರೇಬಾಸೂರ ಗ್ರಾಮದ ರೈತರು ಐದು ದಶಕಗಳಿಂದ ಭೂ-ಸಾಗುವಳಿ ಮಾಡಿಕೊಂಡು ಬಂದಿದ್ದರೂ ಕಾನೂನು ತೊಡಕುಗಳಿಂದಾಗಿ ಅವರ ಹೆಸರಿನಲ್ಲಿ ಖಾತೆ ಆಗಿರಲಿಲ್ಲ. ಸರ್ಕಾರದ ಮಟ್ಟದಲ್ಲಿ ಹಲವು ವರ್ಷ ಹೋರಾಟ ಕೈಗೊಂಡು 2020ರಲ್ಲಿ ಅವರ ಹೆಸರಿನಲ್ಲಿ ಭೂಮಿ ಮಂಜೂರಾತಿ ಮಾಡಲಾಗಿದೆ. ಇದರಿಂದಾಗಿ 70 ಜನ ಭೂ ರಹಿತರೂ ಕೃಷಿಕರಾಗುವಂತಾಗಿದೆ. ಇದೊಂದು ನಮ್ಮ ಆಡಳಿತಾವಧಿಯ ಮೈಲುಗಲ್ಲು ಎಂಬ ಹೆಮ್ಮೆಯಿದೆ ಎಂದರು.
ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಸರ್ಕಾರದ ಯೋಜನೆ ನಿಜವಾದ ಫಲಾನುಭವಿಗಳಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಕೈಗೊಂಡಿದ್ದೇವೆ. ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಪೋ›ತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಲ್ಯಾಪ್ಟಾಪ್ ವಿತರಿಸಲಾಗುತ್ತಿದೆ. ಇದು ಇತರ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಬೇಕೆಂಬ ಆಶಯ ಹೊಂದಲಾಗಿದೆ ಎಂದರು.
ಬಿಇಒ ಎಚ್.ಶ್ರೀನಿವಾಸ, ಸಮನ್ವಯಾಧಿಕಾರಿ ಡಾ.ಬಿ.ಎಂ. ಬೇವಿನಮರದ, ನೋಡಲ್ ಅಧಿಕಾರಿ ಬಿ.ಉಮೇಶ, ಬಿಸಿಎಂ ವಿಸ್ತರಣಾಧಿಕಾರಿ ಎಸ್. ಆನಂದ, ಕಂದಾಯ ಇಲಾಖೆಯ ಗ್ರಾಮಲೆಕ್ಕಾಧಿಕಾರಿ ಸಿ.ಸಿ. ಕದಂ ಉಪಸ್ಥಿತರಿದ್ದರು.