ಒಳ್ಳೆಯ ದಿನಗಳು ಬರಲಿವೆ, ಧೃತಿಗೆಡಬೇಡಿ

WEB 1
Published on

ಕಾಂಗ್ರೆಸ್ ಕಾರ್ಯಕರ್ತರಿಗೆ ಮಾಜಿ ಸಚಿವ ಶಿವಶಂಕರರೆಡ್ಡಿ ಧೈರ್ಯ ಮುಖಂಡರೊಂದಿಗೆ ಸಭೆ

ಗೌರಿಬಿದನೂರು: ಪಕ್ಷದ ಕಾರ್ಯಕರ್ತರು, ಮುಖಂಡರು ಧೃತಿಗೆಡಬೇಕಾಗಿಲ್ಲ. ರಾಜ್ಯದಲ್ಲಿ ಒಳ್ಳೆಯ ದಿನಗಳು ಬಂದಿದ್ದು, ತಾಲೂಕಿನಲ್ಲಿ ಕೂಡ ಒಳ್ಳೆಯ ದಿನಗಳು ಬರಲಿವೆ ಎಂದು ಮಾಜಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಹೇಳಿದರು.

ತಾಲೂಕಿನ ನಾಗಸಂದ್ರ ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿದರು.

ನಿರಂತರ 25 ವರ್ಷ ತಾಲೂಕಿನಲ್ಲಿ ಆಡಳಿತ ನಡೆಸಿ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ನಾಲ್ಕು ದಿಕ್ಕುಗಳಲ್ಲೂ ಸಾಕ್ಷಿಗುಡ್ಡೆಗಳಾಗಿ ಅಭಿವೃದ್ಧಿ ಕಾರ್ಯಗಳು ಕಾಣುತ್ತಿದೆ. ಎಲ್ಲ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಯಿಂದಾಗಿ ಇಂದು ತಾಲೂಕಿನಲ್ಲಿ ಭೂಮಿ ಬೆಲೆ ಹೆಚ್ಚಿದೆ ಎಂದರು.

ನಮ್ಮಲ್ಲಿ ಅಧಿಕಾರವಿದ್ದಾಗ ಕೆಲವರು ವಲಸೆ ಹಕ್ಕಿಗಳಂತೆ ಬಂದು ಹಣ್ಣು ಹಂಪಲು ತಿಂದು ಈಗ ಮರ ಬಿಟ್ಟು ಬೇರೆ ಮರದ ಬಳಿಗೆ ಹೋಗಿದ್ದಾರೆ. ಅವರು ಸ್ವಾರ್ಥಿಗಳು. ಸಕ್ರಿಯ ರಾಜಕಾರಣಿಗಳಲ್ಲ. ಸ್ವಾರ್ಥಪರರು ಒಂದು ಕಡೆ ಇರಲು ಸಾಧ್ಯವಿಲ್ಲ. ಮೂರು ಬಾರಿ ಜೆಡಿಎಸ್‌ನಿಂದ ಕರೆತಂದು ನಗರಸಭೆ ಸದಸ್ಯ, ಅಧ್ಯಕ್ಷ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಆದರೆ ಅಧಿಕಾರ ಅನುಭವಿಸಿದ ಬಳಿಕ ತಿಂದ ಮನೆಗೆ ದ್ರೋಹ ಬಗೆದು ಹೋಗಿದ್ದಾರೆ. ಇಂತಹವರಿಗೆ ಇನ್ನೆಷ್ಟು ಮಾಡಿದರೂ ಅಷ್ಟೇ.

ನನ್ನ ಸುದೀರ್ಘ ರಾಜಕೀಯದಲ್ಲಿ ಸಾಕಷ್ಟು ಮಂದಿ ಕಂಡಿದ್ದೇನೆ. ಅಂತವರು ಪಕ್ಷ ಬಿಟ್ಟರೆ ತೊಂದರೆಯಿಲ್ಲ. ಅಂತಹವರು ಈಗಾಗಲೇ ಜನರ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದರು. ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೇದಲವೇಣಿ ವೇಣು, ಅಶ್ವತ್ಥನಾರಾಯಣ್, ಹಿಂದುಳಿದ ವರ್ಗಗಳ ಸಮಿತಿ ಅಧ್ಯಕ್ಷರಾದ ಬೆಸ್ಕಾಂ ಗಂಗಾಧರಪ್ಪ, ತಾರಾನಾಥ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಮರಳೂರು ಹನುಮಂತ ರೆಡ್ಡಿ, ತಾಪಂ ಮಾಜಿ ಉಪಾಧ್ಯಕ್ಷ ಎಚ್.ಎಂ. ಪ್ರಕಾಶ್ ರೆಡ್ಡಿ, ನಗರಸಭೆ ಸದಸ್ಯರಾದ ವಿ. ರಮೇಶ್, ಆರ್.ಪಿ. ಗೋಪಿನಾಥ್, ರಫೀಕ್, ಮುಖಂಡರಾದ ಖಾದರ್ ಸುಬಾನ್‌ಖಾನ್‌ಭಾನ್, ಕಾರ್ತಿಕ್, ಶ್ಯಾಮ್ಸುಂದರ್, ಜಾಲಹಳ್ಳಿ ವೇಣು, ಶ್ರೀಕಂಠಸ್ವಾಮಿ ಇದ್ದರು.

ಶಾಸಕರೊಂದಿಗೆ ಕೈಜೋಡಿಸಲ್ಲ

ತಾಲೂಕಿನಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಸ್ಥಳೀಯ ಸಂಸ್ಥೆ ವಿಚಾರದಲ್ಲಿ ಅನ್ಯಾಯವಾಗಿದೆ. ಈ ಸಂಬಂಧ ಸಿಎಂ, ಡಿಸಿಎಂ ಸಮಕ್ಷಮದಲ್ಲಿ ಸಭೆ ಕರೆದು ಸರಿಪಡಿಸುವುದಾಗಿ ಜಿಲ್ಲೆ ಸಚಿವರು ಭರವಸೆ ನೀಡಿದ್ದಾರೆ. ಆದರೆ ಕಾಲ ಪಕ್ವವಾಗಿಲ್ಲ. ಕಾರಣಾಂತರಗಳಿಂದ ಸಭೆ ಮುಂದೂಡಲಾಗುತ್ತಿದೆ. ಮುಂಬರುವ ಜಿಪಂ, ತಾಪಂ ಚುನಾವಣೆಗೆ ಸಿದ್ಧರಾಗೋಣ. ಪಕ್ಷವನ್ನು ಬೇರು ಮಟ್ಟದಲ್ಲಿ ಕಟ್ಟೋಣ ಎಂದ ಎನ್.ಎಚ್. ಶಿವಶಂಕರರೆಡ್ಡಿ, ಸಂಕ್ರಾಂತಿ ಬಳಿಕ ದಿನ ನಿಗದಿಪಡಿಸಿ ಗ್ರಾಮ ಗ್ರಾಮಕ್ಕೆ ತೆರಳೋಣ. ಯಾವುದೇ ಕಾರಣಕ್ಕೂ ಹಾಲಿ ಶಾಸಕರೊಂದಿಗೆ ಹೊಂದಾಣಿಕೆ, ಸ್ಥಾನ ಹಂಚಿಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

"ತಾಲೂಕಿನ ಜನತೆಗೆ ಈಗ ಅರಿವಾ ಗುತ್ತಿದೆ. ಆಡಳಿತ ವ್ಯವಸ್ಥೆ ಕುಸಿದಿದೆ. ಸೂಕ್ತ ರೀತಿಯಲ್ಲಿ ಜನರ ಕೆಲಸ ಕಾರ್ಯ ಗಳು ಆಗುತ್ತಿಲ್ಲ. ಸಾರ್ವಜನಿಕ ವಲಯದಲ್ಲಿ ಅಸಂತೃಪ್ತಿ ವ್ಯಕ್ತವಾಗುತ್ತಿದೆ. ಮುಂದಿನ ಎಲ್ಲ ಚುನಾವಣೆಗಳಲ್ಲಿ ಜನ ತಪ್ಪದೇ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ವಿಶ್ವಾಸವಿದೆ." - ಎನ್.ಎಚ್. ಶಿವಶಂಕರ ರೆಡ್ಡಿ,ಮಾಜಿ ಸಚಿವ "ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಜನ ಸರ್ಕಾರದ ಪರವಾಗಿದ್ದಾರೆ ಎಂಬುದು ಉಪಚುನಾವಣೆಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಜಿಲ್ಲೆಯಲ್ಲಿ ಶಿಡ್ಲಘಟ್ಟ ಮತ್ತು ಗೌರಿಬಿದನೂರಿನಲ್ಲಿ ಸ್ಥಳೀಯ ಸಂಸ್ಥೆಗಳ ವಿಚಾರದಲ್ಲಿ ಪಕ್ಷದ ಕಾರ್ಯಕರ್ತರಿಗೆ ಅನ್ಯಾಯವಾಗಿದೆ. ಈ ಸಂಬಂಧ ಈಗಾಗಲೇ ಪಕ್ಷದ ಅಧ್ಯಕ್ಷರ ಗಮನಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು." - ಕೆ.ಎನ್. ಕೇಶವರೆಡ್ಡಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net