ಶಿಕ್ಷಣ ಇಲಾಖೆಯಲ್ಲಿ ಆನ್‌ಲೈನ್ ಸೇವೆ ಆರಂಭ

ಬಾಗಲಕೋಟೆ: ಶಿಕ್ಷಣ ಇಲಾಖೆಯಲ್ಲಿ ಪಾರದರ್ಶಕತೆ ಹೊಂದಲು, ಪ್ರತಿನಿತ್ಯ ಶಿಕ್ಷಕರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಬರುವ ಜೂನ್ ತಿಂಗಳಿನಿಂದ ಆನ್‌ಲೈನ್ ಸೇವೆ ಆರಂಭಿಸಲಾಗವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಎಚ್. ಗೋನಾಳ ಹೇಳಿದರು.

ನಗರದ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಏರ್ಪಡಿಸಿದ್ದ ಆನ್‌ಲೈನ್ ಸೇವೆ ಕುರಿತು ಲಿಪಿ ನೌಕರರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಆನ್‌ಲೈನ್ ತತ್ರಾಂಶದ ಮೂಲಕ ವಿವಿಧ ಸೇವೆ ಒದಗಿಸಲು ಇಲಾಖೆ ನಿರ್ಧರಿಸಿದ್ದು, ಸೇವೆಗಳ ಕುರಿತು ಹೊಸ ವಿಧಾನವಾಗಿದ್ದರಿಂದ, ಈಗಾಗಲೇ ಅಧಿಕಾರಿಗಳು, ಸಿಬ್ಬಂದಿ ರಾಜ್ಯ ಮಟ್ಟದಲ್ಲಿ ತರಬೇತಿ ಪಡೆದುಕೊಂಡು ಬಂದಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ನೀಡಲು ತರಬೇತಿ ಆಯೋಜಿಸಲಾಗಿದೆ ಎಂದರು.

ಇಲಾಖೆಯ ಬೋಧಕ, ಬೋಧಕೇತರ ನೌಕರರ ರಜೆ ಸೌಲಭ್ಯಗಳು, ವಿದೇಶ ಪ್ರಯಾಣ, ಅಧಿಕಾರಿಗಳ ದಿನಚರಿ, ಕಾಲಮಿತಿ ವೇತನ ಬಡ್ತಿಗಳು ಸೇರಿ 12 ಸೇವೆಗಳನ್ನು ಪಡೆಯಲು ಸಂಬಂಧಿಸಿದವರು ಆನ್‌ಲೈನ್‌ದಲ್ಲಿಯೇ ಅರ್ಜಿ ಸಲ್ಲಿಸಬೇಕು. ನಿಗದಿತ ಅವಧಿಯಲ್ಲಿ ಇವುಗಳಿಗೆ ಪ್ರತಿಕ್ರಿಯೆ ನೀಡಲಾಗುತ್ತದೆ. ಇದು ಪಾರದರ್ಶಕ ಆಡಳಿತ ನೀಡಲು ಸಹಕಾರಿಯಾಗಿದೆ. ಇನ್ನು ಮುಂದೆ ಶಿಕ್ಷಕರು ತಮ್ಮ ಅರ್ಜಿ ಕಡತದ ಹಂತವನ್ನು ಮೊಬೈಲ್ ಮೂಲಕವೇ ಪರಿಶೀಲಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು.

ಬೀಳಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಜಿ. ಮಿರ್ಜಿ ವಿವರ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎನ್.ವೈ. ಕುಂದರಗಿ, ದೊಡ್ಡಬಸಪ್ಪ ನೀರಲಕೇರಿ, ವಿ.ವೈ. ದೇವಣಗಾವಿ, ಎಂ.ಬಿ. ಮೊರಟಗಿ, ಉಪನಿರ್ದೇಶಕರ ಕಚೇರಿ ಪತ್ರಾಂಕಿತ ವ್ಯವಸ್ಥಾಪಕ ಎಸ್.ವೈ. ಗೌಡರ, ಪಿ.ಎಚ್. ಭಜಂತ್ರಿ, ಕಳಾವಂತ, ಸಿ.ಎಂ. ಕುಲಕರ್ಣಿ, ಎನ್.ಎ. ಖತೀಬ, ಶಿವರಾಜ, ಸಿ.ಟಿ.ಇ ಇಲಾಖೆಯ ಪಂಚಣ್ಣವರ, ಡಯಟ್‌ನ ಬಿ.ಎಸ್. ಕಾಟಾಪೂರಮಠ ಸೇರಿ ಮತ್ತಿತರರು ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಅಧೀಕ್ಷಕ ವೆಂಕಟೇಶ ಇನಾಮದಾರ ಸ್ವಾಗತಿಸಿದರು.

Leave a Reply

Your email address will not be published. Required fields are marked *