

ರಾಮನಗರ: ನಗರದ ಶಕ್ತಿ ದೇವತೆ ಶ್ರೀ ಚಾಮುಂಡೇಶ್ವರಿ ದೇವಿ ಕರಗ ಮಹೋತ್ಸವ ಮಂಗಳವಾರ ಅದ್ದೂರಿಯಾಗಿ ನಡೆಯಿತು. ಸಹಸ್ರಾರು ಭಕ್ತರು ಉತ್ಸವದಲ್ಲಿ ಭಾಗವಹಿಸಿ ದೇವಿ ದರ್ಶನ ಪಡೆದು ಕೃತಾರ್ಥರಾದರು.
ನಗರದೇವತೆ ತಾಯಿ ಚಾಮುಂಡೇಶ್ವರಿ ದೇವಿಯ ಐತಿಹಾಸಿಕ ಕರಗ ಮತ್ತು ಏಳು ಶಕ್ತಿ ದೇವತೆಗಳ ಹಬ್ಬದಿಂದಾಗಿ ಇಡೀ ರಾಮನಗರದಲ್ಲಿ ಸಡಗರ, ಸಂಭ್ರಮ ಮನೆಮಾಡಿತ್ತು. ಆಷಾಢ ಮಾಸದಲ್ಲಿ ನಡೆಯುವ ಕರಗ ಮಹೋತ್ಸವವು ಒಂಬತ್ತು ಶಕ್ತಿ ದೇವತೆಗಳ ಉತ್ಸವಕ್ಕೆ ಇಡೀ ನಗರವೇ ಬಣ್ಣಬಣ್ಣದ ದೀಪಾಲಂಕಾರಗಳಿಂದ ಕಂಗೊಳಿಸಿತು.
ವಿಶೇಷ ಪೂಜೆ: ಕರಗದ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಚಾಮುಂಡೇಶ್ವರಿ ದೇವಾಲಯದಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ವಿಶೇಷವಾಗಿ ತಂಬಿಟ್ಟಿನ ಆರತಿ ಪೂಜೆಯೊಂದಿಗೆ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿ ದೇವಿಯ ದರ್ಶನ ಪಡೆದರು. ಕರಗ ಮಹೋತ್ಸವದ ತೋಪ್ಖಾನ್ ಮೊಹಲ್ಲಾ ಮುತ್ತು ಮಾರಮ್ಮ, ಬಾಲಗೇರಿ ಬಿಸಿಲು ಮಾರಮ್ಮ, ಮಗ್ಗದಕೇರಿ ಮಾರಮ್ಮ, ಬಂಡಾರಮ್ಮ, ಶೆಟ್ಟಿಹಳ್ಳಿ ಬೀದಿ ಆದಿಶಕ್ತಿ ಅಮ್ಮ, ಐಜೂರು ಆದಿಶಕ್ತಿ, ಕೊಂಕಾಣಿದೊಡ್ಡಿ ಆದಿಶಕ್ತಿ ಅಮ್ಮ ದೇವಾಲಯಗಳಲ್ಲಿ ದೇವರಿಗೆ ಬಗೆಬಗೆಯ ಅಲಂಕಾರ ಮಾಡಲಾಗಿತ್ತು. ಚಾಮುಂಡೇಶ್ವರಿ ದೇವಾಲಯದಲ್ಲಿ ಬೆಳಗ್ಗೆ ಮಡಿ ನೀರು ಕರಗ ನಡೆಯಿತು. ಮಧ್ಯಾಹ್ನದ ನಂತರ ಅಗ್ನಿಕೊಂಡೋತ್ಸವಕ್ಕೆ ಭಕ್ತರು ಜಾನುವಾರು, ಟ್ರಾ$್ಯಕ್ಟರ್ಗಳಲ್ಲಿ ಸೌದೆ ತಂದು ಸಮರ್ಪಿಸಿದರು. ಈ ವೇಳೆ ಡೊಳ್ಳು, ವೀರಗಾಸೆ, ಪೂಜಾ ಕುಣಿತ, ಚಿಲಿಪಿಲಿ ಗೊಂಬೆ ಇತರ ಜನಪದ ಕಲಾ ಮೇಳದೊಂದಿಗೆ ಯಳವಾರ ಸೌದೆ ತರಲಾಯಿತು. ಸಂಜೆ ಅಗ್ನಿಕೊಂಡೋತ್ಸವಕ್ಕೆ ಅಗ್ನಿ ಸ್ಪರ್ಶ ನಡೆಯಿತು. ಬುಧವಾರ ಬೆೆಳಗ್ಗೆ ಶ್ರೀ ಚಾಮುಂಡೇಶ್ವರಿ ಕರಗಧಾರಕ ದೇವಿಪ್ರಸಾದ್ ಸಿಂಗ್ 26ನೇ ಬಾರಿಗೆ ಅಗ್ನಿಕೊಂಡೋತ್ಸವ ನಡೆಸಿಕೊಡಲಿದ್ದಾರೆ.
ಕಳೆ ಕಟ್ಟಿದ ಅಂಗಡಿ ಜೋಡಣೆ
ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ರಸಮಂಜರಿ ಮತ್ತು ವೇದಿಕೆ ಕಾರ್ಯಕ್ರಮಕ್ಕೆ ಜನರು ಆಗಮಿಸುವ ಕಾರಣ ಜತೆಗೆ ಆಟದ ಪರಿಕರ ಜೋಡಣೆ ಒಂದು ವಾರವಿರುವ ಕಾರಣ ಮಕ್ಕಳ ಆಟದ ಸಾಮಾನು, ಮತ್ತಿತರ ಅಂಗಡಿಗಳನ್ನು ಸಾಲು ಸಾಲಾಗಿ ಜೋಡಣೆ ಮಾಡಿದ್ದರು. ಭರ್ಜರಿಯಾಗಿ ವ್ಯಾಪಾರ ನಡೆಸಿದರು.
ಕಣ್ತುಂಬಿಕೊಂಡ ಭಕ್ತರು
ಶ್ರೀ ಚಾಮುಂಡೇಶ್ವರಿ ಇಡೀ ದೇವಾಲಯವನ್ನು ವಿಶೇಷವಾಗಿ ಬಣ್ಣ ಬಣ್ಣದ ಹೂಗಳಿಂದ ಅಲಂಕಾರ ಮಾಡಲಾಗಿದ್ದು, ದೇವರಿಗೆ ಮಲ್ಲಿಗೆ ಹೂ ಸೇರಿ ಆಭರಣಗಳಿಂದ ಅಲಂಕರಿಸಿದ್ದನ್ನು ಭಕ್ತರು ನೋಡಿ ಖುಷಿಪಟ್ಟರು.
ಗಣ್ಯರಿಂದ ಪೂಜೆ
ಸಂಸದ ಡಾ.ಸಿ.ಎನ್ ಮಂಜುನಾಥ್ ಶ್ರೀ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಐಜೂರಿನ ಆದಿಶಕ್ತಿ, ಬಾಲಗೇರಿಯ ಬಿಸಿಲು ಮಾರಮ್ಮ, ಮಗ್ಗದ ಕೇರಿ ಮಾರಮ್ಮ ಸೇರಿದಂತೆ ಇತರ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಸ್ಥಳಿಯ ಮುಖಂಡರೊಂದಿಗೆ ಚಾಮುಂಡೇಶ್ವರಿ ದೇವಿ ಸೇರಿ ಎಲ್ಲ ಶಕ್ತಿ ದೇವಾಲಯಗಳಿಗೆ ಸಂಪ್ರದಾಯದಂತೆ ಮಡಿಲಕ್ಕಿ ನೀಡಿದರು. ಮತ್ತೊಂದೆಡೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಸೇರಿ ಇತರ ಮುಖಂಡರು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ರಸ ಮಂಜರಿ ಕಾರ್ಯಕ್ರಮ
ಮಳೆಗಾಲದಲ್ಲಿ ಆಗಸದಿಂದ ಬೀಳಬೇಕಿದ್ದ ಹನಿಗಳು ಇತ್ತ ಮುಖ ಮಾಡಿಲ್ಲ. ಆದರೆ, ಕಲಾವಿದರ ಹಾಡಿಗೆ ಸಿಳ್ಳೆ ಚಪ್ಪಾಳೆಗಳ ರೂಪದಲ್ಲಿ ವ್ಯಾಪಿಸುವ ಮೂಲಕ ಜನತೆ ಸಂತಸದ ಮಳೆಯಲ್ಲಿ ತೊಯ್ಯುವಂತೆ ಮಾಡಿತು... ಇಂತಹ ಅಪರೂಪದ ಣಕ್ಕೆ ಸಾಯಾಗಿದ್ದು ರಾಮನಗರ ಜಿಲ್ಲಾ ಕ್ರೀಡಾಂಗಣ.ರಾಮನಗರನಗರದ ಶಕ್ತಿ ದೇವತೆ ಚಾಮುಂಡೇಶ್ವರಿ ಕರಗ ಮಹೋತ್ಸವ ಅಂಗವಾಗಿ ಮಂಗಳವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶಾಸಕ ಇಕ್ಬಾಲ್ ಹುಸೇನ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಪಾಲ್ಗೊಳ್ಳುವ ಮೂಲಕ ಸಂಗೀತ ರಸ ಸಂಜೆಯನ್ನು ಸಂಭ್ರಮಿಸಿದರು. ರಾಜ್ ಇವೆಂಟ್ಸ್ ಅವರ ನಿರ್ವಹಣೆಯಲ್ಲಿ ಹಾಗೂ ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಮೂಡಿಬಂದ ಕಾರ್ಯಕ್ರಮದಲ್ಲಿ ಪ್ರತಿ ಹಾಡಿಗೂ ಹೆಜ್ಜೆ ಹಾಕಿ ಸಂಭ್ರಮಿಸಿದರು.