ರೈತರ ಭೂಮಿಗೆ ನ್ಯಾಯಯುತ ಪರಿಹಾರ ನೀಡಿ

ರೈತರ ಭೂಮಿಗೆ ನ್ಯಾಯಯುತ ಪರಿಹಾರ ನೀಡಿ
Published on

ಹಾಸನ: ತುಮಕೂರು-ಶಿವಮೊಗ್ಗ ಚತುಷ್ಪಥ ಬೈಪಾಸ್ ರಸ್ತೆ ನಿರ್ಮಾಣಕ್ಕೆ ವಶಪಡಿಸಿಕೊಳ್ಳಲು ನಿರ್ಧರಿಸಿರುವ ಭೂಮಿಗೆ ನ್ಯಾಯಯುತ ಪರಿಹಾರ ನೀಡಬೇಕು ಎಂದು ಅರಸೀಕೆರೆ ತಾಲೂಕು ಬೆಂಡೇಕೆರೆ ಗ್ರಾಮದ ರೈತರು ಬುಧವಾರ ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರಿಗೆ ಮನವಿ ಸಲ್ಲಿಸಿದರು.

ಒಂದೂವರೆ ವರ್ಷದ ಹಿಂದೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಸಚಿವ ಎಚ್.ಡಿ. ರೇವಣ್ಣ ಯೋಜನಾ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿ ಸಮಕ್ಷಮದಲ್ಲಿ ನಡೆದಿದ್ದ ಸಭೆಯಲ್ಲಿ ಪ್ರತಿ ಗುಂಟೆ ಜಮೀನಿಗೆ 36 ಸಾವಿರ ರೂ. ಪರಿಹಾರ ನೀಡಲು ತಾತ್ವಿಕ ಒಪ್ಪಿಗೆ ನೀಡಲಾಗಿತ್ತು. ಆದರೆ, ಈಗ 11,232 ರೂ. ನೀಡಿ ಕಾಮಗಾರಿ ನಿರ್ವಹಿಸಲು ಮುಂದಾಗಿದ್ದಾರೆ. ಕಡಿಮೆ ಪರಿಹಾರ ನೀಡಿದರೆ ಭಾರಿ ಅನ್ಯಾಯವಾಗುತ್ತದೆಂದು ರೈತರು ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಮಾತನಾಡಿ, ಪರಿಹಾರ ವಿಚಾರದಲ್ಲಿ ಅನ್ಯಾಯವಾಗಿದ್ದರೆ ಕಾನೂನು ಹೋರಾಟಕ್ಕೆ ಅವಕಾಶವಿದೆ. ಅಭಿವೃದ್ಧಿ ಕೆಲಸಗಳಿಗೆ ಸಹಕಾರ ನೀಡುವುದು ಜವಾಬ್ದಾರಿ. ಕಾಮಗಾರಿ ಪೂರ್ಣಗೊಳಿಸಲು ಸಹಕರಿಸಬೇಕೆಂದು ಮನವಿ ಮಾಡಿದರು. ಜಿಲ್ಲಾಧಿಕಾರಿ ಮನವಿಗೆ ಒಪ್ಪದ ರೈತರು ಸಭೆಯಿಂದ ನಿರ್ಗಮಿಸಿದರು.

ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ಮಾತನಾಡಿ, ಜಾಜೂರು, ಕಾಟಿಕೆರೆ ಗ್ರಾಮದ ರೈತರಿಗೆ ನೀಡಿರುವ ಮಾರ್ಗಸೂಚಿ ಬೆಲೆ ನೀಡಬೇಕು. ಕೆಲವರ ರಾಜಕೀಯ ಕುತಂತ್ರ, ಒತ್ತಡದಿಂದ ಭೂಮಿ ವಶಕ್ಕೆ ಪಡೆಯಲು ಈ ಹಿಂದೆ ಜೀಪ್, ಡಿಆರ್ ವ್ಯಾನ್ ಜತೆ ಅಪಾರ ಸಂಖ್ಯೆಯಲ್ಲಿ ಪೊಲೀಸರನ್ನು ಕಳುಹಿಸಲಾಗಿತ್ತು. ನ್ಯಾಯಯುತ ಪರಿಹಾರ ನೀಡಿ ಕೆಲಸ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net