

ಆಲೂರು: ವಿದ್ಯಾರ್ಥಿ ಜೀವನದಲ್ಲಿ ಪಠ್ಯಕ್ಕೆ ನೀಡುವಷ್ಟು ಪ್ರಾಮುಖ್ಯ ಕ್ರೀಡೆಗಳಿಗೂ ನೀಡುವ ಅಗತ್ಯವಿದೆ. ಈ ಮೂಲಕ ಪರಿಪೂರ್ಣ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳಿಗೆ ಸಾಧ್ಯವಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಲೂರು ತಾಲೂಕು ಪಾಳ್ಯ ವೃತ್ತ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಕ್ರೀಡೆಗಳಿಂದ ಮಾನಸಿಕ ಉಲ್ಲಾಸ ಪಡೆಯಬಹುದು. ದೈಹಿಕ ಆರೋಗ್ಯವು ಕ್ರೀಡೆಗಳಿಂದ ಸಾಧ್ಯವಿದೆ. ಹಲವು ಅನಾರೋಗ್ಯ ಸಮಸ್ಯೆಗಳಿಗೆ ಕ್ರೀಡೆಯೇ ಪರಿಹಾರವಾಗಿದೆ ಎಂದರು.
ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಕ್ರೀಡಾಪಟುಗಳು ಸೋಲಿನಿಂದ ಎದೆಗುಂದದೆ ನಿರಂತರ ಪರಿಶ್ರಮಪಟ್ಟರೆ ಗೆಲುವು ಸಾಧ್ಯವಾಗುತ್ತದೆ. ಮೊದಲು ಸ್ಪರ್ಧಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ತಾಲೂಕಿನ ಯಾವುದೇ ಸರ್ಕಾರಿ ಶಾಲೆಯಲ್ಲಿ ಕ್ರೀಡಾ ಅಕಾಡೆಮಿ ಸ್ಥಾಪನೆ ಮಾಡಲು ಮುಂದಾದರೆ ಅವರಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.
ಸಂತ ಜೋಸೆಫರ ದೇವಾಲಯ ಧರ್ಮಗುರು ಒಂದನೀಯ ಪಾದರ್ ಬಾಲರಾಜು ಮಾತನಾಡಿ, ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿ. ಸೋಲು-ಗೆಲುವು ಗಣನೆಗೆ ತೆಗೆದುಕೊಳ್ಳದೆ ಕ್ರೀಡೆಯಲ್ಲಿ ಭಾಗವಹಿಸಬೇಕು, ಶಾಲಾ ಶಿಕ್ಷಕರು ಮಕ್ಕಳ ಆಸಕ್ತಿ ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕು. ಗ್ರಾಮೀಣ ಕ್ರೀಡೆಗಳಿಗೆ ಆದ್ಯತೆ ನೀಡಬೇಕು. ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳು ಉತ್ತಮ ಸಾಧನೆ ಮಾಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಕೀರ್ತಿ ತರಬೇಕು ಎಂದರು.
ಇದೇ ಸಂದರ್ಭದಲ್ಲಿ ಕ್ರೀಡೆಯಲ್ಲಿ ಭಾಗವಹಿಸಿ ಗೆಲುವು ಸಾಧಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಕರಿಬಸವರಾಜು, ಶಿಕ್ಷಕ, ಶಿಕ್ಷಣ ಸಂಯೋಜಕರಾದ ದಿವಾಕರ್, ತಿಮ್ಮಶೆಟ್ಟಿ , ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಹಿಮ, ಸಂತ ಜೋಸೆಫರ ಶಾಲೆಯ ವ್ಯವಸ್ಥಾಪಕಿ ಸಿಸ್ಟರ್ ಲೀಸಿ ಅಬ್ರಹಾಂ, ಶಾಲಾ ಮುಖ್ಯಶಿಕ್ಷಕಿ ಸಿಸ್ಟರ್ ಆಶಾಲತಾ ಹಾಗೂ ಶಾಲೆಯ ಎಲ್ಲ ಶಿಕ್ಷಕ ವರ್ಗದವರು ಮತ್ತು ಪಾಳ್ಯ ಹೋಬಳಿ ಸಮೂಹ ಸಂಪನ್ಮೂಲ ವ್ಯಕ್ತಿ ಜಯಣ್ಣ ಸೇರಿದಂತೆ ಎಲ್ಲ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.