

ಕಲಬುರಗಿ: ಮಕ್ಕಳು ಕೇವಲ ಅಂಕಗಳಿಗೆ ಒತ್ತು ನೀಡಿದರೆ ಸಾಲದು, ಸಾಧನೆಗಳಿಗೆ ಪೂರಕವಾದ ಕೌಶಲಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಶೈಕ್ಷಣಿಕ ವಿಭಾಗದ ನಿರ್ದೇಶಕ ಪ್ರೊ.ಬಸವರಾಜ ಡೋಣೂರ ಸಲಹೆ ನೀಡಿದರು.
ಕರುಣೇಶ್ವರ ನಗರದ ವಿವೇಕಾನಂದ ವಿದ್ಯಾನಿಕೇತನ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ಶ್ರೇಷ್ಠತಾ ಸಾಧನೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸಕಾರಾತ್ಮಕ ಕೌಶಲಗಳು ಯಶಸ್ಸಿನ ಮೊದಲ ಸೋಪಾನವಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಎಚ್ಚರ ವಹಿಸಬೇಕಾಗಿದೆ. ವಿದ್ಯಾರ್ಥಿಗಳು ತಮ್ಮ ತರಗತಿ ಮತ್ತು ಪರಿಸರದಲ್ಲಿನ ಸಕಾರಾತ್ಮಕ ಅಂಶಗಳನ್ನು ಕುತೂಹಲದಿಂದ ಆಲಿಸುವುದನ್ನು ಕಲಿಯಬೇಕು ಎಂದು ಹೇಳಿದರು.
ಪರಸ್ಪರ ಪ್ರೀತಿ, ಕರುಣೆ, ಸಹಾನುಭೂತಿ ಮತ್ತು ಕ್ಷಮಿಸುವ ವಿಶಾಲ ಮನೋಭಾವ ಇದ್ದಾಗ ಮಾತ್ರ ನಮ್ಮ ವ್ಯಕ್ತಿತ್ವದಲ್ಲಿ ಸಕಾರಾತ್ಮಕತೆ ನೆಲೆಸುತ್ತದೆ. ಪ್ರೀತಿ ಇದ್ದಲ್ಲಿ ದೇವರಿರುತ್ತಾನೆ. ಹೀಗಾಗಿ ಎಂಥಹ ಸಂದರ್ಭ ಎದುರಾದರೂ ದ್ವೇಷ ಮನೋಭಾವ ಮನಸ್ಸಿನಲ್ಲಿ ಜಾಗೃತಗೊಳ್ಳದಂತೆ ಎಚ್ಚರ ವಹಿಸಬೇಕೆಂದು ಎಂದರು.
ವಿವೇಕಾನಂದ ಎಜ್ಯುಕೇಷನಲ್ ಟ್ರಸ್ಟ್ ಅಧ್ಯಕ್ಷೆ ಸುವರ್ಣಾ ಭಗವತಿ ಅಧ್ಯಕ್ಷತೆ ವಹಿಸಿದ್ದರು. ಸಿಯುಕೆ ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ರೊಮೆಟ್ ಜಾನ್, ಸಹಾಯಕ ಪ್ರಾಧ್ಯಾಪಕ ಡಾ.ವಿಜಯೇಂದ್ರ ಪಾಂಡೆ, ಪ್ರಾಂಶುಪಾಲ ಸಿದ್ದಪ್ಪ ಭಗವತಿ ಇತರರಿದ್ದರು. 8ರಿಂದ 10ನೇ ತರಗತಿಯ ತಲಾ 25 ವಿದ್ಯಾರ್ಥಿಗಳ ಒಟ್ಟು 10 ಪ್ರತ್ಯೇಕ ತಂಡಗಳಿಗೆ ಸಮಾಲೋಚನೆಯ ಮೂಲಕ ಆಪ್ತ ಸಲಹೆ ನೀಡಲಾಯಿತು.
ಸಿದ್ಧಾರ್ಥ ಒಂದೇ ದಿನದಲ್ಲಿ ಗೌತಮ ಬುದ್ಧನಾಗಲಿಲ್ಲ. ತನ್ನ ಸುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೋದಂತೆಲ್ಲಾ ಜ್ಞಾನೋದಯಕ್ಕೆ ಸಮೀಪವಾಗುತ್ತಾ ಹೋಗಿದ್ದರಿಂದ ಮುಂದೊಂದು ದಿನ ಇಡೀ ವಿಶ್ವದ ಬೆಳಕಾದನು. ಪ್ರತಿ ವ್ಯಕ್ತಿಯಲ್ಲೂ ಬುದ್ಧನಿದ್ದಾನೆ. ನಮ್ಮೊಳಗಿನ ಬುದ್ಧನನ್ನು ಜಾಗೃತಗೊಳಿಸಬೇಕಾದರೆ ಅದಕ್ಕೆ ತಾಳ್ಮೆ ಮತ್ತು ಕ್ಷಮಾಗುಣ ಅಗತ್ಯವಾಗಿದೆ.
| ಪ್ರೊ.ಬಸವರಾಜ ಡೋಣೂರ ಶೈಕ್ಷಣಿಕ ವಿಭಾಗದ ನಿರ್ದೇಶಕ, ಕೇಂದ್ರೀಯ ವಿಶ್ವವಿದ್ಯಾಲಯ