ಎಚ್.ಡಿ.ಕೋಟೆ: ತಾರಕ ಜಲಾಶಯಕ್ಕೆ ಮೀನು ಹಿಡಿಯಲು ಹೋದ ವ್ಯಕ್ತಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.
ತಾಲೂಕಿನ ಹುಣಸೆಕುಪ್ಪೆ ಹಾಡಿಯ ಸುರೇಶ (41) ಮೃತ ವ್ಯಕ್ತಿ. ಗುರುವಾರ ಹುಣಸೆಕುಪ್ಪೆ ಹಾಡಿಯಿಂದ ಸುರೇಶ್ ಹಾಗೂ ಮತ್ತೊಬ್ಬ ಮೀನು ಹಿಡಿಯಲು ತಾರಕ ಜಲಾಶಯಕ್ಕೆ ತೆರಳಿದ್ದರು. ಜಲಾಶಯಕ್ಕೆ ಇಳಿಯುವ ಸಂದರ್ಭದಲ್ಲಿ ಕಾಲು ಜಾರಿದ್ದು ನೀರಿಗೆ ಬಿದ್ದಿದ್ದಾರೆ. ಈಜಲು ಆಗದೆ ಸುರೇಶ್ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಸುರೇಶ್ ಜತೆಯಲ್ಲಿದ್ದ ಮತ್ತೊಬ್ಬ ಕೂಡಲೇ ಹಾಡಿ ನಿವಾಸಿಗಳಿಗೆ ಮಾಹಿತಿ ನೀಡಿದ ಸ್ಥಳಕ್ಕೆ ಬಂದ ಹಾಡಿಯ ಜನರು ಮೃತದೇಹವನ್ನು ನೀರಿನಿಂದ ಹೊರತೆಗೆದು ಹಾಡಿಗೆ ಕೊಂಡೊಯರು.
ಈ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಬಂದ ಅಂತರಸಂತೆ ಪೊಲೀಸರು ಶುಕ್ರವಾರ ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಿದರು. ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.