

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಹಿಂದೆ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಲು ಪಾಲಕರು ಹಿಂದಡಿ ಇಡುತ್ತಿದ್ದರು. ಶಿಕ್ಷಣ ಸಿಕ್ಕರೂ ಅವರ ಸಾಧನೆ ಅಷ್ಟಾಗಿರಲಿಲ್ಲ. ಈಗ ಹೆಣ್ಣು ಮಕ್ಕಳು ಶೈಕ್ಷಣಿಕವಾಗಿ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದು, ಅವರ ಸಾಧನೆಯ ಮಾದರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಅಹಲ್ಯಾಬಾಯಿ ಹೋಳ್ಕರ್ ಮಹಿಳಾ ಸಂಘದ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಣಿ ಅಹಲ್ಯಾ ಬಾಯಿ ಹೋಳ್ಕರ್ ಅವರ 300ನೇ ಜನ್ಮ ದಿನಾಚರಣೆ ಹಾಗೂ ಸಂಘದ 25ನೇ ವರ್ಷದ ರಜತ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಹೆಣ್ಣು ಮಕ್ಕಳು ಶೇ.100 ರಷ್ಟು ಅಂಕಗಳನ್ನು ಪಡೆಯುತ್ತಿರುವುದು ಹೆಮ್ಮೆಪಡುವ ವಿಚಾರ. ಸೈನ್ಯ, ಅಂತರಿಕ್ಷ, ವೈದ್ಯಕಿಯ, ಇಂಜಿನಿಯರಿಂಗ್, ಕಾನೂನು, ತಂತ್ರಜ್ಞಾನ ಹೀಗೆ ಹಲವು ಕ್ಷೇತ್ರಗಳಲ್ಲಿ ಅದ್ವೀತಿಯ ಸಾಧನೆ ಮಾಡುತ್ತಿರುವುದು ಮಹಿಳಾ ಕುಲದ ಪ್ರಗತಿಯ ಪ್ರತಿಕದಂತಿದೆ ಎಂದರು.
ಹೊಸದುರ್ಗ ಕನಕಗುರು ಪೀಠದ ಶ್ರೀ ಡಾ.ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ಕೂಡಿ ಬಾಳುವುದೇ ನಿಜವಾದ ಧರ್ಮ ಎಂಬುದನ್ನು ಅರಿತಿದ್ದ ಸ್ವಾಭಿಮಾನಿ ಮಹಿಳೆ ಅಹಲ್ಯಾಬಾಯಿ ಹೋಳ್ಕರ್ ಎಂದು ತಿಳಿಸಿದರು.
ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮಾತನಾಡಿ, ಅಹಲ್ಯಾಬಾಯಿ ಹೋಳ್ಕರ್ ತನ್ನ ಆಡಳಿತ ಕಾಲದಲ್ಲಿ ಅದ್ವೀತಿಯ ಚಾಪನ್ನು ಮೂಡಿಸಿದ ದಿಟ್ಟ ಮಹಿಳೆಯಾಗಿದ್ದರು. ಅಂದೇ ಹಲವು ಕ್ಷೇತ್ರಗಳಿಗೆ ಪ್ರಾಮುಖ್ಯತೆ ರಾಜ್ಯ ಉತ್ತಮ ಪ್ರಗತಿ ಹೊಂದಲು ಸಾಧ್ಯವಾಯಿತು ಎಂದರು. ಕಾರ್ಯಕ್ರಮದಲ್ಲಿ ಸಂಘದ ಮಹಿಳೆಯರು ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮಂಡಳಿ ಅಧ್ಯಕ್ಷ ಎಚ್.ಎಂ.ರೇವಣ್ಣ ಮತ್ತಿತರರು ಇದ್ದರು.
ಬಾಲ್ಯವಿವಾಹವನ್ನು ಪ್ರೋತ್ಸಾಹಿಸದೆ, ಸತಿಪದ್ಧತಿಯನ್ನು ದಿಕ್ಕರಿಸಿ ತನ್ನ ರಾಜ್ಯದಲ್ಲಿ ಸರ್ವಧರ್ಮವನ್ನು ಸಮನಾಗಿ ಕಾಣುತ್ತಿದ್ದವರು ಅಹಲ್ಯಾಬಾಯಿ ಹೋಳ್ಕರ್. ಇಂದಿನ ಮಧ್ಯಪ್ರದೇಶದ ಇಂದೋರ್ನ ಮಾಳ್ವ ಸಂಸ್ಥಾನದಲ್ಲಿ 28 ವರ್ಷ ರಾಣಿಯಾಗಿದ್ದ ಅಹಲ್ಯಾಬಾಯಿ ರಾಜ್ಯವನ್ನು ವಿಸ್ತರಿಸುವ ಮನಸ್ಸು ಮಾಡದೆ, ಇದ್ದದ್ದರಲ್ಲಿ ರಾಜ್ಯವನ್ನು ಸಮೃದ್ಧಿಯಿಂದ ಮುನ್ನೆಡೆಸುವ ಚಾಕಚಾಕ್ಯತೆಯನ್ನು ಬೆಳೆಸಿಕೊಂಡಿದ್ದ ವೀರ ಮಹಿಳೆ. > ಸಿದ್ದರಾಮಯ್ಯ, ಮುಖ್ಯಂತ್ರಿ
ಸಿಎಂ ಭರವಸೆ ಅಹಲ್ಯಾಬಾಯಿ ಹೋಳ್ಕರ್ ಮಹಿಳಾ ಸಂಘದ 25 ವರ್ಷಗಳ ಕಾರ್ಯವೈಖರಿ ಮೆಚ್ಚುವಂತಹದ್ದು. ಇದೇ ರೀತಿ ಸಾಧನೆಯ ಪಥದಲ್ಲಿ ಸಂಘ ಸಾಗಬೇಕಿದ್ದು, ಪ್ರಸ್ತುತ ವರ್ಷದಲ್ಲಿಯೇ ಸಂಘಕ್ಕೆ ಜಮೀನನ್ನು ಕೊಡುತ್ತೇವೆ. ಈ ಸಂಘದ ಕಟ್ಟಡ ನಿಮಾರ್ಣ ಹಾಗೂ ಇತರೆ ಚಟುವಟಿಕೆಗಳಿಗೆ ಸಹಕಾರ ನೀಡುತ್ತೇವೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.