

ವಿಜಯವಾಣಿ ಸುದ್ದಿಜಾಲ ಕಡಬ
ಕಡಬ ಪೇಟೆಯಲ್ಲಿ ಅಲೆದಾಡುತ್ತಿದ್ದ 11 ಆಡುಗಳನ್ನು ಪಟ್ಟಣ ಪಂಚಾಯಿತಿ ವಶಕ್ಕೆ ಪಡೆದಿದ್ದು, ವಾರಸುದಾರರು ದಂಡ ಪಾವತಿಸಿ ಆಡುಗಳನ್ನು ಕೊಂಡೊಯ್ಯುವಂತೆ ಸೂಚನೆ ನೀಡಲಾಗಿದೆ.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಆಡುಗಳು, ಜಾನುವಾರುಗಳು ಅಲೆದಾಡುತ್ತಿದ್ದು, ಸಾರ್ವಜನಿಕರ ದೂರಿನ ಮೇರೆಗೆ ಪಟ್ಟಣ ಪಂಚಾಯಿತಿ ವತಿಯಿಂದ ಅನೇಕ ಬಾರಿ ಎಚ್ಚರಿಕೆ ಪ್ರಕಟಣೆ ಹೊರಡಿಸಲಾಗಿತ್ತು. ಇದಕ್ಕೆ ಬಗ್ಗದ ಕೆಲವು ಮಾಲೀಕರು ತಮ್ಮ ಆಡು, ಜಾನುವಾರುಗಳನ್ನು ರಸ್ತೆ ಮೇಲೆ ಬಿಡುತ್ತಿದ್ದರು.
ಪಟ್ಟಣ ಪಂಚಾಯಿತಿಗೆ ಆಡುಗಳ ಅಲೆದಾಟ ಸಮಸ್ಯೆಯಾಗಿ ಪರಿಣಮಿಸಿದ್ದು, ಜತೆಗೆ ಸಾರ್ವಜನಿಕರೂ ಸಾಮಾಜಿಕ ಜಾಲತಾಣ ಮೂಲಕ ಪಟ್ಟಣ ಪಂಚಾಯಿತಿ ಕಾರ್ಯವೈಖರಿ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಆಡಳಿತ ವರ್ಗದ ಕ್ರಮಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಕೆಲವು ದಿನಗಳ ಹಿಂದೆ ಪಟ್ಟಣ ಪಂಚಾಯತಿ ಸಿಬ್ಬಂದಿ ಆಡು ಮಾಲಕರ ಮನೆಗೆ ತೆರಳಿ ರಸ್ತೆಗೆ ಆಡುಗಳು, ಜಾನುವಾರುಗಳನ್ನು ಬಿಡದಂತೆ ವಿನಂತಿಸಿದ್ದರು. ಇದಕ್ಕೂ ಬಗ್ಗದ ಮಾಲೀಕರು ಚಾಳಿಯನ್ನು ಮುಂದುವರಿಸಿದ್ದು, ಆಡುಗಳನ್ನು ವಶಕ್ಕೆ ಪಡೆದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ದಂಡ ಪಾವತಿಸದೆ ಆಡುಗಳನ್ನು ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಸಾಕುಪ್ರಾಣಿಗಳನ್ನು ಪೇಟೆಗೆ, ರಸ್ತೆಗಳಿಗೆ ಬಿಡಬೇಡಿ ಎಂದು ಈಗಾಗಲೇ ಸಾಕಷ್ಟು ಬಾರಿ ಎಚ್ಚರಿಸಿದ್ದೇವೆ. ಮಾಲೀಕರು ಎಚ್ಚರಿಕೆಗೂ ಬಗ್ಗದೆ ಇದ್ದಿದ್ದರಿಂದ ಸಾಕುಪ್ರಾಣಿಗಳನ್ನು ವಶಕ್ಕೆ ಪಡೆಯಲಾಗಿದೆ. ದಂಡ ಪಾವತಿಸಿದರೆ ಮಾತ್ರ ಪ್ರಾಣಿಗಳನ್ನು ಹಿಂದಿರುಗಿಸಲಾಗುತ್ತದೆ. ಇಲ್ಲದಿದ್ದರೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ.- ಲೀಲಾವತಿ, ಕಡಬ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ. https://www.vijayavani.net/a-fire-broke-out-at-a-boat-spare-parts-store