ಪೌಷ್ಟಿಕ ಆಹಾರ ಸೇವಿಸಿ

Oplus_131072
Oplus_131072
Published on

ಯಳಂದೂರು: ಮಹಿಳೆಯರು ಹಾಗೂ ಮಕ್ಕಳನ್ನು ಕಾಡುವ ದೊಡ್ಡ ತೊಂದರೆ ರಕ್ತ ಹೀನತೆಯಾಗಿದೆ. ಭಾರತದಲ್ಲಿ ದಿನೆ ದಿನೇ ಹೆಚ್ಚುತಿದ್ದು ಇದನ್ನು ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಇದರ ಪರಿಹಾರಕ್ಕೆ ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಆರ್‌ಜಿಎಸ್‌ಕೆಯ ವೈದ್ಯೆ ಡಾ.ನವ್ಯಾ ಕರೆ ನೀಡಿದರು.


ತಾಲೂಕಿನ ಮಾಂಬಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಬುಧವಾರ ಆಯೋಜಿಸಿದ್ದ ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಗರ್ಭಿಣಿ, ಬಾಣಂತಿಯರು ನಿಗದಿತ ಅವಧಿಯಲ್ಲೇ ಊಟ, ತಿಂಡಿ ಮಾಡಬೇಕು. ಸೊಪ್ಪು, ತರಕಾರಿ, ಮೊಳಕೆ ಕಾಳು, ಮೊಟ್ಟೆ, ಮೀನು ಸೇರಿದಂತೆ ಹೆಚ್ಚು ಪೂರಕ ಪೋಷಕಾಂಶಗಳ ಆಹಾರವನ್ನೇ ಸೇವಿಸಬೇಕು. ಇದರೊಂದಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಅಂಗನವಾಡಿ ಕಾರ್ಯಕರ್ತೆಯರು ಸೂಕ್ತ ಮಾಹಿತಿ ನೀಡುತ್ತಾರೆ ಎಂದರು.


ಪೌಷ್ಟಿಕಾಂಶ ಇಲ್ಲದೆ ಹುಟ್ಟುವ ಮಗುವಿಗೆ ಚಾಮರಾಜನಗರ ಹಾಗೂ ಕೊಳ್ಳೇಗಾಲದಲ್ಲಿ ನ್ಯಾಷನಲ್ ರಿಹ್ಯಾಬಿಟೇಷನ್ ಸೆಂಟರ್ (ಎನ್‌ಆರ್‌ಸಿ) ತೆರೆಯಲಾಗಿದೆ. ಇದರಲ್ಲಿ ಮಕ್ಕಳನ್ನು 14 ದಿನ ಇಟ್ಟುಕೊಂಡು ಇವರಿಗೆ ಯಾವ ರೀತಿಯ ಆಹಾರ ನೀಡಬೇಕು ಎಂದು ಹೇಳಿಕೊಡಲಾಗುತ್ತದೆ. ಅಲ್ಲದೆ ಇಲ್ಲಿರುವ ಪಾಲಕರಿಗೆ ದಿನಭತ್ಯೆಯನ್ನೂ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.


ಡಾ.ಪ್ರವೀಣ್ ಮಾತನಾಡಿ, ಸ್ವಸ್ಥ ಭಾರತ ನಿರ್ಮಾಣಕ್ಕೆ ರಾಷ್ಟ್ರ ಕಂಕಣ ತೊಟ್ಟಿದೆ. ನಮ್ಮ ದೇಹಕ್ಕೆ ಪ್ರಮುಖವಾಗಿ ಪೌಷ್ಟಿಕ ಆಹಾರ ಬೇಕಾಗುತ್ತದೆ. ಇದು ನಾವು ತಿನ್ನುವ ಆಹಾರದಲ್ಲೇ ಇರುತ್ತದೆ. ಆದರೆ ಇಂತಹ ಆಹಾರವನ್ನು ಆಯ್ಕೆ ಮಾಡುವಲ್ಲಿ ಎಡವುತ್ತಿದ್ದೇವೆ. ಗೊತ್ತ್ತಿದ್ದರೂ ಜಂಕ್‌ಫುಡ್ ತಿನ್ನುತ್ತಿದ್ದೇವೆ. ಇದು ಆರೋಗ್ಯಕ್ಕೆ ಮಾರಕವಾಗಿದ್ದು, ಇದರಿಂದ ದೂರವಿರಬೇಕು ಎಂದರು.


ಪಿಡಿಒ ಉಷಾ, ಶಿಕ್ಷಕ ರಮೇಶ್ ಮಾತನಾಡಿದರು. ಪೋಷಣ್ ಅಭಿಯಾನದ ಸಂಯೋಜಕಿ ಮೌನಶ್ರೀ, ಶಿವಕುಮಾರ್, ನಾಗರತ್ನಾ, ಪ್ರೀತಿ, ಸಹನಾ, ಡೆಲ್ಫಿಯಾ, ಗ್ರಾಪಂ ಸದಸ್ಯೆ ನಳಿನಾಕುಮಾರಿ, ಅಂಗನವಾಡಿ ಕಾರ್ಯಕರ್ತೆಯರಾದ ಎಂ.ಸೌಭಾಗ್ಯಾ, ನಿರ್ಮಲಾ ಮುನವಳ್ಳಿ, ನೇತ್ರಾವತಿ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net