ಹಕ್ಕುಪತ್ರಗಳಿಗೆ ಗೊಲ್ಲಹಳ್ಳಿ ಗ್ರಾಮಸ್ಥರ ಪಟ್ಟು

17 harohalli 2
Published on

ಹಾರೋಹಳ್ಳಿ: ಅರ್ಹರಿಗೆ ನಿವೇಶನ ಹಕ್ಕು ಪತ್ರಗಳ ವಿತರಣೆ ಎಲ್ಲಿಗೆ ಬಂತು? ಗ್ರಾಮಗಳಿಗೆ ಸ್ಮಶಾನ ಜಾಗವನ್ನು ಏಕೆ ಗುರುತು ಮಾಡಿಲ್ಲ? ಸಾರ್ವಜನಿಕರ ಕೆಲಸಗಳನ್ನು ಮಾಡದೆ ಏನು ಮಾಡುತ್ತಿದ್ದೀರಿ? ಎಂದು ಶಾಸಕ ಇಕ್ಬಾಲ್​ ಹುಸೇನ್​ ಅಧಿಕಾರಿಗಳನ್ನು ತರಾಟೆ ತೆಗೆದೊಕೊಂಡರು.

ವಿವಿಧ ಕಾಮಗಾರಿಗಳ ಸಂಕುಸ್ಥಾಪನೆ ನೆರವೇರಿಸಲು ತಾಲೂಕಿನ ಗೊಲ್ಲಹಳ್ಳಿಗೆ ಭೇಟಿ ನೀಡಿದಾಗ, ತಲೆಮಾರುಗಳಿಂದ ಸೂರು ಕಟ್ಟಿಕೊಂಡು ವಾಸಿಸುತ್ತಿದ್ದರೂ ನಮಗೆ ಹಕ್ಕು ಪತ್ರಗಳಿಲ್ಲ, ಸತ್ತರೆ ಹೂಳಲು ಸ್ಮಶಾನ ಸೇರಿ ಯಾವುದೇ ವ್ಯವಸ್ಥೆ ಇಲ್ಲ ಎಂದು ಗ್ರಾಮಸ್ಥರು ಶಾಸಕರ ಬಳಿ ಅಳಲು ತೋಡಿಕೊಂಡರಲ್ಲದೆ ಕೂಡಲೇ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಇಕ್ಬಾಲ್​ ಹುಸೇನ್​ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು, ಈ ವೇಳೆ ತಾಲೂಕು ಪಂಚಾಯಿತಿ ಇಒ ಅಪೂರ್ವ, ಹಕ್ಕು ಪತ್ರದ ಎಲ್ಲ ದಾಖಲೆಗಳನ್ನು ರಾಮನಗರ ಉಪವಿಭಾಗಾಧಿಕಾರಿಗಳಿಗೆ ಕಳುಹಿಸಲಾಗಿದೆ. ಈಗಾಗಲೇ ದಾಖಲಾತಿ ಪರಿಶೀಲನೆ ಪ್ರಗತಿಯಲ್ಲಿದ್ದು,

ಎಸಿ ಅವರಿಂದ ಬಂದ ನಂತರ ಗ್ರಾಮಸ್ಥರಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದರು.

ಕಂದಾಯ ನಿರೀಕ ನರೇಶ್​ ಮಾತನಾಡಿ, ಗ್ರಾಮದಲ್ಲಿ ಸ್ಮಶಾನಕ್ಕಾಗಿ 38 ಗುಂಟೆ ಜಾಗವನ್ನು ನೀಡಲಾಗಿದ್ದು, ಗ್ರಾಮಸ್ಥರು ಬಳಸಿಕೊಳ್ಳಲಿ ಎಂದಾಗ, ಗ್ರಾಮದಲ್ಲಿ ಗುರುತಿಸಿರುವ ಸ್ಮಶಾನದಲ್ಲಿ ಕೇವಲ ಒಂದು ಸಮುದಾಯದವರು ಅಂತ್ಯಕ್ರಿಯೆ ನಡೆಸುತ್ತಾರೆ, ನಮಗೆ ಅಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಸಮುದಾಯಗಳಿಗೆ ಪ್ರತ್ಯೇಕ ಸ್ಮಶಾನ ಜಾಗ ನೀಡಲು ಸಾಧ್ಯವಿಲ್ಲ. ಈಗ ನೀಡಿರುವ ಜಾಗವನ್ನೇ ಎಲ್ಲರೂ ಬಳಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net