ತೆಂಗಿನಮರಗಳಿಗೆ ಬೇವಿನ ಹಿಂಡಿ, ಸಾವಯವ ಗೊಬ್ಬರ ನೀಡಿ

16M.D.R.1
Published on

ಮದ್ದೂರು: ತಾಲೂಕಿನ ಬೂದಗುಪ್ಪೆ ಗ್ರಾಮದ ಸದಾಶಿವರಾಯರ ತೋಟದಲ್ಲಿ ಸೋಮವಾರ ತೆಂಗಿನಲ್ಲಿ ಕಪ್ಪು ತಲೆಹುಳು ಬಾಧೆಯ ನಿಯಂತ್ರಣ ಕ್ರಮಗಳ ಕುರಿತು ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.


ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕಿ ರೂಪಶ್ರೀ ಮಾತನಾಡಿ, ವಾತಾವರಣದಲ್ಲಿನ ಉಷ್ಣತೆಯಿಂದಾಗಿ ತೆಂಗಿನ ತೋಟಗಳಿಗೆ ನಿಗದಿತ ಸಮಯದಲ್ಲಿ ಉಳುಮೆ ಮಾಡಿ. ನಿಯಮಿತವಾಗಿ ಸಾವಯವ ಮತ್ತು ರಾಸಾಯನಿಕ ಗೊಬ್ಬರ ಬಳಕೆ ಮಾಡದಿರುವುದರಿಂದ ಮರಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ರೋಗ ಮತ್ತು ಕೀಟಬಾಧೆ ಜಾಸ್ತಿಯಾಗುತ್ತಿದೆ ಎಂದರು.


ಇದರ ನಿಯಂತ್ರಣಕ್ಕಾಗಿ ತೋಟ ಉಳುಮೆ ಮಾಡಿ, ಮರಗಳಿಗೆ ಪಾತಿ ಮಾಡಿ ಸರಿಯಾದ ಸಮಯದಲ್ಲಿ ಪೋಟ್ಯಾಷಿಯಂಯುಕ್ತ ರಸಗೊಬ್ಬರ ಮತ್ತು ಬೇವಿನ ಹಿಂಡಿ, ಸಾವಯವ ಗೊಬ್ಬರ ನೀಡುವಂತೆ ತಿಳಿಸಿದರು.


ಕೀಟಬಾಧೆ ನಿಯಂತ್ರಣಕ್ಕೆ ಪ್ರಥಮ ಹಂತದಲ್ಲಿ ಕೆಳಗಿನ ರೋಗ ಬಾಧಿತ ಗರಿಗಳನ್ನು ಕತ್ತರಿಸಿ ಸುಟ್ಟು ಹಾಕುವುದು. ಸಣ್ಣ ಸಸಿಗಳಾದಲ್ಲಿ ಕ್ಲೋರೋಪೈರಿಫಾಸ್ 2ಮಿ.ಲೀ/ಪ್ರ.ಲೀ.ನೀರಿಗೆ, ಕ್ವಿನಾಲ್ಫಾಸ್ 1ಮಿ.ಲೀ./ಪ.ಲೀ.ನೀರಿಗೆ, ಮಾನೋಕ್ರೋಟೋಫಾಸ್ 1.5ಮಿ.ಲೀ/ಪ್ರ.ಲೀ.ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು ಎಂದರು.


ದೊಡ್ಡ ಮರಗಳಾದಲ್ಲಿ ಬೇರಿನ ಮುಖಾಂತರ ಮಾನೋಕ್ರೋಟೋಫಾಸ್ 10ಮಿ ಲೀ/10 ಮಿ.ಲೀ.ನೀರಿಗೆ ಅಥವಾ ಬೇವಿನೆಣ್ಣೆ 10ಮಿ ಲೀ/10 ಮಿ.ಲೀ. ನೀರಿಗೆ ಹಾಕಿ ನೀಡಬೇಕಿರುತ್ತದೆ. ಈ ರೀತಿ ಬೇರಿನ ಮೂಲಕ ನೀಡುವ ಮೊದಲು ಕಾಯಿ/ ಎಳನೀರು ಕೊಯ್ಲು ಮಾಡಿಕೊಂಡಿರಬೇಕು. ಕಾರಣ ಬೇರಿನ ಮೂಲಕ ಔಷಧ ನೀಡಿದಾಗ 3 ತಿಂಗಳ ಕಾಲ ಕಾಯಿ, ಎಳನೀರು ಕೊಯ್ಲು ಮಾಡುವಂತಿಲ್ಲ ಎಂಬ ಮಾಹಿತಿಯನ್ನು ವಿಜ್ಞಾನಿಗಳಾದ ಡಾ.ಪವಿತ್ರಾ ಮತ್ತು ಡಾ.ಅಥೀಫಾ ನೀಡಿದರು.


ಇಲಾಖೆ ವತಿಯಿಂದ ಉಚಿತವಾಗಿ ದೊರೆಯುವ ಪರೋಪಜೀವಿಗಳನ್ನು ಪೀಡಿತ ಮರಗಳಿಗೆ ಬಿಡುಗಡೆ ಮಾಡುವುದು ಮತ್ತು ಬೇರಿನ ಮೂಲಕ ಮಾನೋಕ್ರೋಟೋಫಾಸ್ 10ಮಿ ಲೀ/10 ಮಿ.ಲೀ.ನೀರಿಗೆ ನೀಡುವುದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರೇಖಾ, ಅಧಿಕಾರಿಗಳಾದ ಸಂಪತ್‌ಕುಮಾರ್, ನಿತಿನ್‌ಕುಮಾರ್, ಡಾ.ಶಿವಪ್ರಸಾದ್, ಸಿಬ್ಬಂದಿ ಮಾಫೀಗೌಡ, ಪದ್ಮಮ್ಮ, ಅಶ್ವಿನಿ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net