

ಗೌರಿಬಿದನೂರು : ಬಸವಣ್ಣನವರ ಕಾಯಕವೇ ಕೆಲಾಸ ಎಂಬ ತತ್ವವನ್ನು ಚಾಚೂ ತಪ್ಪದೇ ಪಾಲಿಸಿದವರು ಶತಾಯುಷಿ ಶಿವಕುಮಾರ ಸ್ವಾಮೀಜಿಗಳು. ಅವರ ಜೀವನ ಇತರರಿಗೆ ಸ್ಫೂರ್ತಿ ಎಂದು ನಗರ ಪೊಲೀಸ್ ಠಾಣೆ ಪಿಎಸ್‌ಐ ಗೋಪಾಲ್ ಸ್ಮರಿಸಿದರು.
ನಗರದ ಎಂ.ಜಿ.ವೃತದಲ್ಲಿ ಶ್ರೀಶಿವಕುಮಾರ ಸ್ವಾಮೀಜಿ ಭಕ್ತವೃಂದ ಹಮ್ಮಿಕೊಂಡಿದ್ದ ಶ್ರೀಗಳ 118ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅತ್ಯಂತ ಸರಳ ಹಾಗೂ ಸಾರ್ಥಕ ಜೀವನ ನಡೆಸಿ ಹಲವರಿಗೆ ಭವಿಷ್ಯ ಕಲ್ಪಿಸಿದರು. ಜನ ಸೇವೆಯೇ ಜನಾರ್ದನ ಸೇವೆ ಎಂದು ನಿಸ್ವಾರ್ಥದಿಂದ ಬದುಕಿ ಎಲ್ಲರಿಗೂ ಮಾದರಿಯಾದರು. ಅವರ ಸರಳತೆಯ ತತ್ವಗಳನ್ನು ಎಲ್ಲರೂ ಅಳವಡಿಸಿಕೊಂಡಲ್ಲಿ ಜೀವನ ಸುಂದರವಾಗಲಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಜಯಣ್ಣ ಮಾತನಾಡಿ, ಶ್ರೀ ಶಿವಕುಮಾರ ಸ್ವಾಮಿಜಿ ಅವರು ನಾಡಿಗೆ ಅಧ್ಯಾತ್ಮದ ಮಾರ್ಗ ತೋರಿದ ಸಂತ. ಬಡ ಮಕ್ಕಳಿಗೆ ದಾರಿ ತೋರಿದ ದೇವರು. ಯಾವುದೇ ಜಾತಿ ಧರ್ಮಗಳ ಭೇದವಿಲ್ಲದೆ ಲಕ್ಷಾಂತರ ಜನರಿಗೆ ದಾರಿ ದೀಪವಾದ ಸಿದ್ಧಗಂಗಾಶ್ರೀಗಳು ಅನ್ನ, ಅಕ್ಷರ, ಆಶ್ರಯ ನೀಡಿ ತ್ರಿವಿಧ ದಾಸೋಹಿಯಾಗಿ, ಭಕ್ತರಿಂದ ನಡೆದಾಡುವ ದೇವರು ಎಂದು ಕರೆಸಿಕೊಂಡ ಮಹಾಸಂತ. ಅವರ ಜೀವನ ಚರಿತ್ರೆ ಹಾಗೂ ಸಾಧನೆಯನ್ನು ಯುವ ಪೀಳಿಗೆ ತಿಳಿದುಕೊಳ್ಳಬೇಕು ಎಂದರು.
ನಗರಸಭೆ ಸದಸ್ಯ ಮಾರ್ಕೆಟ್ ಮೋಹನ್, ಮುಖಂಡರಾದ ವೆಂಕಟ್, ರಾಜಣ್ಣ, ಹಿರೇಬಿದನೂರು ಮಂಜುನಾಥ್, ಪ್ರವೀಣ್ ಇದ್ದರು.