ಪಡಿತರ ಅಕ್ಕಿಯಲ್ಲಿ ಗಾಜಿನ ಪುಡಿ, ಮಣ್ಣು ಪತ್ತೆ

24 RMN-MGD P1
Published on

* ಮಣ್ಣಿಗಾನಹಳ್ಳಿ ವಿಎಸ್‌ಎಸ್‌ಎನ್‌ನ ನ್ಯಾಯಬೆಲೆ ಅಂಗಡಿಯಲ್ಲಿ ಲಾನುವಿಗಳಿಗೆ ವಿತರಣೆ

* ಸಾರ್ವಜನಿಕರಿಂದ ಆಕ್ರೋಶ

* ಸಮಗ್ರ ತನಿಖೆಗೆ ಒತ್ತಾಯ

ಮಾಗಡಿ

ಗಾಜಿನ ಪುಡಿ, ಮಣ್ಣು, ಹಳೆಯ ಬಟ್ಟೆ, ಸೀಮೆಂಟ್ ಕಾಂಕ್ರೀಟ್ ತ್ಯಾಜ್ಯ, ಕಲ್ಲು, ಮಣ್ಣು, ಹಾಗೂ ಧೂಳು ಮಿಶ್ರಣವಾದ ಪಡಿತರ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಮಣ್ಣಿಗಾನಹಳ್ಳಿ ವಿಎಸ್‌ಎಸ್ ನ್ಯಾಯಬೆಲೆ ಅಂಗಡಿಯಲ್ಲಿ ಈ ಮಾದರಿಯ ಅಕ್ಕಿ ವಿತರಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಅಕ್ಕಿ ಪಡೆದವರು ಮನೆಗೆ ಒಯ್ದು ನೋಡಿದಾಗ ಅಕ್ಕಿಯಲ್ಲಿ ತ್ಯಾಜ್ಯ ವಸ್ತುಗಳ ಮಿಶ್ರಣ ಕಂಡುಬಂದಿದೆ. ಬಳಿಕ ಈ ಬಗ್ಗೆ ನ್ಯಾಯಬೆಲೆ ಅಂಗಡಿಯವರನ್ನು ಪ್ರಶ್ನಿಸಿದ್ದಾರೆ. ಗೋದಾಮಿನಲ್ಲಿ ಶೇಖರಣೆಯಾಗಿದ್ದ ಅಕ್ಕಿ ಮೂಟೆಗಳನ್ನು ಪರಿಶೀಲಿಸಿದ ವೇಳೆ 20 ಮೂಟೆ ಅಕ್ಕಿಯ ಚೀಲಗಳಿಗೆ ಸರ್ಕಾರದ ಸೀಲ್ ಇಲ್ಲ. ಕೈನಿಂದ ಹೊಲಿದಿರುವ ಮೂಟೆಯಲ್ಲಿ ಇಂತಹ ಅಕ್ಕಿ ಕಂಡು ಬಂದಿದೆ. ಈ ಮೂಟೆಗಳು ನ್ಯಾಯಬೆಲೆ ಅಂಗಡಿಗೆ ರವಾನೆಯಾಗಿರುವುದು ಸಾಕಷ್ಟು ಅನುಮಾನ ಹುಟ್ಟಿಸಿದ್ದು, ಕಳಪೆ ಅಕ್ಕಿ ಎಲ್ಲಿಂದ ಬಂತು, ಇದಕ್ಕೆ ಕಾರಣರಾದವರು ಯಾರೆಂದು ಸಮಗ್ರ ತನಿಖೆಯಾಗಬೇಕಿದೆ ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಕಳಪೆ ಅಕ್ಕಿ ಬಗ್ಗೆ ವಿಎಸ್‌ಎಸ್‌ಎನ್‌ನ ನ್ಯಾಯಬೆಲೆ ಅಂಗಡಿಯವರು ಆಹಾರ ಇಲಾಖೆ ಶಿರಸ್ತೇದಾರ್ ಮಂಜುನಾಥ್ ಅವರ ಗಮನಕ್ಕೆ ತಂದ ವೇಳೆ ಆಹಾರ ನೀರಿಕ್ಷಕ ಶ್ರೀನಿವಾಸ್ ಸ್ಥಳ ಪರಿಶೀಲಿಸಿದ್ದಾರೆ. ಪಶು, ಪಕ್ಷಿಗಳು ತಿನ್ನಲೂ ಯೋಗ್ಯವಲ್ಲದ ಅಕ್ಕಿಯನ್ನು ನಾಗರಿಕರಿಗೆ ನೀಡಲು ಮುಂದಾಗಿರುವುದು ವಿಪರ್ಯಾಸ, ಯಾವುದೇ ಆಹಾರವನ್ನು ನಾಗರಿಕರಿಗೆ ವಿತರಿಸುವ ಮುನ್ನಾ ಗುಣಮಟ್ಟ ಪರಿಶೀಲಿಸಿ ಯೋಗ್ಯವಾದ ಆಹಾರವನ್ನು ವಿತರಿಸಬೇಕು ಎಂಬ ಆದೇಶವಿದೆ. ಆದರೆ ಈ ಆದೇಶಕ್ಕೆ ಕಿಮ್ಮತು ನೀಡದೆ ಇರುವುದು ಬೇಸರ ಮೂಡಿಸಿದೆ.

ತಾಲೂಕು ಆಡಳಿತ ನೇರ ಹೊಣೆ

ಯಾರೊಬ್ಬರೂ ಹಸಿವಿನಿಂದ ಬಳಲಬಾರದು ಎಂದು ಸರ್ಕಾರ ಚುನಾವಣೆ ವೇಳೆ ಘೋಷಿಸಿದಂತೆ ತಲಾ ಒಬ್ಬರಿಗೆ 10 ಕೆಜಿ ಅಕ್ಕಿಯನ್ನು ಎರಡು ತಿಂಗಳಿಂದ ನೀಡುತ್ತಿದೆ. ಆದರೆ ಗುಣಮಟ್ಟದ ಪಡಿತರ ವಿತರಿಸದೆ ಉಚಿತವಾಗಿ ನೀಡುವ ಅಕ್ಕಿಯನ್ನು ಬೇಕಾ ಬಿಟ್ಟಿ ನೀಡಿ ಜನರ ಆರೋಗ್ಯಕ್ಕೆ ಕುತ್ತು ತರುತ್ತಿದ್ದಾರೆ. ಕಳಪೆ ಅಕ್ಕಿ ವಿತರಣೆಗೆ ತಾಲೂಕು ಆಡಳಿತ ನೇರಹೊಣೆಯಾಗಿದೆ ಎಂದು ವಿಎಸ್‌ಎಸ್‌ಎನ್ ಉಪಾಧ್ಯಕ್ಷ ಗೋವಿಂದರಾಜು ಆರೋಪಿಸಿದ್ದಾರೆ.

20 ಮೂಟೆಗಳಿಗೆ ಮಿಷನ್ ಹೊಲಿಗೆ, ಸೀಲು ಹಾಕಿಲ್ಲ. ಕೈನಿಂದ ಹೊಲಿದಿದ್ದಾರೆ. ಈ ಬಗ್ಗೆ ಸಾಕಷ್ಟು ಅನುಮಾನ ಮೂಡಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕು ಎಂದು ವಿಎಸ್‌ಎಸ್‌ಎನ್ ಅಧ್ಯಕ್ಷ ನಾರಾಯಣ್ ಒತ್ತಾಯಿಸಿದ್ದಾರೆ.

ಅಕ್ಕಿಯಲ್ಲಿ ನಿರುಪಯುಕ್ತ ವಸ್ತುಗಳು ಕಂಡು ಬಂದಿವೆ. ಈ ಅಕ್ಕಿಯನ್ನು ಕೆಎಫ್‌ಸಿಎಸ್‌ಸಿಗೆ ಸಗಟು ಮಳಿಗೆ ಸುಮಾರು 4 ಚೀಲವನ್ನು ಕಳುಹಿಸಲಾಗುವುದು. ಈ ಅಕ್ಕಿ ಮದ್ದೂರಿನ ವೇರ್ ಹೌಸ್‌ನಿಂದ ಬಂದಿರಬಹುದು.ಶ್ರೀನಿವಾಸ್, ಆಹಾರ ನೀರಿಕ್ಷಕಅಕ್ಕಿಯಲ್ಲಿ ಧೂಳು ಕಂಡುಬಂದಿದೆ. ಈ ಅಕ್ಕಿಯನ್ನು ಕೆಎಫ್‌ಸಿಸಿ ಗೋದಾಮಿಗೆ ಕಳುಹಿಸಿ ಉತ್ತಮ ಅಕ್ಕಿ ತಂದು ನಾಗರಿಕರಿಗೆ ವಿತರಿಸಲಾಗುವುದು.ಎಸ್.ಮಂಜುನಾಥ್ಆಹಾರ ಇಲಾಖೆ ಪ್ರಭಾರ ಶಿರಸ್ತೇದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net