

ಕುಕನೂರು: ಆಧುನಿಕ ತಂತ್ರಜ್ಞಾನ ಬಳಕೆಗೆ ಅಗತ್ಯವಿರುವ ಕೌಶಲ ಕಲಿತರೆ ಮಾತ್ರ ಉದ್ಯೋಗ ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದು ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ಡಾ.ವೀರೂಪಾಕ್ಷಿ ಬಾಗೋಡಿ ಹೇಳಿದರು.
ತಾಲೂಕಿನ ತಳಕಲ್ ಗ್ರಾಮದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸ್ನಾತಕೋತ್ತರ ವಿಭಾಗ ಮತ್ತು ಕೌಶಲ ಅಭಿವೃದ್ಧಿ ಕೇಂದ್ರ ಹಾಗೂ ಮೇದಿನಿ ಟೆಕ್ನಾಲಜೀಸ್ ಬೆಂಗಳೂರು ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ನಾಲ್ಕು ವಾರಗಳ ಇಂಟರ್ನ್ಶಿಪ್ ಹಾಗೂ ಐದು ದಿನಗಳ ಉಪನ್ಯಾಸಕರ ತರಬೇತಿ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ: ಅಂಕದೊಂದಿಗೆ ಪೂರಕ ಕೌಶಲ ಅಳವಡಿಸಿಕೊಳ್ಳಿ
ದಿನದಿಂದ ದಿನಕ್ಕೆ ತಂತ್ರಜ್ಞಾನ ಬೆಳೆಯುತ್ತಿದ್ದು, ಅದಕ್ಕೆ ತಕ್ಕಂತೆ ನಾವು ಕೂಡ ಬದಲಾವಣೆಯಾಗಬೇಕು. ಹೊಸ ತಂತ್ರಜ್ಞಾನ ಬಳಕೆಯ ಬಗ್ಗೆ ಜ್ಞಾನ ಪಡೆದುಕೊಳ್ಳಬೇಕು. ಇಂತಹ ತರಬೇತಿ ಪಡೆದುಕೊಳ್ಳುವ ಮೂಲಕ ಸ್ವಯಂ ಉದ್ಯೋಗ ಸೃಷ್ಠಿಸಿಕೊಳ್ಳಬಹುದು ಎಂದರು.
ಮೇದಿನಿ ಟೆಕ್ನಾಲಜೀಸ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಕಲ್ಲೂರ್ ಮಾತನಾಡಿದರು. 70 ವಿದ್ಯಾರ್ಥಿಗಳು ಹಾಗೂ 30 ಉಪಾನ್ಯಾಸಕರು ಈ ಕಾರ್ಯಗಾರದಲ್ಲಿ ಭಾಗವಹಿಸಿದರು. ವಿಟಿಯು ಸ್ನಾತಕೋತ್ತರ ವಿಭಾಗ ಮತ್ತು ಕೌಶಲ ಅಭಿವೃದ್ಧಿ ಕೇಂದ್ರ ವಿಶೇಷ ಅಧಿಕಾರಿ ಡಾ.ವೈ.ಎಚ್.ಬಸವರಾಜಪ್ಪ, ಮೇದಿನಿ ಟೆಕ್ನಾಲಜಿಸ್ ನಿರ್ದೇಶಕ ಅಭಿನಂದನ್ ಕಬ್ಬೂರ್, ಡಾ. ವಿಶಾಲ್ ಪಾಟೀಲ್ ಇತರರಿದ್ದರು.