

ರಾಮನಗರ; ನಮ್ಮನ್ನಾಳುವ ಸರ್ಕಾರಗಳು ರೈತರ ಪರವಾಗಿರಬೇಕೇ ಹೊರತು ಅನ್ನದಾತನ ಬೆನ್ನುಮೂಳೆ ಮುರಿದು ಸರ್ಕಾರ ಮಾಡುವಂತಾಗಬಾರದು ಎಂದು ಚನ್ನಪಟ್ಟಣ ಕುಡಿನೀರುಕಟ್ಟೆ ವಿರಕ್ತ ಮಠಾಧ್ಯಕ್ಷ ಶ್ರೀ ಶಿವರುದ್ರ ಸ್ವಾಮೀಜಿ ಆಗ್ರಹಿಸಿದರು.
ರಾಜೀವ್ ಗಾಂಧಿ ವಿಶ್ವ ವಿದ್ಯಾಲಯ ಯೋಜನೆಯಿಂದ ಭೂಮಿ ಕಳೆದುಕೊಂಡ ರೈತರ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ರಾಮನಗರದ ಅರ್ಚಕರಹಳ್ಳಿ ಮಲ್ಲೇಶ್ವರ ದೇವಾಲಯದ ಸಮೀಪ ಜಿಲ್ಲೆಯ ವಿವಿಧ ಮಠಗಳ ಸ್ವಾಮೀಜಿಗಳು, ಅಖಿಲ ಭಾರತ ವೀರಶೈವ ಮಹಾಸಭಾ ರಾಮನಗರ ಜಿಲ್ಲಾ ಮತ್ತು ತಾಲೂಕು ಘಟಕ ಮತ್ತು ವೀರಶೈವ ಸಮಾಜದ ಮುಖಂಡರು, ಗ್ರಾಮಸ್ಥರು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
ಅರ್ಚಕರಹಳ್ಳಿ ಬಳಿ ರಾಜೀವ್ ಗಾಂಧಿ ಆರೋಗ್ಯ ವಿವಿಗೆ ಭೂಮಿ ನೀಡಿದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಈ ಸಂಬಂಧ ಸರ್ಕಾರ ಸಮಿತಿ ರಚಿಸಿ, ರೈತರ ನ್ಯಾಯಯುತ ಬೇಡಿಕೆ ಈಡೇರಿಸಲು ಸರ್ಕಾರ ಮುಂದಾಗಬೇಕು ಎಂದರು.
ರೈತರಿಂದ ಭೂಮಿ ನೀಡಲು ಯಾವುದೇ ವಿರೋಧವಿಲ್ಲ. ಅಂತೆಯೇ, ಸರ್ಕಾರ ನ್ಯಾಯ ಸಮ್ಮತ ಪರಿಹಾರ ನೀಡಬೇಕು. ಉದ್ದೇಶಿತ ವಿವಿ ನಿರ್ಮಾಣಕ್ಕೆ ರೈತರ ಫಲವತ್ತಾದ ಭೂಮಿ ಬಳಕೆ ಮಾಡಿಕೊಳ್ಳಲಾಗಿದೆ. ಹಾಗಾಗಿ ಪ್ರಸ್ತುತ ಮಾರುಕಟ್ಟೆ ಹಾಗೂ ವೈಜ್ಞಾನಿಕ ಆಧಾರದ ಮೇಲೆ ಪರಿಹಾರ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ಜಮೀನು ಕಳೆದುಕೊಳ್ಳುವ ರೈತರಿಗೆ 50/50 ಅನುಪಾತದಲ್ಲಿ ನಿವೇಶನ, ವಿಶ್ವ ವಿದ್ಯಾಲಯದಲ್ಲಿ ಮನೆಗೊಂದು ಉದ್ಯೋಗ, ಅರ್ಚಕರಹಳ್ಳಿ ಸರ್ಕಾರಿ ಶಾಲೆ ಹಾಗೂ ಕ್ರೀಡಾಂಗಣಕ್ಕೆ 5 ಎಕರೆ ಜಾಗ, ಅರ್ಚಕರಹಳ್ಳಿ ವೀರಶೈವ ರುದ್ರಭೂಮಿಗೆ ಜಮೀನು, ಭೂಮಿ ಕಳೆದುಕೊಂಡ ರೈತರಿಗೆ ಬದಲಿ 2 ಎಕರೆ ಜಮೀನು ಮಂಜೂರು, ಮಲ್ಲೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಅಭಿವೃದ್ಧಿ ಹಾಗೂ ಧಾರ್ಮಿಕ ಕಾರ್ಯಗಳಿಗೆ ಮತ್ತು ಸಮುದಾಯದ ಭವನ ನಿರ್ಮಿಸಲು 2 ಎಕರೆ ಜಮೀನು ಮೀಸಲು, ಬಸವ ಶ್ರೀ ಗೋಶಾಲೆ ಹಾಗೂ ಮಠ ನಿರ್ಮಿಸಲು 5 ಎಕರೆ ಜಾಗವನ್ನು ಸರ್ಕಾರ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾ ರಾಮನಗರ ತಾಲೂಕು ಘಟಕ ಅಧ್ಯಕ್ಷ ಪೊಲೀಸ್ ಶಂಕರಪ್ಪ, ನಗರಸಭಾ ಮಾಜಿ ಅಧ್ಯಕ್ಷೆ ವಿಜಯಕುಮಾರಿ, ಮುಖಂಡರಾದ ಗುರುಮಾದಯ್ಯ, ವಿಜಯಕುಮಾರ್, ಸೋಮೇಶ್, ಮಹದೇವಯ್ಯ, ರಾಜಶೇಖರ್, ಶಿವಸ್ವಾಮಿ, ಮಲ್ಲೇಶ್, ನಾರಾಯಣ್, ಗೌರಮ್ಮ, ಶಿವರುದ್ರಯ್ಯ, ಶಿವಮೂರ್ತಿ ಇದ್ದರು.
ನ್ಯಾಯಯುತ ಬೇಡಿಕೆ ಈಡೇರಿಸಲಿ
ರಾಜೀವ್‌ಗಾಂಧಿ ವಿವಿಗೆ ಭೂಮಿ ನೀಡಲು ಇಲ್ಲಿನ ರೈತರ ವಿರೋಧವಿಲ್ಲ. ಆದರೆ, ಸರ್ಕಾರ ರೈತರಿಗೆ ಸೂಕ್ತ ನಿಗದಿತ ದರ ಮಾಡಿಲ್ಲ. ಒಂದು ಎಕರೆಗೆ ನೀಡುತ್ತಿರುವ ಈ ಹಿಂದಿನ ಪರಿಹಾರ ಇಲ್ಲಿ ಒಂದು ಸೈಟು ಖರೀದಿಸಲೂ ಆಗುವುದಿಲ್ಲ. ಹಿಂದೆ ರಾಜೀವ್‌ಗಾಂಧಿ ವಿವಿಗೆ 300 ಕೋಟಿ ರೂ. ನಿಗದಿಯಾಗಿತ್ತು. ಆದರೆ, ಈಗ 1200 ಕೋಟಿ ರೂ. ದಾಟಿದೆ. ಅದರ ಮಾನದಂಡದಲ್ಲೇ ರೈತರಿಗೆ ಪರಿಹಾರ ನೀಡಬೇಕು. ಕೆಲವು ರೈತರ ಪ್ರಕರಣಗಳು ನ್ಯಾಯಾಲಯದಲ್ಲಿದ್ದರೂ ಗುತ್ತಿಗೆದಾರ ಕಂಪನಿಯವರು ಪೊಲೀಸ್ ಬಲ ಪ್ರಯೋಗಿಸಿ ಅಡಕೆ, ತೆಂಗು ಮರಗಳನ್ನು ನಾಶ ಮಾಡಿದ್ದಾರೆ. ಇಂತಹ ಬಲ ಪ್ರಯೋಗ ನಿಲ್ಲಬೇಕು. ರೈತರ ನ್ಯಾಯಯುತ ಬೇಡಿಕೆ ಈಡೇರಿಸಬೇಕು. ಮುಂದಿನ ದಿನಗಳಲ್ಲಿ ಸಿಎಂ, ಡಿಸಿಎಂ ಬಳಿ ಅರ್ಚಕರಹಳ್ಳಿ, ಕನ್ನಮಂಗಲದೊಡ್ಡಿ, ರಂಗರಾಯರದೊಡ್ಡಿ ರೈತರ ನ್ಯಾಯಯುತ ಬೇಡಿಕೆ ಈಡೇರಿಸಬೇಕೆಂದು ಜಿಲ್ಲೆಯ ಸ್ವಾಮೀಜಿಗಳು ವೀರಶೈವ ಸಮಾಜದ ಮುಖಂಡರು ನಿಯೋಗ ಭೇಟಿ ನೀಡಿ ಒತ್ತಾಯಿಸಲಾಗುವುದು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ಎಸ್. ಯೋಗಾನಂದ್ ಹೇಳಿದರು.