

Snakes : ಹಾವುಗಳನ್ನು ಕಂಡರೆ ಹೆದರಿ ಓಡುವವರೇ ಹೆಚ್ಚು. ತುಂಬಾ ಅಪಾಯಕಾರಿ ಜೀವಿಗಳಲ್ಲಿ ಹಾವುಗಳು ( Snakes ) ಕೂಡ ಒಂದು. ಈ ಜೀವಿ ಶತಮಾನಗಳಿಂದ ಜನರ ಜೀವಕ್ಕೆ ಬೆದರಿಕೆಯಾಗಿದ್ದು, ಪ್ರಾಚೀನ ಕಾಲದಿಂದಲೂ ಜಗತ್ತಿನಲ್ಲಿ ವಾಸಿಸುತ್ತಿರುವ ಜೀವಿಯಾಗಿದೆ. ಈ ಭೂಮಿಯ ಮೇಲೆ ಸುಮಾರು 3000 ಜಾತಿಯ ಹಾವುಗಳು ವಾಸಿಸುತ್ತಿವೆ. ಆದರೆ, ಎಲ್ಲ ಹಾವುಗಳು ವಿಷಕಾರಿಯಲ್ಲ. ಕೆಲವೊಂದು ಸೌಮ್ಯ ಸ್ವಭಾವಾದ ಹಾವುಗಳಿವೆ. ಕೆಲವು ಜೀವಕ್ಕೆ ಮಾರಕವಾಗುವ ವಿಷವನ್ನು ಹೊಂದಿರುತ್ತವೆ.
ಹಾವುಗಳು ಮನೆಗಳನ್ನು ಪ್ರವೇಶಿಸುವುದು ಸಾಮಾನ್ಯ. ಅದರಲ್ಲೂ ಬೇಸಿಗೆಯಲ್ಲಿ ತಂಪಾದ ಸ್ಥಳ ಮತ್ತು ಚಳಿಗಾಲದಲ್ಲಿ ಬೆಚ್ಚನೆಯ ಪ್ರದೇಶವನ್ನು ಹುಡುಕಿ ಬರುವಾಗ ಮನೆಗಳಿಗೆ ಪ್ರವೇಶಿಸುತ್ತವೆ. ಇನ್ನು ಕೆಲವೊಮ್ಮೆ ಮನೆಯಿಂದ ಹೊರಬರುವ ವಾಸನೆಯನ್ನು ಗ್ರಹಿಸಿ ಕೂಡ ಹಾವುಗಳು ಬರುವ ಸಾಧ್ಯತೆ ಇದೆ. ಹಾವುಗಳು ವಾಸನೆಯನ್ನು ಗ್ರಹಿಸುವ ಸಾಮರ್ಥ್ಯವನ್ನು ಹೊಂದಿವೆ. ಮನೆಗಳಲ್ಲಿ ಕೆಲವು ವಸ್ತುಗಳನ್ನು ಬಳಸುವುದು ಮತ್ತು ಎಸೆಯುವುದು ಹಾವುಗಳನ್ನು ಮನೆಯೊಳಗೆ ಆಹ್ವಾನಿಸಿದಂತೆ ಎನ್ನುವುದನ್ನ ಗಮನದಲ್ಲಿಡಬೇಕು.
ನಮ್ಮ ಗಮನಕ್ಕೂ ಬಾರದೇ ಹಾವುಗಳು ಮನೆಯೊಳಗೆ ಪ್ರವೇಶಿಸುತ್ತವೆ. ಮನೆಯಲ್ಲಿರುವ ಹಲವು ವಸ್ತುಗಳೇ ಇದಕ್ಕೆ ಕಾರಣ. ಮನೆಯ ಸುತ್ತಲಿನ ಎತ್ತರದ ಹುಲ್ಲು, ಮರಗಳ ಎಲೆಗಳು ಮತ್ತು ಇತರ ಕಸಗಳು ಹಾವುಗಳ ಕಾಟವನ್ನು ಹೆಚ್ಚಿಸುತ್ತವೆ. ಹಾವುಗಳು ಆಹಾರವನ್ನು ಹುಡುಕುತ್ತಾ ಮನೆಗೆ ಬಂದು ಒಳಗೆ ಪ್ರವೇಶಿಸುತ್ತವೆ. ಬಹುತೇಕ ಎಲ್ಲ ಹಾವುಗಳು ಮಾಂಸಾಹಾರಿಗಳು. ಆದ್ದರಿಂದ, ಹಾವುಗಳು ಇಲಿಗಳು, ಕಪ್ಪೆಗಳು, ಮೊಲಗಳು ಮತ್ತು ಎರೆಹುಳುಗಳಂತಹ ಜೀವಿಗಳಿರುವ ಸ್ಥಳಗಳನ್ನು ತಲುಪುತ್ತವೆ.
ಹಾವುಗಳು ಸಣ್ಣ ಕೀಟಗಳನ್ನು ಸಹ ತಿನ್ನುತ್ತವೆ. ಆದ್ದರಿಂದ, ಹಾವುಗಳನ್ನು ದೂರವಿಡಲು ಮನೆ, ಅದರ ಸುತ್ತಮುತ್ತಲಿನ ಪ್ರದೇಶಗಳು ಮತ್ತು ಒಳಭಾಗವನ್ನು ಸ್ವಚ್ಛವಾಗಿಡುವುದು ಬಹಳ ಮುಖ್ಯ. ಇದರೊಂದಿಗೆ, ಪೈನ್ ಮತ್ತು ಶ್ರೀಗಂಧದಂತಹ ಮರಗಳ ವಾಸನೆಯು ಹಾವುಗಳನ್ನು ಆಕರ್ಷಿಸುತ್ತದೆ. ನಿಂಬೆ ಹುಲ್ಲು ಸಹ ಹಾವುಗಳನ್ನು ಆಕರ್ಷಿಸುತ್ತದೆ. ಆದ್ದರಿಂದ, ಸಾಧ್ಯವಾದಷ್ಟು ಬೇಗ ಅಂತಹ ವಸ್ತುಗಳ ಉಪಸ್ಥಿತಿಯನ್ನು ತೆಗೆದುಹಾಕುವುದರಿಂದ ಹಾವುಗಳನ್ನು ತಡೆಯಲು ನಿಮಗೆ ಸಹಾಯವಾಗುತ್ತದೆ.
ಬೇಸಿಗೆ ಕಾಲದಲ್ಲಿ ಹಾವುಗಳು ತಂಪಾದ ಸ್ಥಳ ಅರಸಿ ಬರುವುದರಿಂದ ನಿಮ್ಮ ದೈನಂದಿನ ಜೀವನವನ್ನು ತೊಂದರೆಗೀಡುಮಾಡುವ ಸಾಧ್ಯತೆಯಿದೆ. ಹೀಗಾಗಿ ನೀವು ಕೆಲವೊಂದು ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳುವುದು ತುಂಬಾ ಒಳ್ಳೆಯದು. ಆ ಕ್ರಮಗಳು ಈ ಕೆಳಕಂಡಂತಿವೆ.
. ಮನೆ ಬಳಿ ಕಸದ ರಾಶಿ ಹಾಕಬೇಡಿ. ಕಸದ ರಾಶಿ ಬಿದ್ದಿರುವ ಜಾಗದಲ್ಲಿ ಹಾವುಗಳು ತಂಪು ಪಡೆಯಲು ಬರುತ್ತವೆ.
2. ಮನೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ನೆರಳು ಮತ್ತು ತಂಪು ನೀಡುವ ವಸ್ತುಗಳನ್ನು ಮನೆಯ ಹೊರಂಗಾಣದಲ್ಲಿ ಸಂಗ್ರಹಿಸಿ ಇಡಬೇಡಿ. ಮನೆಯೊಳಗೆ ಸ್ವಚ್ಛತೆ ಇರಲಿ.
3. ಶೂಗಳನ್ನು ಮೊದಲು ಪರಿಶೀಲಿಸಿ ಆನಂತರ ಧರಿಸಿ
4. ರಾತ್ರಿಯ ವೇಳೆ ತುಂಬಾ ಎಚ್ಚರಿಕೆಯಿಂದ ನಡೆಯಿರಿ. ಬ್ಯಾಟರಿ ಅಥವಾ ಮೊಬೈಲ್ ಟಾರ್ಚ್ ಬಳಸುವುದು ಉತ್ತಮ.
5. ಹಾವು ಕಡಿತಕ್ಕೆ ಒಳಗಾಗುವ ವ್ಯಕ್ತಿಯನ್ನು ನೋಡಿ ಭಯಪಡದೇ ಸಾಧ್ಯವಾದಷ್ಟು ಬೇಗ ಅವರನ್ನು ಆಸ್ಪತ್ರೆಗೆ ದಾಖಲಿಸಿ.
ಹಾವುಗಳು ಸಾಮಾನ್ಯವಾಗಿ ನೀರಿನ ಟ್ಯಾಂಕ್‌ಗಳು, ಸ್ನಾನಗೃಹಗಳು ಮತ್ತು ಮೆಟ್ಟಿಲುಗಳಂತಹ ತಂಪಾದ ಅಡಗುತಾಣಗಳನ್ನು ಹುಡುಕಲು ಮನೆಗಳ ಬಳಿ ಪ್ರವೇಶಿಸುತ್ತವೆ. ಬೇಸಿಗೆಯಲ್ಲಿ ಇವುಗಳ ಬಗ್ಗೆ ನೀವು ಜಾಗರೂಕರಾಗಿರಿ. ಕಿಟಕಿಗಳನ್ನು ತೆರೆದಿಡುವುದನ್ನು ಆದಷ್ಟು ತಪ್ಪಿಸಿ. ವಿಶೇಷವಾಗಿ ಉದ್ಯಾನಕ್ಕೆ ಎದುರಾಗಿರುವ ಕಿಟಕಿಗಳನ್ನು ತಪ್ಪದೇ ಮುಚ್ಚಿರಿ. ಏಕೆಂದರೆ, ಹಾವುಗಳು ಹತ್ತಿರದ ಮರಗಳ ಮೂಲಕ ಸುಲಭವಾಗಿ ಮನೆಯ ಒಳಗೆ ಪ್ರವೇಶಿಸಬಹುದು. ಮನೆಯ ಹತ್ತಿರ ಯಾವುದೇ ಕಾರಣಕ್ಕೂ ಉರುವಲುಗಳನ್ನು ಜೋಡಿಸಬೇಡಿ.
ಎಲೆಗಳು, ಹುಲ್ಲು ಮತ್ತು ಮರದ ತುಂಡುಗಳನ್ನು ಅಜಾಗರೂಕತೆಯಿಂದ ರಾಶಿ ಹಾಕುವುದನ್ನು ತಪ್ಪಿಸಿ. ಕಿಟಕಿಗಳ ಬಳಿ ವಾಹನಗಳನ್ನು ನಿಲ್ಲಿಸಬೇಡಿ. ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಯಾವಾಗಲೂ ಸ್ವಚ್ಛವಾಗಿಡಿ. ಕಾಡುಗಳಿಂದ ಆವೃತವಾದ ಹೊಲಗಳಲ್ಲಿ ಯಾವಾಗಲೂ ಹಾವುಗಳ ಉಪಸ್ಥಿತಿ ಇದ್ದೇ ಇರುತ್ತದೆ. ಮನೆಯ ನೆಲದ ಬಳಿ ಗಿಡಗಳ ಕುಂಡಗಳನ್ನು ಇಡಬೇಡಿ. ನೀವು ಸಸ್ಯಗಳಿಗೆ ನೀರುಣಿಸುವುದರಿಂದ, ತಣ್ಣನೆಯ ಅನುಭವ ಪಡೆಯಲು ಹಾವುಗಳು ಅವುಗಳಲ್ಲಿ ಅಡಗಿಕೊಳ್ಳುವ ಸಾಧ್ಯತೆ ಇದೆ.
ಮನೆಯ ಹೊರಗೆ ಇಟ್ಟಿರುವ ಚಪ್ಪಲಿ ಮತ್ತು ಶೂಗಳನ್ನು ಧರಿಸುವ ಮೊದಲು ಒಮ್ಮೆ ಪರಿಶೀಲಿಸುವುದನ್ನು ಮರೆಯಬೇಡಿ. ಏಕೆಂದರೆ, ಹಾವುಗಳು ಒಳಗೆ ಹೋಗುವ ಸಾಧ್ಯತೆ ಇರುತ್ತದೆ. ಮನೆಯ ಗೋಡೆಗಳ ಮೇಲೆ ಬೆಳೆಯುತ್ತಿರುವ ಸಸ್ಯಗಳು ಮತ್ತು ಮನೆಯ ಹತ್ತಿರವಿರುವ ಮರದ ಕೊಂಬೆಗಳನ್ನು ಕತ್ತರಿಸಬೇಕು. ಈ ಕೆಲಸಗಳನ್ನು ಮಾಡಿದರೆ, ಎಷ್ಟೇ ಅಪಾಯಕಾರಿ ಹಾವುಗಳು ಕೂಡ ನಿಮ್ಮ ಮನೆಯ ಬಳಿ ಸುಳಿಯುವುದಿಲ್ಲ.
ಎಲ್ಲಿಯೇ ಆಗಲಿ ಹಾವುಗಳನ್ನು ಕಂಡಾಗ ಮೊದಲ ಉರಗ ಪ್ರೇಮಿಗಳಿಗೆ ಕರೆ ಮಾಡಿ. ಹಾವುಗಳನ್ನು ಯಾವುದೇ ಕಾರಣಕ್ಕೂ ಸಾಯಿಸಬೇಡಿ. ಉರಗ ಪ್ರೇಮಿಗಳು ಬಂದು ಹಾವನ್ನು ರಕ್ಷಣೆ ಮಾಡಿ, ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬರುತ್ತಾರೆ. (ಏಜೆನ್ಸೀಸ್)