

ಬೆಂಗಳೂರು: ಭತ್ತ ಬೆಳೆಯಲು ಖರ್ಚಾಗುವ ವೆಚ್ಚ ದಶಕದಿಂದೀಚೆಗೆ ಸುಮಾರು ಶೇ.130 ಹೆಚ್ಚಳವಾಗಿದ್ದರೆ, ಖರೀದಿ ಬೆಲೆಯಲ್ಲಿ ಕೇವಲ ಶೇ.50 ಹೆಚ್ಚಾಗಿದೆ ಎಂಬ ಅಂಕಿ ಅಂಶವೇ ರೈತರ ಸಂಕಷ್ಟವನ್ನು ವಿವರಿಸುತ್ತದೆ.
ಸರ್ಕಾರಗಳು ಪ್ರತಿವರ್ಷ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ನಿಗದಿಪಡಿಸುವ ಶಾಸ್ತ್ರ ಮಾಡುತ್ತವಾದರೂ ಅದರಿಂದ ರೈತರಿಗೆ ಆಗಿರುವ ಲಾಭ ಶೂನ್ಯ. ಹೀಗಾಗಿ, ವೈಜ್ಞಾನಿಕವಾಗಿ ದರ ನಿಗದಿಪಡಿಸುವುದು ಮತ್ತು ಎಂಎಸ್ಪಿ ಬದಲಿಗೆ ಶಾಸನಾತ್ಮಕ ಕನಿಷ್ಠ ದರ (ಎಸ್ಎಂಪಿ) ನೀಡಿದರೆ ರೈತರು ಅಷ್ಟರಮಟ್ಟಿಗೆ ಉಸಿರಾಡಬಹುದು, ದೇಶದ ಆಹಾರ ಭದ್ರತೆಯೂ ಸುರಕ್ಷಿತವಾಗಿರುತ್ತದೆ ಎಂಬುದು ಎಲ್ಲರ ಅಭಿಪ್ರಾಯ.
ಉತ್ಪಾದನಾ ವೆಚ್ಚ ಹೆಚ್ಚಳ: ದಶಕದಿಂದೀಚೆಗೆ ಭತ್ತ ಬೆಳೆಯುವ ಪದ್ಧತಿ, ಕೊಯ್ಲು ಸೇರಿ ಅನೇಕ ಹಂತದಲ್ಲಿ ಬದಲಾವಣೆಳಾಗಿವೆ. ಕೃಷಿ ಕಾರ್ವಿುಕರ ಕೂಲಿಯೂ ಹೆಚ್ಚಳವಾಗಿದೆ. ಭತ್ತ ನಾಟಿಯಿಂದ ಮಾರುಕಟ್ಟೆಗೆ ಸಾಗಿಸುವವರೆಗಿನ ಒಟ್ಟು ಖರ್ಚನ್ನು ಲೆಕ್ಕ ಹಾಕಿದರೆ ಭತ್ತ ಬೆಳೆಯಲು ಪ್ರತಿ ಎಕರೆಗೆ 28-30 ಸಾವಿರ ರೂ. ವೆಚ್ಚವಾಗುತ್ತದೆ. ಇದರಲ್ಲಿ ರೈತರ ಶ್ರಮ, ಸಮಯ, ಮನೆಯವರ ಶ್ರಮವನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ ಮತ್ತಷ್ಟು ಹೆಚ್ಚಳವಾಗುತ್ತದೆ. ಕಳೆದ 8-9 ವರ್ಷದ ಹಿಂದೆ ಪ್ರತಿ ಎಕರೆಗೆ ಉತ್ಪಾದನಾ ವೆಚ್ಚ ಅಂದಾಜು 12-13 ಸಾವಿರ ರೂ. ಇತ್ತು. ಅಂದರೆ ಶೇ.130 ಉತ್ಪಾದನಾ ವೆಚ್ಚ ಏರಿಕೆ ಕಂಡಿದೆ. ಆದರೆ ಇದೇ ಅವಧಿಯಲ್ಲಿ ಭತ್ತದ ಖರೀದಿ ದರದ ಏರಿಕೆಯಲ್ಲಿ ಅನುಪಾತ ಹಿಡಿತ ತಪ್ಪಿದೆ. 2012-13ರಲ್ಲಿ ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್ ಭತ್ತಕ್ಕೆ 1,250 ರೂ. ಎಂಎಸ್ಪಿ ದರ ನಿಗದಿ ಮಾಡಿತ್ತು. 2020-21ಕ್ಕೆ 1,868 ರೂ. ನಿಗದಿ ಮಾಡಿದೆ. ಅಂದರೆ ಇಷ್ಟು ವರ್ಷದಲ್ಲಿ ಕೇವಲ ಶೇ.49.4 ದರ ಹೆಚ್ಚಳವಾಗಿದೆ.
ತೋರಿಕೆಗೆ ಮಾತ್ರ ಎಂಎಸ್ಪಿ: ಒಂದು ಎಕರೆಯಲ್ಲಿ ಸರಾಸರಿ 20 ಕ್ವಿಂಟಾಲ್ ಭತ್ತ ಬೆಳೆದು, 2 ಸಾವಿರ ರೂ.ನಂತೆ ಮಾರಾಟವಾದರೂ ರೈತನಿಗೆ ಸಿಗುವುದು ಕೇವಲ 10 ಸಾವಿರ ರೂ. ಇದೀಗ ಕೇಂದ್ರ ಸರ್ಕಾರ 1,868 ರೂ. ಎಂಎಸ್ಪಿ ನಿಗದಿ ಮಾಡಿದೆ. ಆದರೆ ಈ ಪ್ರಯೋಜನ ಶೇ.20 ರೈತರಿಗೂ ಸಿಗುವುದಿಲ್ಲ. ದಲ್ಲಾಳಿಗಳು ರೈತರಿಂದ 1,300-1,400 ರೂ. ಪ್ರತಿ ಕ್ವಿಂಟಾಲ್ಗೆ ಖರೀದಿ ಮಾಡುತ್ತಿದ್ದಾರೆ. ಅಂದರೆ 2012-13ರಲ್ಲಿ ಕೇಂದ್ರ ಸರ್ಕಾರ ನಿಗದಿ ಮಾಡಿದ್ದ ಎಂಎಸ್ಪಿ ದರದ ಆಸುಪಾಸಿನಲ್ಲಿ ಭತ್ತ ಮಾರಾಟವಾಗುತ್ತಿದೆ. ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಪ್ರೊ. ಸಿ. ನರಸಿಂಹಪ್ಪ, ರೈತರು ತಮ್ಮ ವೆಚ್ಚವನ್ನು ಸರಿದೂಗಿಸಿಕೊಂಡು ಸಂಸಾರವನ್ನು ನಿರ್ವಹಿಸಲು ಪ್ರತಿ ಕ್ವಿಂಟಾಲ್ಗೆ ಕನಿಷ್ಠ 2,500 ರೂ. ದರ ಸಿಕ್ಕಬೇಕು ಎಂದಿದ್ದಾರೆ.
ಎಸ್ಎಂಪಿಯಿಂದ ಅಲ್ಪ ಪರಿಹಾರ: ಈಗಾಗಲೆ ಕಬ್ಬಿಗೆ ಎಫ್ಆರ್ಪಿ ನಿಗದಿಪಡಿಸಲಾಗುತ್ತದೆ. ಅದಕ್ಕಿಂತ ಕಡಿಮೆ ದರಕ್ಕೆ ಮಾರುಕಟ್ಟೆಯಲ್ಲಿ ಖರೀದಿ ಮಾಡಿದರೆ ಶಿಕ್ಷೆಗೆ ಅವಕಾಶವಿದೆ. ಆದರೆ ಭತ್ತಕ್ಕೆ ಮಾತ್ರ ಎಂಎಸ್ಪಿ ನಿಗದಿ ಮಾಡಲಾಗುತ್ತದೆ. ಇದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ.
ಎಸ್ಪಿಯಿಂದ ರೈತರಿಗೆ ಸಮಾಧಾನವಾಗುತ್ತದೆ ಎಂದು ಎಸ್ಎಂಪಿ ಕುರಿತು ಪ್ರತಿಕ್ರಿಯಿಸಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ. ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಪ್ರೊ. ಸಿ. ನರಸಿಂಹಪ್ಪ, ಎಸ್ಎಂಪಿ ನಿಗದಿ ಪಡಿಸಿ ಸೂಕ್ತ ರೀತಿಯಲ್ಲಿ ಅನುಷ್ಠಾನ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಪಂಜಾಬ್ನಲ್ಲಿ 4 ಸಾವಿರ ಹಾಗೂ ಹಾಗೂ ಹರ್ಯಾಣದಲ್ಲಿ 2 ಸಾವಿರ ಕೇಂದ್ರಗಳ ಮೂಲಕ ಸರ್ಕಾರ ಬಹುದೊಡ್ಡ ಪ್ರಮಾಣದ ಭತ್ತವನ್ನು ರೈತರಿಂದ ಖರೀದಿಸಿ ಸಾರ್ವಜನಿಕ ವಿತರಣೆ ವ್ಯವಸ್ಥೆಯಲ್ಲಿ ಕರ್ನಾಟಕ ಸೇರಿ ಅನೇಕ ರಾಜ್ಯಗಳಿಗೆ ನೀಡುತ್ತದೆ. ಕರ್ನಾಟಕ ಸರ್ಕಾರ ಆದಷ್ಟೂ ಹೆಚ್ಚು ಖರೀದಿ ಕೇಂದ್ರ ತೆರೆದು ನಮ್ಮ ರೈತರಿಂದಲೇ ಖರೀದಿಗೆ ಮುಂದಾಗಬೇಕು. | ಪ್ರೊ.ಸಿ.ಹನುಮಂತಪ್ಪ ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಭತ್ತ ಬೆಳೆಯಲು ಏನೂ ಸಮಸ್ಯೆಯಿಲ್ಲ. ಆದರೆ ಮಾರುಕಟ್ಟೆಯಲ್ಲಿನ ಏರಿಳಿತ ಹಾಗೂ ಸುಸ್ಥಿರ ವ್ಯವಸ್ಥೆ ಇಲ್ಲದಿರುವುದು ಆತಂಕದ ವಿಚಾರ. | ಎಂ.ಕೆ. ಶಂಕರ್ ಗುರು ಭತ್ತದ ರೈತ, ಟಿ.ನರಸೀಪುರ
| ರಮೇಶ ದೊಡ್ಡಪುರ