

ಬೆಂಗಳೂರು: ಕೃಷಿ ವಿಶ್ವವಿದ್ಯಾಲಯದ 57ನೇ ಘಟಿಕೋತ್ಸವ ಗುರುವಾರ (ಆ.3) ಬೆಳಗ್ಗೆ 11 ಗಂಟೆಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಆವರಣದಲ್ಲಿ ನಡೆಯಲಿದೆ.
ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ದೆಹಲಿಯ ಕೃಷಿ ಅನುಸಂಧಾನ ಪರಿಷತ್ತಿನ ಮಹಾನಿರ್ದೇಶಕ ಡಾ. ಹಿಮಾಂಶು ಪಾಠಕ್ ಹಾಗೂ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. 2021-22ರಲ್ಲಿ ತೇರ್ಗಡೆಯಾದ 1,295 ವಿದ್ಯಾರ್ಥಿಗಳಿಗೆ ಪದವಿ, ಸ್ನಾತಕೋತ್ತರ ಪದವಿ, 105 ಮಂದಿಗೆ ಡಾಕ್ಟರೋಲ್ ಪದವಿ ಹಾಗೂ 160 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಗುತ್ತದೆ. ಕೋವಿಡ್ ಸಮಯದಲ್ಲಿ ಕೋವ್ಯಾಕ್ಸಿನ್ ಕಂಡುಹಿಡಿದ ಭರತ್ ಬಯೋಟೆಕ್ ಇಂಟರ್‌ನ್ಯಾಷನಲ್ ಲಿ.ನ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲ್ಲಾಗೆ ಗೌರವ ಡಾಕ್ಟರೇಟ್ ನೀಡಲಾಗುವುದು ಎಂದು ಕೃಷಿ ವಿವಿಯ ಕುಲಪತಿ ಡಾ.ಎಸ್.ವಿ. ಸುರೇಶ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮೊದಲ ಬಾರಿಗೆ ಕೃಷಿ ವಿವಿ, ಕೃಷಿ ಉದ್ಯಮದ ಕುರಿತು ಮ್ಯೂಸಿಯಂ ಸ್ಥಾಪಿಸುತ್ತಿದ್ದು, ಹವಾಮಾನ ವೈಪರೀತ್ಯ, ಕೃಷಿ ಯಾಂತ್ರೀಕರಣ, ಸಂತೆ ಪರಿಕಲ್ಪನೆ ಸೇರಿ ಇತರ ಮಾದರಿಗಳ ಕುರಿತ ಮಾಹಿತಿ ಮ್ಯೂಸಿಯಂನಲ್ಲಿದೆ. ನೋಡುಗರಿಗೆ, ಮಕ್ಕಳಿಗೆ, ರೈತರಿಗೆ ಮಾರ್ಗದರ್ಶಿಯವರು ಮಾಹಿತಿ ನೀಡಲಿದ್ದಾರೆ. ಅಳವಾದ ಮಾಹಿತಿ ಬೇಕಿದ್ದರೆ ಆಯಾ ವಿಷಯದ ಪರಿಣಿತ ವಿಜ್ಞಾನಿಗಳನ್ನು ಕೇಳಿ ಪಡೆಯಬಹುದು. 2013ರಿಂದ ಹಂತ ಹಂತವಾಗಿ ಕಾಮಗಾರಿ ಕೆಲಸ ಪೂರ್ಣಗೊಂಡಿದ್ದು, ಈಗ ಉದ್ಘಾಟನೆಗೆ ಸಿದ್ಧಗೊಳಿಸಲಾಗಿದೆ ಎಂದು ತಿಳಿಸಿದರು.
ರೈತರಿಗೆ ಕೌಶಲ ತರಬೇತಿ ನೀಡುವ ನಿಟ್ಟಿನಲ್ಲಿ ವಸತಿ ನಿಲಯ ಆರಂಭಿಸಲಾಗಿದೆ. ಏಕಕಾಲಕ್ಕೆ 45 ರೈತರು ಉಳಿದುಕೊಳ್ಳಬಹುದು. 3ರಿಂದ 15 ದಿನಗಳ ಕಾಲ ವಿವಿಧ ವಿಷಯದ ಬಗ್ಗೆ ತರಬೇತಿ ಪಡೆಯಬಹುದು. ರೈತ ಸಂಪರ್ಕ ಕೇಂದ್ರಗಳ ಮೂಲಕ ಅಥವಾ ನೇರವಾಗಿಯೂ ಬರಬಹುದು. ರೈತ ಮಹಿಳೆಯರಿಗೂ ಅವಕಾಶ ನೀಡಲಾಗುವುದು. ಆ.3ರಂದು ವಸತಿ ನಿಲಯ ಉದ್ಘಾಟನೆಯಾಗಲಿದೆ. ಆದರೆ, ಸೆಪ್ಟೆಂಬರ್ ಬಳಿಕ ರೈತರಿಗೆ ತರಬೇತಿ ನೀಡುವುದಾಗಿ ಸುರೇಶ್ ಹೇಳಿದರು. ಕುಲಸಚಿವ ಡಾ.ಬಸವೇಗೌಡ, ಶಿಕ್ಷಣ ನಿರ್ದೇಶಕ ಡಾ.ಕೆ.ಸಿ.ನಾರಾಯಣಸ್ವಾಮಿ, ವಿಸ್ತರಣಾ ನಿರ್ದೇಶಕ ಡಾ.ವಿ.ಎಲ್. ಮಧುಪ್ರಸಾದ್, ಹಿರಿಯ ವಾರ್ತಾ ತಜ್ಞ ಡಾ.ಕೆ.ಶಿವರಾಮು, ಪ್ರಾಧ್ಯಾಪಕ ಡಾ.ಸಿದ್ದಯ್ಯ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.
ವಿದ್ಯಾರ್ಥಿನಿಯರ ಮೇಲುಗೈ:
ಘಟಿಕೋತ್ಸವದಲ್ಲಿ 160 ಚಿನ್ನದ ಪದಕ ಪ್ರದಾನ ಮಾಡಲಾಗುತ್ತದ್ದು, ಇದರಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿದೆ. ಪಿಎಚ್.ಡಿ.ಯಲ್ಲಿ 14 ವಿದ್ಯಾರ್ಥಿನಿಯರು ಹಾಗೂ ಇಬ್ಬರು ವಿದ್ಯಾರ್ಥಿ, ಸ್ನಾತಕೋತ್ತರದಲ್ಲಿ 21 ವಿದ್ಯಾರ್ಥಿನಿಯರು, 10 ವಿದ್ಯಾರ್ಥಿ, ಸ್ನಾತಕ ಪದವಿಯಲ್ಲಿ 14 ವಿದ್ಯಾರ್ಥಿನಿಯರು ಹಾಗೂ 5 ವಿದ್ಯಾರ್ಥಿಗಳು ಚಿನ್ನದ ಪದಕ ಪಡೆಯಲಿದ್ದಾರೆ. ಜತೆಗೆ 66 ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ 54 ಚಿನ್ನದ ಪದಕ, 86 ದಾನಿಗಳ ಚಿನ್ನದ ಪದಕ ಹಾಗೂ 20 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರ ವಿತರಿಸಲಾಗುತ್ತದೆ.
ರೈತರನ್ನು ಮರೆತ ಕೃಷಿ ವಿವಿ
ಪ್ರತಿ ಬಾರಿಯೂ ಕೃಷಿಯಲ್ಲಿ ಸಾಧನೆ ಮಾಡಿದ ರೈತರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿತ್ತು. ಆದರೆ ಈ ಬಾರಿ ಕೃಷಿಕರಿಗೆ ಗೌರವ ಡಾಕ್ಟರೇಟ್ ನೀಡುತ್ತಿಲ್ಲ. ಬದಲಿಗೆ ಉದ್ಯಮಿಯೊಬ್ಬರಿಗೆ ನೀಡಲು ಕೃಷಿ ವಿವಿ ಮುಂದಾಗಿದೆ. ಇದಕ್ಕೆ ಕೃಷಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.