

ಸಿಂಧನೂರು: ವಕೀಲರು ಯಾಂತ್ರಿಕವಾಗಿ ಕೆಲಸ ಮಾಡಿದರೆ, ನಿರೀಕ್ಷೆಯಂತೆ ಫಲಿತಾಂಶ ಸಿಗಲಾರದು. ವೃತ್ತಿಯಲ್ಲಿ ಯಶಸ್ಸು ಕಾಣಬೇಕಾದರೆ ನಿರಂತರ ಶ್ರಮ, ಶ್ರದ್ಧೆ ಅಗತ್ಯ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಲಕ್ಷ್ಮೀಕಾಂತ ಜೆ.ಮಿಸ್ಕಿನ್ ಹೇಳಿದರು.
ಇದನ್ನೂ ಓದಿ: ಆನೇಕಲ್ ವಕೀಲರ ಸಂಕ್ಕೆ ಆ.3ರಂದು ಚುನಾವಣೆ
ನಗರದ ವಕೀಲರ ಸಂಘದ ಸಭಾಂಗಣದಲ್ಲಿ ರಾಜ್ಯ ವಕೀಲರ ಪರಿಷತ್ತು ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಆಯೋಜಿಸಿರುವ ಮೂರು ದಿನಗಳ ಕಾನೂನು ಕಾರ್ಯಗಾರದಲ್ಲಿ ಶುಕ್ರವಾರ ಮಾತನಾಡಿದರು.
ವಕೀಲ ವೃತ್ತಿಯಲ್ಲಿ ಹೆಚ್ಚು ತೊಡಗಿಕೊಂಡಷ್ಟು, ನಂಬಿ ಬಂದ ಕಕ್ಷಿದಾರರಿಗೆ ನ್ಯಾಯದೊರಕಿಸಲು ಸಾಧ್ಯ. ನಿರ್ಲಕ್ಷ್ಯದಿಂದ ಕಕ್ಷಿದಾರರಿಗೆ ಅನ್ಯಾಯವಾಗಲು ಅವಕಾಶ ನೀಡಬಾರದು. ಹೊಸ ಕಾನೂನುಗಳ ಬಗ್ಗೆ ತಿಳಿದುಕೊಳ್ಳುವುದು, ಜಡ್ಜ್‌ಮೆಂಟ್ ಬರೆದಿಟ್ಟುಕೊಳ್ಳುವುದು, ಸಾಮಾಜಿಕ ಜಾಲತಾಣದ ಸಹಾಯದ ಮೂಲಕ ಎಲ್ಲವನ್ನೂ ಹೆಚ್ಚಾಗಿ ತಿಳಿದುಕೊಳ್ಳಲು ಪ್ರಯತ್ನಿಸಬೇಕು. ನಾನು ಸಹ ವಕೀಲನಾಗಿದ್ದಾಗ ಮಧ್ಯರಾತ್ರಿವರೆಗೂ ಕೆಲಸ ಮಾಡಿದ್ದೆ ಎಂದು ಸ್ಮರಿಸಿದರು.
ವಕೀಲ ಜಿ.ಐ.ಮೇಟಿ ಮಾತನಾಡಿ, ವಕೀಲ ವೃತ್ತಿ ಶ್ರೇಷ್ಠವಾಗಿದೆ. ಇದರ ವ್ಯಾಪ್ತಿ ಬಹು ದೊಡ್ಡದಾಗಿದ್ದು, ನಾವು ತಿಳಿದುಕೊಂಡಷ್ಟೂ ಕಡಿಮೆ ಎನ್ನಿಸುತ್ತದೆ. ಸರಳತೆ, ದಕ್ಷತೆ, ಶ್ರಮದ ಮೂಲಕ ವೃತ್ತಿಯಲ್ಲಿ ನೈಪುಣ್ಯತೆ ಹೊಂದಬೇಕು. ಹೊಸ ಕಾಯ್ದೆ, ಕಾನೂನುಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು. ಯುವ ವಕೀಲರು ಕಲಿಕೆಗೆ ಒತ್ತು ನೀಡಬೇಕು ಎಂದರು.
ಎಂ.ಮರಿಬಸನಗೌಡ ವಕೀಲರ ಚಾರಿಟಬಲ್ ಟ್ರಸ್ಟ್‌ನಿಂದ ಹಿರಿಯ ವಕೀಲ ಎಂ.ಅಮರೇಗೌಡ, ಕಾರ್ಯಾಗಾರದಲ್ಲಿ ಪಾಲ್ಗೊಂಡ ವಕೀಲರಿಗೆ ನೋಟ್‌ಪ್ಯಾಡ್‌ಗಳನ್ನು ದೇಣಿಗೆಯಾಗಿ ನೀಡಿದರು. ಹಿರಿಯ ವಕೀಲರಾದ ಟಿ.ಮಲ್ಲಯ್ಯ, ಪ್ರಹ್ಲಾದ ಗುಡಿ ಅವರನ್ನು ಸನ್ಮಾನಿಸಲಾಯಿತು. ವಕೀಲರ ಸಂಘದ ಅಧ್ಯಕ್ಷ ಎನ್.ರಾಮನಗೌಡ, ಕಾರ್ಯದರ್ಶಿ ಶಿವಕುಮಾರ ಬೈರದೊರೆ, ಖಜಾಂಚಿ ಕೆ.ಶರಣಬಸವ ಉಮಲೂಟಿ ಇತರರಿದ್ದರು.