

ಹರಿಹರ: ಒಂದೊಳ್ಳೆ ಪುಸ್ತಕ ನಮ್ಮ ಬದುಕಿಗೆ ದಾರಿದೀಪವಾಗಬಲ್ಲದು ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಾಯಾಧಿಕಾರಿ ಪಿ.ಆರ್. ತಿಪ್ಪೇಸ್ವಾಮಿ ಹೇಳಿದರು.
ನಗರದ ಶಾಖಾ ಗ್ರಂಥಾಲಯದಲ್ಲಿ ಮಂಗಳವಾರ ನಡೆದ ವಿಶ್ವ ಪುಸ್ತಕ ಮತ್ತು ಕೃತಿ ಸ್ವಾಮ್ಯ ದಿನಾಚರಣೆಯಲ್ಲಿ ನಾಟಕಕಾರ ವಿಲಿಯಂ ಶೇಕ್ಸ್‌ಪಿಯರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿ, ಪುಸ್ತಕಗಳು ಜ್ಞಾನ ನೀಡುವ ಜತೆಗೆ ಮನುಷ್ಯನ ಬದುಕಿಗೆ ದಾರಿ ದೀಪಗಳಾಗುತ್ತವೆ ಎಂದರು.
ಇಂದಿನ ಯುವಜನರಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಪುಸ್ತಕದ ಜಾಗವನ್ನು ಮೊಬೈಲ್ ಸಾಧನಗಳು ತುಂಬಿಕೊಳ್ಳುತ್ತಿವೆ. ಹಾಗಾಗಿ, ಪುಸ್ತಕ ಓದುವ ಹವ್ಯಾಸ ಬೆಳೆಸುವುದರೊಂದಿಗೆ ಪುಸ್ತಕ ಪ್ರಕಟಿಸುವ ಅಭಿರುಚಿ ಹೆಚ್ಚಿಸಲು ಮತ್ತು ಕೃತಿಸ್ವಾಮ್ಯದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಏ.23ರನ್ನು ಯುನೆಸ್ಕೋ ವಿಶ್ವ ಪುಸ್ತಕ ದಿನವೆಂದು ಘೋಷಿಸಿದೆ ಎಂದರು.
ಶಾಖಾ ಪ್ರಭಾರಧಾರಕ ರವಿಕುಮಾರ ಮಾತನಾಡಿ, ಪುಸ್ತಕಗಳನ್ನು ಅತಿಯಾಗಿ ಪ್ರೀತಿಸುವವರಿಗೆ, ಸದಾ ಅದರೊಂದಿಗೆ ಅನುಸಂಧಾನ ನಡೆಸುವವರಿಗೆ, ಅದರ ಮೂಲಕವೇ ದುಖ-ದುಮ್ಮಾನ ಕಳೆದು ಕೊಳ್ಳುವವರಿಗೆ, ಮನಸ್ಸನ್ನು ಮತ್ತಷ್ಟು ಪ್ರಜ್ವಲವಾಗಿಸಿಕೊಳ್ಳುವವರಿಗೆ, ಜ್ಞಾನ ವೃದ್ಧಿಗೆ ಪುಸ್ತಕಗಳೊಂದಿಗೆ ಒಡನಾಡುವವರಿಗೆ ಇದು ಸಂಭ್ರಮದ ದಿನಾಚರಣೆಯಾಗಿದೆ ಎಂದರು.
ಜಿಲ್ಲಾ ಕೇಂದ್ರ ಗ್ರಂಥಾಲಯದ ಕೆ.ಎಚ್. ಹರೀಶ್, ಮಂಜುನಾಥ ಬಗರಿ, ಗ್ರಂಥಾಲಯ ಸಹಾಯಕರಾದ ಮಹಾಸ್ವಾಮಿ. ಬಿ.ಇ., ಶೋಭಾ ಎಚ್.ಎನ್., ಸಂಜಯ್, ರಮೇಶ್ ಬೆಳ್ಳೂಡಿ ಮತ್ತು ಓದುಗರಿದ್ದರು.