

ಬೆಂಗಳೂರು: ಕರೊನಾದಿಂದ ಉದ್ಭವಿಸಿದ ಸವಾಲುಗಳನ್ನು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅವಕಾಶಗಳಾಗಿ ಬಳಸಿಕೊಂಡು ಆನ್ಲೈನ್ ಶಿಕ್ಷಣ, ಮಾನ್ಯತೆ, ಡಿಜಿಟಲ್ ವೇದಿಕೆ, ಸಾರಿಗೆ ವ್ಯವಸ್ಥೆ ಶುರುವಾದ ತಕ್ಷಣ ಕಾಲೇಜುಗಳ ಪುನರಾರಂಭದ ದಿಕ್ಸೂಚಿಯನ್ನು ಶಿಕ್ಷಣ ತಜ್ಞರು ಹಾಗೂ ವಿ.ವಿ. ಆಡಳಿತಗಾರರು ನೀಡಿದ್ದಾರೆ.
ಬಿಜೆಪಿ ರಾಜ್ಯ ಘಟಕವು ‘ಪ್ರಸ್ತುತ ಉನ್ನತ ಶಿಕ್ಷಣದ ಸವಾಲುಗಳು, ಆದ್ಯತೆಗಳ ಕುರಿತಂತೆ ಅಂತರ್ಜಾಲ ಸಂವಾದ (ವೆಬಿನಾರ್) ನಡೆಸಿತು. ರಾಜ್ಯದ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪಠ್ಯಕ್ರಮಗಳು ಪೂರ್ಣಗೊಂಡಿಲ್ಲ. ಮುಂದೇನು ಎನ್ನುವ ಪ್ರಶ್ನೆಗಳು ಕಾಡುತ್ತಿರುವ ಈ ಸಂದರ್ಭದಲ್ಲಿ ಶಿಕ್ಷಣ ಪ್ರೇಮಿಗಳು, ತಜ್ಞರು ಹಾಗೂ ವಿ.ವಿ. ಆಡಳಿತಗಾರರ ಅಭಿಪ್ರಾಯ ಆಧರಿಸಿ, ಸಲಹೆಗಳನ್ನು ಕ್ರೋಡೀಕರಿಸಿ ಲಿಖಿತ ರೂಪದಲ್ಲಿ ಸರ್ಕಾರಕ್ಕೆ ಸಲ್ಲಿಸಿದೆ.
ಉನ್ನತ ಶಿಕ್ಷಣ ಇಲಾಖೆ ಹೊಂದಿರುವ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷರ ಪರವಾಗಿ ಸಲಹೆಗಳನ್ನು ಸಲ್ಲಿಸಿದೆ. ನಂತರ ನಡೆದ ಮಾತುಕತೆಯಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ, ಎಂಎಲ್ಸಿಗಳಾದ ಎನ್. ರವಿಕುಮಾರ್, ಅರುಣ್ ಶಹಾಪುರ, ರಾಜ್ಯ ಉಪಾಧ್ಯಕ್ಷ ಡಾ. ಮಾ. ನಾಗರಾಜ್ ಪಾಲ್ಗೊಂಡಿದ್ದರು.
ಸಂವಾದದ ಆಶಯ: ಅಂತರ್ಜಾಲ ಸಂವಾದದಲ್ಲಿ ಡಾ. ಮಾ. ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಸ್ತುತ ಪರಿಸ್ಥಿತಿಯಲ್ಲಿ ಬೋಧನೆ ಹಾಗೂ ಕಲಿಕೆಯ ಹೊಸ ಪ್ರಯೋಗಗಳು, ಸವಾಲುಗಳು, ಪರೀಕ್ಷೆಗಳು, ಮೌಲ್ಯಮಾಪನ, ಮುಂದಿನ ವರ್ಷದ ಶೈಕ್ಷಣಿಕ ವೇಳಾಪಟ್ಟಿ, ವಿದ್ಯಾರ್ಥಿಗಳ ಮನೋಭೂಮಿಕೆ ಪ್ರವೇಶಾತಿ ಮುಂತಾದ ವಿಷಯಗಳ ಬಗ್ಗೆ ಗಮನ ಸೆಳೆದರು.
ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುವ ಸಮಯ: ಸಂವಾದಕ್ಕೆ ಚಾಲನೆ ನೀಡಿದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರರಾವ್ , ಈ ಸಂವಾದದಿಂದ ಹೊರ ಬರುವ ಸಲಹೆಗಳು ರಾಜ್ಯದ ಜತೆಗೆ ರಾಷ್ಟ್ರಕ್ಕೂ ಉಪಯೋಗವಾಗುತ್ತವೆ. ಹೊಸ ಪ್ರಯೋಗಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳುವ ಸಮಯ ಬಂದಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ವಚ್ಛತೆ ಸೇರಿ ಪ್ರಧಾನಿ ಮೋದಿಯವರು ಕಟ್ಟಿಕೊಟ್ಟ ಸಪ್ತ ಸೂತ್ರಗಳನ್ನು ಪಾಲಿಸುವುದೊಂದೇ ದಾರಿ ಎಂದರು.
ಇದನ್ನೂ ಓದಿ: ಶಿಕ್ಷಣ ಇಲಾಖೆಯಲ್ಲಿ ಆನ್ಲೈನ್ ಸೇವೆ ಆರಂಭ
ತಜ್ಞರು, ವಿವಿ ಆಡಳಿತಗಾರರು ಸಂವಾದದಲ್ಲಿ ಭಾಗಿ: ಸಂವಾದದಲ್ಲಿ ಕುವೆಂಪು ವಿ.ವಿ. ವಿಶ್ರಾಂತ ಕುಲಪತಿ ಡಾ. ಚಿದಾನಂದ ಗೌಡ, ಕೆಎಸ್ಒಯು ವಿಶ್ರಾಂತ ಕುಲಪತಿ ಡಾ.ಸುಧಾಮೂರ್ತಿ, ಕುಲಪತಿ ಡಾ.ವಿದ್ಯಾಶಂಕರ, ಮಾಜಿ ಎಂಎಲ್ಸಿ ಹಾಗೂ ಶಿಕ್ಷಣ ತಜ್ಞ ಪಿ.ವಿ.ಕೃಷ್ಣ ಭಟ್, ಮೈಸೂರು ವಿ.ವಿ. ಕುಲಪತಿ ಡಾ.ಹೇಮಂತಕುಮಾರ್, ಕಾಲೇಜು ಶಿಕ್ಷಕರ ಸಂಘದ ಅಧ್ಯಕ್ಷ ಡಾ.ರಘು ಅಕಮಂಚಿ, ಬೆಂಗಳೂರು ವಿ.ವಿ. ವಿಶ್ರಾಂತ ಕುಲಪತಿ ಡಾ. ರಂಗನಾಥ, ಕುಲಪತಿ ಡಾ.ವೇಣುಗೋಪಾಲ, ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ, ಕರ್ನಾಟಕ ವಿ.ವಿ. ವಿಶ್ರಾಂತ ಕುಲಪತಿ ಡಾ. ಪ್ರಮೋದ ಗಾಯಿ, ಮಹಿಳಾ ವಿ.ವಿ. ಮಾಜಿ ಕುಲಪತಿ ಡಾ.ಗೀತಾ ಬಾಲಿ, ತಜ್ಞರಾದ ಡಾ. ಎಂ.ಕೆ. ಶ್ರೀಧರ, ರಘುನಂದನ, ಡಾ. ವಿಷ್ಣುಕಾಂತ ಚಟಪಲ್ಲಿ, ಡಾ.ಹರೀಶ್ ರಾಮಸ್ವಾಮಿ, ಡಾ.ಅಜಿತಪ್ರಸಾದ, ತುಮಕೂರು ವಿ.ವಿ. ಕುಲಪತಿ ಡಾ. ಸಿದ್ಧೇಗೌಡ, ಮಂಗಳೂರು ವಿ.ವಿ. ಕುಲಪತಿ ಡಾ. ಯಡಪಡಿತ್ತಾಯ, ಡಾ. ಸತೀಶ ಜಿಗಜಿನ್ನಿ, ಕೇಂದ್ರೀಯ ವಿ.ವಿ. ಕುಲಪತಿ ಡಾ.ಮಹೇಶ್ವರಯ್ಯ, ಕೆಆರ್ಎಂಎಸ್ಎಸ್ನ ಡಾ.ಶಿವಪೂಜಿ ಕೋಟಿ, ಪ್ರೊ.ಪ್ರಸನ್ನ ಪಂಢರಿ, ರಾಣಿ ಚೆನ್ನಮ್ಮ ವಿ.ವಿ. ಮಾಜಿ ಕುಲಪತಿ ಡಾ.ಎಸ್.ಬಿ.ಹೊಸಮನಿ, ಡಾ. ಶಿವಲಿಂಗಯ್ಯ ಮತ್ತಿತರರು ಸಲಹೆ ನೀಡಿದರು.