

ಮೋಕಾ (ಮಾರಿಷಸ್): ಸೌರಶಕ್ತಿ ( Solar energy ) ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಬಲ ತುಂಬುವ ಉದ್ದೇಶದಿಂದ ಮಾರಿಷಸ್ನಲ್ಲಿ ಇತ್ತೀಚೆಗೆ ಜಾಗತಿಕ ಮಟ್ಟದ ಸಮಾವೇಶ ನಡೆಯಿತು. ಇಂಟರ್ನ್ಯಾಷನಲ್ ಸೋಲಾರ್ ಅಲಯನ್ಸ್ (ಐಎಸ್ಎ) ಮತ್ತು ಮಾರಿಷಸ್ನ ಉದ್ಯಮ ರಂಗದ ಪ್ರಾತಿನಿಧಿಕ ಸಂಸ್ಥೆಯಾದ ಬಿಜಿನೆಸ್ ಮಾರಿಷಸ್ (ಬಿಎಂ) ಸಹಯೋಗದಲ್ಲಿ ನಡೆದ ಸೋಲಾರ್ಎಕ್ಸ್ ಆಕ್ಸಲೇಟರ್ ಪ್ರೋಗ್ರಾಂ ಎಂಬ ಹೆಸರಿನ ಈ ಕಾರ್ಯಕ್ರಮದಲ್ಲಿ ಏಷ್ಯಾ ಮತ್ತು ಎಪಿಎಸಿ (ಅಪಾಕ್) ವಲಯದ 35 ಸ್ಟಾರ್ಟಪ್ಗಳು ಭಾಗವಹಿಸಿದ್ದವು.
ಸೌರಶಕ್ತಿ ಮತ್ತು ನವೀಕರಿಸಬಹುದಾದ ಇಂಧನ ತಂತ್ರಜ್ಞಾನಗಳ ಮೇಲೆ ಗಮನ ಕೇಂದ್ರೀಕರಿಸಿ ಸ್ಟಾರ್ಟಪ್ಗಳ ಬೆಂಬಲ, ಸಬಲೀಕರಣ ಮತ್ತು ಮಾರ್ಗದರ್ಶನ ಈ ಕಾರ್ಯಕ್ರಮದ ಗುರಿಯಾಗಿದೆ. ಸೌರ ಇಂಧನ ಕ್ಷೇತ್ರದಲ್ಲಿ ಆವಿಷ್ಕಾರಕ ಮತ್ತು ಕಡಿಮೆ ವೆಚ್ಚದ ಪರಿಹಾರಗಳನ್ನು ಕಂಡುಕೊಳ್ಳುವ ಸ್ಟಾರ್ಟಪ್ಗಳನ್ನು ಗುರುತಿಸಿ ಅವುಗಳಿಗೆ ಬೆಂಬಲ ನೀಡುವಂತೆ ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ.
ಕಾರ್ಬನ್- ತಟಸ್ಥ ಆರ್ಥಿಕತೆ: ಪರಿಸರ ರಕ್ಷಣೆಗಾಗಿ ಹಾಗೂ ಕಾರ್ಬನ್-ತಟಸ್ಥ ಆರ್ಥಿಕತೆಯತ್ತ ಜಗತ್ತನ್ನು ಪರಿವರ್ತಿಸುವುದು ಐಎಸ್ಎ ಮತ್ತು ಬಿಎಂ ನಡುವಿನ ಸಹಕಾರದ ಉದ್ದೇಶವಾಗಿದೆ. ನವೀಕರಿಸಬಹುದಾದ ಇಂಧನವನ್ನು ಅಳವಡಿಸಿಕೊಂಡು ಜಾಗತಿಕ ಸುಸ್ಥಿರತೆ ಗುರಿಗಳನ್ನು (ಜಿಎಸ್ಡಿ) ಸಾಧಿಸಲು ನಿರ್ಣಾಯಕವಾದ ಆವಿಷ್ಕಾರಗಳ ಮೇಲೆ ಗಮನ ಕೇಂದ್ರೀಕರಿಸಲಾಗುತ್ತದೆ.
2015ರಲ್ಲಿ ಪ್ಯಾರಿಸ್ನಲ್ಲಿ ನಡೆದ ಸಿಒಪಿ21 ಶೃಂಗಸಭೆಯಲ್ಲಿ ಭಾರತ ಮತ್ತು ಫ್ರಾನ್ಸ್ ಜತೆಯಾಗಿ ಜಾಗತಿಕ ಉಪಕ್ರಮವಾದ ಇಂಟರ್ನ್ಯಾಷನಲ್ ಸೋಲಾರ್ ಅಲಯನ್ಸ್ (ಐಎಸ್ಎ) ಅನ್ನು ಆರಂಭಿಸಿದ್ದವು. 123 ದೇಶಗಳು ಅದಕ್ಕೆ ಸಹಿ ಹಾಕಿವೆ.
ಸೌರ ಇಂಧನವನ್ನು ಹರಡುವ ತನ್ನ ಯೋಜನೆ ಭಾಗವಾಗಿ ಯುವಜನರ ಸಬಲೀಕರಣ, ಆವಿಷ್ಕಾರಕ್ಕೆ ಉತ್ತೇಜನ ನೀಡಿಕೆ ಹಾಗೂ ಉದ್ಯೋಗಗಳ ಸೃಷ್ಟಿಗೆ ಐಎಸ್ಎ ಬದ್ಧವಾಗಿದೆ ಎಂದು ಮಹಾ ನಿರ್ದೇಶಕ ಆಶಿಶ್ ಖನ್ನಾ ಹೇಳಿದರು. ಆಫ್ರಿಕಾ ಮತ್ತು ಏಷ್ಯಾ ಪೆಸಿಫಿಕ್ ವಲಯಗಳ ಉದ್ಯಮಿಗಳು ಅಮೂಲ್ಯ ತಂತ್ರಜ್ಞಾನಗಳ ವರ್ಗಾವಣೆಗೆ ಮಹತ್ವದ ಕೊಡುಗೆ ನೀಡುವ ವಿಶ್ವಾಸವಿದೆ. ಇದರಿಂದ ನಾನಾ ದೇಶಗಳಲ್ಲಿ ಇಂಧನ ಪರಿವರ್ತನೆಗೆ ಸಹಾಯವಾಗಲಿದೆ. ನೈಜೀರಿಯಾದಲ್ಲಿ ಅಭಿವೃದ್ಧಿಪಡಿಸಿದ ಪರಿಹಾರವೊಂದನ್ನು ಭಾರತದಲ್ಲಿ ಅಳವಡಿಸಿಕೊಳ್ಳಬಹುದು. ಫಿಜಿಯ ಒಂದು ಸೌರ ಅಪ್ಲಿಕೇಶನ್ ಪೆಸಿಫಿಕ್ ವಲಯದ ಎಲ್ಲ ದ್ವೀಪಗಳಲ್ಲಿ ಅಳವಡಿಸಲು ಅರ್ಹವಾಗಿವೆ ಎಂದರು.
2017ರ ಡಿ.6ರಂದು 15 ದೇಶಗಳು ಐಎಸ್ಎ ಚೌಕಟ್ಟು ಒಡಂಬಡಿಕೆಗೆ ಸಹಿ ಹಾಕುವ ಮೂಲಕ, ಐಎಸ್ಎ ಭಾರತದಲ್ಲಿ ಕೇಂದ್ರ ಕಚೇರಿ ಹೊಂದಿದ ಪ್ರಥಮ ಅಂತಾರಾಷ್ಟ್ರೀಯ ಅಂತರ್ಸರ್ಕಾರಿ ಸಂಸ್ಥೆಯಾಗಿದೆ. ಐಎಸ್ಎ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್ಗಳು, ಅಭಿವೃದ್ಧಿ ಹಣಕಾಸು ಸಂಸ್ಥೆಗಳು, ಖಾಸಗಿ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತಿತರ ಅಂತಾರಾಷ್ಟ್ರೀಯ ಸಂಸ್ಥೆಗಳ ಜತೆ ಪಾಲುದಾರಿಕೆ ಹೊಂದಿದೆ.