

ಚನ್ನರಾಯಪಟ್ಟಣ: ಯೋಗಾಸನದಿಂದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗಲಿದೆ ಎಂದು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ವಿ.ಮಹೇಶ್ ಹೇಳಿದರು.
ಪಟ್ಟಣದ ಶ್ರೀ ವಿಶ್ವೇಶತೀರ್ಥ ಸಭಾಗೃಹದಲ್ಲಿ ಶ್ರೀ ಗುರು ರಾಘವೇಂದ್ರಸ್ವಾಮಿ ಮಠ ಕೋಟೆ ಹಾಗೂ ಸ್ವಾಸ್ಥೃ ಜೀವನಮಾರ್ಗ ಯೋಗ ಪ್ರತಿಷ್ಠಾನ ಸಹಯೋಗದಲ್ಲಿ ಯೋಗ ಗುರು ಲಕ್ಷ್ಮಣ್ ಜೀ ಅವರ ಸಾರಥ್ಯದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ಯೋಗದಿಂದ ಜನರಲ್ಲಿ ಮಾನಸಿಕ ನೆಮ್ಮದಿ, ರೋಗನಿರೋಧಕ ಶಕ್ತಿ ವೃದ್ಧಿಸಿ ಸ್ವಾಸ್ಥೃ ಸಮಾಜ ನಿರ್ಮಿಸಲು ಸಹಕಾರಿಯಾಗಿದೆ. ಯೋಗ ಎಂದರೆ ಬರೀ ಆಸನಗಳನ್ನು ಮಾಡುವುದಲ್ಲ. ಬದುಕನ್ನು ಸಾತ್ವಿಕವಾಗಿ ಮತ್ತು ಶ್ರೇಷ್ಠತೆಯೊಂದಿಗೆ ಜೀವಿಸುವುದಾಗಿದೆ. ಇಂದಿನ ಯಾಂತ್ರಿಕ ಜೀವನದಲ್ಲಿ ಒತ್ತಡಕ್ಕೆ ಒಳಗಾಗಿ ಮನುಷ್ಯ ನಾನಾ ರೋಗಗಳಿಗೆ ಬಲಿಯಾಗುತ್ತಿದ್ದಾನೆ. ಆಹಾರ, ಗಾಳಿ, ನೀರು ಮಲಿನವಾಗಿದೆ. ಇವುಗಳಿಂದ ದೂರ ಉಳಿಯಬೇಕಾದರೆ ಯೋಗವೊಂದೆ ಪರಿಹಾರ.
ಯೋಗ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಆರೋಗ್ಯವಂತ ಸಮಾಜವನ್ನು ನಿರ್ಮಿಸಬಹುದು ಎಂದು ತಿಳಿಸಿದರು.
ಯೋಗ ಗುರು ಲಕ್ಷ್ಮಣ್‌ಜೀ ಯೋಗದ ವಿವಿಧ ಭಂಗಿಗಳನ್ನು ಶಿಬಿರಾರ್ಥಿಗಳಿಗೆ ಪರಿಚಯಿಸಿದರು. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ತರಬೇತಿ ಶಿಬಿರದಲ್ಲಿ ಶ್ರೀ ಮಠದ ಕಾರ್ಯದರ್ಶಿ ಸಿ.ಎನ್.ಪುಟ್ಟಸ್ವಾಮಿಗೌಡ, ನಿರ್ದೇಶಕ ಸಿ.ಎಸ್.ಹರ್ಷ ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು.