

ಬೆಂಗಳೂರು: ಸ್ಟಾರ್ಟಪ್ ಆರಂಭಿಸಿ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲೇ ಉದ್ಯಮ ನಡೆಸುತ್ತಿರುವ ವ್ಯಕ್ತಿಯೊಬ್ಬ, ಬೆಂಗಳೂರಿನ ಬಗ್ಗೆ ತೀರಾ ಕಳಪೆ ನಗರ ಎನ್ನುವ ರೀತಿಯಲ್ಲಿ ಮಾತನಾಡಿದ್ದು, ಅದಕ್ಕೆ ತೆಲಂಗಾಣದ ಸಚಿವರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮಾತ್ರವಲ್ಲ, ಬೆಂಗಳೂರು ಬಿಟ್ಟು ಹೈದರಾಬಾದ್ಗೆ ಬನ್ನಿ ಎಂದೂ ಕರೆ ನೀಡಿದ್ದಾರೆ. ಇದನ್ನು ಗಮನಿಸಿದ ಸಚಿವ ಡಾ.ಕೆ. ಸುಧಾಕರ್ ಆ ಸಚಿವರಿಗೆ ದಿಟ್ಟ ಉತ್ತರವನ್ನೇ ನೀಡಿದ್ದಾರೆ.
ಭಾರತದ ಸಿಲಿಕಾನ್ ವ್ಯಾಲಿ ಎನಿಸಿಕೊಂಡಿರುವ ಬೆಂಗಳೂರಿನ ಎಚ್ಎಸ್ಆರ್/ಕೋರಮಂಗಲದಲ್ಲಿ ಸ್ಟಾರ್ಟಪ್ಗಳಿಂದ ಭಾರಿ ತೆರಿಗೆ ಸಂಗ್ರಹವಾಗುತ್ತಿದ್ದರೂ ಕೆಟ್ಟ ರಸ್ತೆಗಳು, ದಿನಾ ವಿದ್ಯುತ್ ಕಡಿತ, ಅಸಮರ್ಪಕ ನೀರು ಪೂರೈಕೆ, ಬಳಸಲು ಯೋಗ್ಯವಲ್ಲದ ಪಾದಚಾರಿ ರಸ್ತೆಗಳಿವೆ. ಎಷ್ಟೋ ಗ್ರಾಮೀಣ ಪ್ರದೇಶಗಳು ಭಾರತದ ಸಿಲಿಕಾನ್ ವ್ಯಾಲಿಗಿಂತ ಉತ್ತಮ ಮೂಲಸೌಕರ್ಯಗಳನ್ನು ಹೊಂದಿವೆ ಎಂದು ಸ್ಟಾರ್ಟಪ್ ಒಂದರ ಮಾಲೀಕ ತನ್ನ ಅನಿಸಿಕೆ ಹಂಚಿಕೊಂಡಿದ್ದರು.
ಉದ್ಯಮಿಯ ಟ್ವೀಟ್ಗೆ ಪ್ರತಿಕ್ರಿಯಿಸಿರುವ ತೆಲಂಗಾಣದ ನಗರಾಭಿವೃದ್ಧಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಕೆ.ಟಿ.ರಾಮರಾವ್, ಗಂಟುಮೂಟೆ ಕಟ್ಟಿಕೊಂಡು ಹೈದರಾಬಾದ್ಗೆ ಬನ್ನಿ. ನಮ್ಮಲ್ಲಿ ಉತ್ತಮ ಮೂಲಸೌಕರ್ಯ ಹಾಗೂ ಸಾಮಾಜಿಕ ಸೌಕರ್ಯವಿದೆ. ನಮ್ಮ ವಿಮಾನನಿಲ್ದಾಣ ಅತ್ಯುತ್ತಮವಾದವುಗಳಲ್ಲಿ ಒಂದು, ಸಿಟಿಯಿಂದ ಹೊರಗೆ ಹೋಗಿ ಬರುವುದು ಗಾಳಿಯಲ್ಲಿ ತೇಲಿದಂತೆ. ಎಲ್ಲಕ್ಕಿಂತ ಹೆಚ್ಚು ನಮ್ಮ ಸರ್ಕಾರ ಇನ್ನೋವೇಷನ್, ಇನ್ಫ್ರಾಸ್ಟ್ರಕ್ಚರ್, ಇನ್ಕ್ಲೂಸಿವ್ ಗ್ರೋಥ್ ಎಂಬ ಮೂರು ಐ ಮಂತ್ರಗಳ ಮೇಲೆ ಕೇಂದ್ರಿತವಾಗಿದೆ ಎಂದು ಹೇಳಿದ್ದಾರೆ.
ಕೆಟಿಆರ್ ಹೇಳಿಕೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಕ್ಕ ಉತ್ತರ ನೀಡಿದ್ದು, ಕೆಟಿಆರ್ ಅವರೇ, ನಮ್ಮ ಬೆಂಗಳೂರಿನ ಸ್ಪರ್ಧೆ ಭಾರತದ ಯಾವುದೇ ರಾಜ್ಯ ಅಥವಾ ನಗರಗಳ ಜೊತೆಯಲ್ಲ, ನಮ್ಮ ಸ್ಪರ್ಧೆ ಏನಿದ್ದರೂ ಸಿಲಿಕಾನ್ ವ್ಯಾಲಿಗಳಾದ ಸಿಂಗಾಪುರ, ಟೆಲ್ ಅವೈವ್ಗಳ ಜೊತೆ. ಬಹಳಷ್ಟು ದೇಶ-ರಾಜ್ಯಗಳ ಜನರಿಗೆ ಬೆಂಗಳೂರು ಆಶ್ರಯ-ಆತಿಥ್ಯ ನೀಡಿದೆ ಎಂಬ ಹೆಮ್ಮೆ ನಮಗಿದೆ ಎಂದು ಹೇಳಿದ್ದಾರೆ. ಬೆಂಗಳೂರನ್ನು ಟೀಕಿಸಿರುವ ಕನ್ನಡಿಗರು ಕೂಡ ಕಾಲೆಳೆಯುವ ಉತ್ತರವನ್ನು ನೀಡಿ ಎದಿರೇಟು ನೀಡಿದ್ದಾರೆ.