ಕೃಷಿ ಕ್ಷೇತ್ರ ಸದೃಢವಾದರೆ ಸುಸ್ಥಿರ ಅಭಿವೃದ್ಧಿ: ಕೃಷಿ ಸಚಿವ ಎನ್​.ಚಲುವರಾಯಸ್ವಾಮಿ ಅಭಿಮತ

GKVK
Published on

ಬೆಂಗಳೂರು: ಕೃಷಿ ಕ್ಷೇತ್ರ ಸದೃಢವಾದರೆ ಮಾತ್ರ ದೇಶದ ಸುಸ್ಥಿರ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾಲಯಗಳು ಹೆಚ್ಚಿನ ಶ್ರಮವಹಿಸಬೇಕಿದೆ ಎಂದು ಕೃಷಿ ಸಚಿವ ಎನ್​. ಚಲುವರಾಯಸ್ವಾಮಿ ಹೇಳಿದ್ದಾರೆ.

ಬೆಂಗಳೂರು ಗಾಂಧಿ ಕೃಷಿ ವಿವಿ 59ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಜತೆಗೆ, ತಾಂತ್ರಿಕ ನೆರವು ಅಗತ್ಯ. ಕೃಷಿ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳಾಗುತ್ತಿರಬೇಕು. ಸುಧಾರಿತ ತಳಿಗಳು, ಯಂತ್ರೋಪಕರಣಗಳನ್ನು ಅಭಿವೃದ್ಧಿಪಡಿಸಿ ರೈತರಿಗೆ ನೆರವಾಗಬೇಕಿದೆ. ಈ ಮೂಲಕ ಕೃಷಿ ಚಟುವಟಿಕೆಗಳಿಗೆ ಬಲ ತುಂಬುವ ಕೆಲಸವಾಗಬೇಕು. ಕೃಷಿ ಪದವೀಧರರು ಸ್ವಉದ್ಯೋಗ ಮೂಲಕ ಇತರರಿಗೆ ಕೆಲಸ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಪ್ರೋತ್ಸಾಹ ನೀಡುತ್ತದೆ ಎಂದರು.

ರಾಜ್ಯದ ಅಭಿವೃದ್ಧಿಯಲ್ಲಿ ಮೈಸೂರು ಮಹಾರಾಜರ ಕೊಡುಗೆ ಅಪಾರ. ಬೆಂಗಳೂರು ಕೃಷಿ ವಿವಿ ಅವರ ದೂರದೃಷ್ಟಿಯ ಫಲ. ಕರ್ನಾಟಕದ ಕೃಷಿ, ಕೈಗಾರಿಕೆ, ನಿರಾವರಿ, ಅಭ್ಯುದಯಕ್ಕೆ ಮೈಸೂರು ಅರಸರು ಹಾಗೂ ಮಹಾರಾಣಿ ಕೆಂಪನಂಜಮ್ಮಣ್ಣಿ ಅನೀಡಿದ್ದ ನೆರವು ಸ್ಮರಣೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ನೂತನ ಲೋಗೋ ಹಾಗೂ ಹೊಸ ತಂತ್ರಾಂಶಗಳನ್ನು ಅನಾವರಣ ಮಾಡಲಾಯಿತು. ಇದೇ ಕೃಷಿ ಕ್ಷೇತ್ರದ ಹಲವು ಸಾಧಕರನ್ನು ಸನ್ಮಾನಿಸಲಾಯಿತು. ವಿವಿ ಕುಲಪತಿ ಸುರೇಶ್​, ರಿಜಿಸ್ಟ್ರಾರ್​ ಕೆ.ಸಿ ನಾರಾಯಣ ಸ್ವಾಮಿ, ಆಡಳಿತ ಮಂಡಳಿಯ ಸದಸ್ಯರು, ಬೋಧಕ ವಿಭಾಗದ ಮುಖ್ಯಸ್ಥರು ಇದ್ದರು.

ದೇಶದ ಪ್ರತಿಷ್ಠಿತ ಕೃಷಿ ವಿವಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹೊಸ ಕೃಷಿ ಸಂಶೋಧನೆಗಳು ಹಾಗೂ ಅವುಗಳನ್ನು ರೈತರಿಗೆ ತಲುಪಿಸುವಲ್ಲಿ ಅಗ್ರ ಸ್ಥಾನದಲ್ಲಿರುವುದು ಅಭಿನಂದನೀಯ.

-ಎನ್​. ಚಲುವರಾಯಸ್ವಾಮಿ, ಕೃಷಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net