

ವಿಜಯವಾಣಿ ಸುದ್ದಿಜಾಲ
ರಾಮನಗರ: ಚಿನ್ನ ಪಾಲಿಷ್ ಮಾಡುವ ನೆಪದಲ್ಲಿ ಚಿನ್ನ ಕದ್ದು ವಂಚಿಸಿದ ಇಬ್ಬರನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವುದು ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಕೆ.ಜಿ. ಹೊಸಹಳ್ಳಿಯಲ್ಲಿ ಶನಿವಾರ ಸಂಜೆ ನಡೆದಿದೆ.
ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಒಡಿಷಾ ಮೂಲದ ಇಬ್ಬರು ವ್ಯಕ್ತಿಗಳು ಗ್ರಾಮದ ಸುಧಾ ಎಂಬುವರ ಮನೆ ಬಳಿ ಹೋಗಿ ಚಿನ್ನ ಪಾಲಿಷ್ ಮಾಡಿಕೊಡುವುದಾಗಿ ನಂಬಿಸಿ ಆಕೆಯ ಕತ್ತಿನಲ್ಲಿದ್ದ ಮಾಂಗಲ್ಯ ಸರ ಬಿಚ್ಚಿಸಿಕೊಂಡು ಪಾಲಿಷ್ ಮಾಡಿ ಸರ ಕೊಟ್ಟು ಹೋಗಿದ್ದಾರೆ. ನಂತರ ಸರದ ತೂಕದ ಬಗ್ಗೆ ಅನುಮಾನಗೊಂಡ ಸುಧಾ ಪಕ್ಕದ ಮನೆಯವರ ಬಳಿ ವಿಚಾರ ಹಂಚಿಕೊಂಡಿದ್ದಾರೆ. ತೂಕದಲ್ಲಿ ವ್ಯತ್ಯಾಸ ಕಂಡುಬಂದಿದ್ದರಿಂದ ಎಚ್ಚೆತ್ತ ಗ್ರಾಮಸ್ಥರು ಇಬ್ಬರಿಗಾಗಿ ಹುಡುಕಾಟ ಮಾಡಿದ್ದಾರೆ. ಅಕ್ಕಪಕ್ಕದ ಗ್ರಾಮಗಳಲ್ಲಿ ಪರಿಚಯಸ್ಥರಿಗೆ ೋನಾಯಿಸಿ ವಂಚಕರ ಬಗ್ಗೆ ಮಾಹಿತಿ ನೀಡಿದ್ದಾರೆ. ಹೀಗೆ ವಿಷಯ ಸುತ್ತಮುತ್ತಲ ಗ್ರಾಮಗಳಲ್ಲಿ ಹರಿದಾಡಿದೆ. ವಂಚಕರು ಸಬ್ಬಕೆರೆ ಗ್ರಾಮದಲ್ಲಿರುವ ಬಗ್ಗೆ ತಿಳಿದ ಹೊಸಹಳ್ಳಿ ಗ್ರಾಮಸ್ಥರು ಇಬ್ಬರನ್ನು ಗ್ರಾಮಕ್ಕೆ ಕರೆತಂದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ರಾಮನಗರ ಗ್ರಾಮಾಂತರ ಠಾಣೆ ಸಬ್ಇನ್ಸ್ಪೆಕ್ಟರ್ ರಾಮಚಂದ್ರಯ್ಯ ಬಂದು ಕಳ್ಳರನ್ನು ವಶಕ್ಕೆ ಪಡೆದಿದ್ದಾರೆ.
ಗ್ರಾಮಕ್ಕೆ ಆಗಮಿಸಿದ ಗ್ರಾಮಾಂತರ ಠಾಣೆ ಎಸ್ಐ ರಾಮಚಂದ್ರಯ್ಯ ವಾಸ್ತವ ಅರಿಯದೇ ಗ್ರಾಮಸ್ಥರ ಮೇಲೆ ಹರಿಹಾಯ್ದರು. ಈ ವೇಳೆ ಗ್ರಾಮಸ್ಥರು ಕಳ್ಳರನ್ನು ಪೊಲೀಸರಿಗೆ ಒಪ್ಪಿಸಲು ನಿರಾಕರಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವಂತೆ ಪಟ್ಟು ಹಿಡಿದರು. ನಂತರ ಗ್ರಾಮಸ್ಥರನ್ನು ಸಮಾಧಾನಿಸಿದ ಎಸ್ಐ ರಾಮಚಂದ್ರಯ್ಯ, ದೂರುದಾರರಿಂದ ಮಾಹಿತಿ ಪಡೆದು ಕಳ್ಳರು ಕದ್ದಿರುವ ಚಿನ್ನವನ್ನು ವಾಪಸ್ ಕೊಡಿಸುವ ಭರವಸೆ ನೀಡಿ ಕಳ್ಳರನ್ನು ಠಾಣೆಗೆ ಕರೆದೊಯ್ದರು.
ಗ್ರಾಮಸ್ಥರು ವಿಷಯ ತಿಳಿಸಿದ ತಕ್ಷಣವೇ ಗ್ರಾಮಕ್ಕೆ ತೆರಳಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಅವರು ಉಪಯೋಗಿಸಿದ ಕೆಮಿಕಲ್ ಇತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕಾನೂನು ಕ್ರಮ ಜರುಗಿಸಿ ಮಹಿಳೆಗೆ ನ್ಯಾಯ ದೊರಕಿಸಲಾಗುವುದು.
ರಾಮಚಂದ್ರಯ್ಯ, ಸಬ್ಇನ್ಸ್ಪೆಕ್ಟರ್, ಗ್ರಾಮಾಂತರ ಠಾಣೆ, ರಾಮನಗರ.
50 ಗ್ರಾಂ, 30 ಆಯ್ತು
9 ತಿಂಗಳ ಮಗುವಿನೊಂದಿಗೆ ಮನೆ ಮುಂದೆ ಇದ್ದಾಗ ಇಬ್ಬರು ಬಂದು ಪೌಡರ್ ಕೊಟ್ಟು ಚಿನ್ನಕ್ಕೆ ತಿಕ್ಕಿ ಹೊಳಪು ಬರುತ್ತದೆ ಎಂದರು. ಪೌಡರ್ ತೆಗೆದುಕೊಂಡೆ ಅಷ್ಟೇ, ನಂತರ ಮಂಕು ಕವಿದಂತಾಗಿ ಮಾಂಗಲ್ಯ ಸರ ಬಿಚ್ಚಿಕೊಟ್ಟೆ. ಸರವನ್ನು ಯಾವುದೋ ನೀರಿನಲ್ಲಿ ಅದ್ದಿ ಹಿಂಗಿರುಗಿಸಿ ಹೊರಟು ಹೋದರು. ಆದರೆ, ಚಿನ್ನದ ತೂಕದಲ್ಲಿ ಅನುಮಾನ ಬಂದು ಪಕ್ಕದ ಮನೆಯವರಿಗೆ ವಿಷಯ ತಿಳಿಸಿದೆ. ಮಾಂಗಲ್ಯಸರ, ತಾಳಿ, ಗುಂಡು, ಕಾಸು ಸೇರಿ ಸುಮಾರು 50 ಗ್ರಾಂ ಚಿನ್ನವಿತ್ತು, ವಂಚಕರು ಯಾವುದೋ ನೀರಿನಲ್ಲಿ ಅದ್ದಿ ತೆಗೆದ ನಂತರ 37 ಗ್ರಾಂ ಆಗಿತ್ತು ಎಂದು ವಂಚನೆಗೊಳಗಾದ ಸುಧಾ ಹೇಳಿದರು.