ಕೃಷಿ ಜತೆಗೆ ಹೈನುಗಾರಿಕೆಗೆ ಆದ್ಯತೆ ನೀಡಿ

4KMD-1
Published on

ಕೆ.ಎಂ.ದೊಡ್ಡಿ: ರೈತರು ಹಳೇ ಕೃಷಿ ಚಟುವಟಿಕೆ ಪದ್ಧತಿಯನ್ನು ಮಾರ್ಪಾಡು ಮಾಡಿ ಹೊಸ ಕೃಷಿ ಪದ್ಧತಿ ಅನುಸರಿಸಿ ಯಾಂತ್ರಿಕ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳಿ ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.

ಸಮೀಪದ ಕೆ.ಪಿ.ದೊಡ್ಡಿ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಯ ವತಿಯಿಂದ 2025ನೇ ಸಾಲಿನ ತೆಂಗು ಅಭಿವೃದ್ಧಿ ಮಂಡಳಿ ಪ್ರಾಯೋಜಿತ ಸಂಯೋಜಿತ ಬೇಸಾಯ ಯೋಜನೆಯಡಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರೈತರು ಕೃಷಿ ಚಟುವಟಿಕೆಯಲ್ಲಿ ಅಧಿಕ ಪ್ರಮಾಣದ ನೀರನ್ನು ಬಳಕೆ ಮಾಡಿ ಬೆಳೆ ಬೆಳೆಯುತ್ತಾರೆ. ಹಾಗಾಗಿ ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಿ ಹನಿ ನೀರಾವರಿ ಯೋಜನೆ ಮೂಲಕ ಭೂಮಿಯ ಫಲವತ್ತತೆ ಕಾಪಾಡಿಕೊಂಡು ಕೃಷಿಯಲ್ಲಿ ಅಧಿಕ ಲಾಭ ತರುವ ಕಾರ್ಯಕ್ಕೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ಮಂಡ್ಯ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಕೃಷಿ ಸಚಿವರು ಜಿಲ್ಲೆಯವರೇ ಆಗಿರುವುದರಿಂದ ಕೃಷಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಹಾಗೂ ಸಬ್ಸಿಡಿಯನ್ನು ಸಮರ್ಪಕವಾಗಿ ಬಳಸಿಕೊಂಡು ತಾಂತ್ರಿಕ ವಸ್ತುಗಳನ್ನು ಖರೀದಿಸಿ ಯಾಂತ್ರಿಕ ಬೇಸಾಯ ಕ್ರಮವನ್ನು ಅನುಸರಿಸಿ ಕೃಷಿಯಲ್ಲಿ ಹೆಚ್ಚಿನ ಲಾಭ ಪಡೆಯಬೇಕು ಎಂದು ತಿಳಿಸಿದರು.

ಕೃಷಿ ಜತೆಗೆ ಹೈನುಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸಬಹುದು. ಹಾಗೆಯೇ ತೆಂಗು, ಅಡಕೆ, ಬಾಳೆ, ತರಕಾರಿ ಬೆಳೆೆಗಳಂತಹ ವಿವಿಧ ಬಗೆಯ ಬೆಳೆಗಳನ್ನು ಬೆಳೆಯುವ ಮೂಲಕ ಉತ್ತಮ ಬೇಸಾಯಕ್ಕೆ ಮುನ್ನುಡಿ ಬೆರೆಯಿರಿ ಎಂದು ರೈತರಿಗೆ ಕರೆ ನೀಡಿದರು.

ರೈತರು ತೆಂಗಿನ ಬೆಳೆಗೆ ಹೆಚ್ಚಿನ ಮಹತ್ವ ನೀಡುತ್ತಾ ಬಂದಿದ್ದು ಇಲಾಖೆಯಲ್ಲಿ ಸಿಗುವಂತಹ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ರೈತರಿಗೆ ಉತ್ತಮ ಇಳುವರಿ ಪಡೆಯಲು ಸಹಕಾರಿಯಾಗಲಿದೆ. ಮದ್ದೂರು ತಾಲೂಕಿನ ಜನತೆ ಈ ಯೋಜನೆಯ ಸದುಪಯೋಗ ಪಡೆದುಕೊಂಡು ಹೆಚ್ಚಿನ ಲಾಭ ಹೊಂದಿದ್ದು ಕೃಷಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲಿ ಎಂದು ಆಶಿಸಿದರು.

ತೆಂಗು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಹನುಮಂತೇಗೌಡ ಮಾತನಾಡಿ, ಏಷ್ಯಾದ ದೊಡ್ಡ ಎಳನೀರು ಮಾರುಕಟ್ಟೆಯನ್ನು ಹೊಂದಿರುವ ಹೆಗ್ಗಳಿಕೆೆ ಹೊಂದಿರುವ ಮದ್ದೂರಿನ ಎಳನೀರಿಗೆ ಹೊರ ರಾಜ್ಯ ಹಾಗೂ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಜಿಲ್ಲೆಯ ಹಾಗೂ ತಾಲೂಕಿನ ಜನತೆ ತೆಂಗು ಬೆಳೆಗೆ ಹೆಚ್ಚಿನ ಮಹತ್ವ ನೀಡಬೇಕು. ಹಾಗೆಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ತೆಂಗಿನ ಬೆಳೆಗೆ ಹೆಚ್ಚಿನ ಸವಲತ್ತುಗಳನ್ನು ನೀಡಲಾಗುವುದು. ಅವುಗಳನ್ನು ಇಲಾಖೆಯ ಅಧಿಕಾರಿಗಳ ಮೂಲಕ ಪಡೆದುಕೊಂಡು ಉತ್ತಮ ಬೆಳೆಗಳನ್ನು ಬೆಳೆದು ಅಧಿಕ ಲಾಭ ಗಳಿಸಬೇಕು ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆ ಹಾಗೂ ತೆಂಗು ಅಭಿವೃದ್ಧಿ ಮಂಡಳಿ ವತಿಯಿಂದ ರೈತರಿಗೆ ಬೇವಿನ ಹಿಂಡಿ, ರಾಸಾಯನಿಕ ಗೊಬ್ಬರ, ಸಲ್ಫೆಟ್ , ಬೋರಾಕ್ಸ್, ಪಂಗಿಸೈಡ್ ಮತ್ತು ಮೈಕ್ರೋ ನ್ಯೂಟ್ರಿಯಂಟ್ ಗೊಬ್ಬರಗಳನ್ನು ಉಚಿತವಾಗಿ ವಿತರಿಸಲಾಯಿತು.

ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವೀಶ್, ಹಿರಿಯ ತೋಟಗಾರಿಕೆ ಇಲಾಖೆ ನಿರ್ದೇಶಕಿ ರೇಖಾ, ಗ್ರಾ. ಪಂ. ಸದಸ್ಯ ಗುಡಿಗೆರೆ ಮಂಜುನಾಥ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net