

ಬೆಂಗಳೂರು: 'ನನ್ನ ಸಾವಿಗೆ ಸುಬ್ಬನೇ ಕಾರಣ' ಎಂದು ಡೆತ್ನೋಟ್ ಬರೆದಿಟ್ಟು ವಿಷ ಕುಡಿದಿದ್ದ ಬಾಲಕಿ ಸಾವಿಗೀಡಾಗಿದ್ದಾಳೆ. ಬೆಂಗಳೂರು ಗ್ರಾಮಾಂತರದ ಹೊಸಕೋಟೆ ತಾಲೂಕಿನ ಹದಿನಾರು ವರ್ಷದ ಬಾಲಕಿ ಮೃತಪಟ್ಟವಳು.
ಸಾವಿಗೀಡಾದ ಬಾಲಕಿ ಕೆಲವು ದಿನಗಳ ಹಿಂದೆ ಶೌಚಾಲಯಕ್ಕೆ ಹೋಗಿ ಬರುತ್ತಿದ್ದಾಗ ಅದೇ ಗ್ರಾಮದ ಸುಬ್ರಹ್ಮಣ್ಯ ಎಂಬಾತ ಮುಸುಕು ಹಾಕಿಕೊಂಡು ಬಂದು ಆಕೆಯನ್ನು ಹಿಡಿದು ಎಳೆದಾಡಿದ್ದ. ಅವಳು ಅಮ್ಮ ಎಂದು ಕಿರುಚಿಕೊಂಡಿದ್ದಾಗ ಓಡಿ ಹೋಗಿದ್ದ. ಓಡುವಾಗ ಆತನ ಮೊಬೈಲ್ಫೋನ್ ಬಿದ್ದು ಹೋಗಿತ್ತು.
ಹೀಗಾದ ಒಂದೆರಡು ದಿನಗಳ ಬಳಿಕ ಆತ ಬಾಲಕಿಯ ಕುರಿತು ಕೆಟ್ಟದಾಗಿ ಹೇಳಿಕೊಂಡು ತಿರುಗಾಡಿದ್ದ. ಆ ವಿಷಯ ಆಕೆಯ ತಂದೆ-ತಾಯಿವರೆಗೂ ತಲುಪಿದ್ದು, ಮನೆಯವರು ಕೇಳಿದಾಗ ಬಾಲಕಿ ಅವಮಾನಕ್ಕೀಡಾಗಿದ್ದಾಳೆ. ಆತನಿಂದ ತಂದೆ-ತಾಯಿ ಬಳಿಯೂ ಅವಮಾನಕ್ಕೀಡಾಗುವಂತೆ ಆಯಿತೆಂದು ಮೂರು ದಿನಗಳ ಹಿಂದೆ ವಿಷ ಕುಡಿದಿದ್ದ ಬಾಲಕಿ ಇಂದು ಮೃತಪಟ್ಟಿದ್ದಾಳೆ.
ಬಾಲಕಿ ಡೆತ್ನೋಟ್ ಬರೆದಿಟ್ಟಿದ್ದು, ನಡೆದಿದ್ದೇನು ಎಂಬುದನ್ನು ಅದರಲ್ಲಿ ವಿವರಿಸಿದ್ದಳು. ಆತ ಅಂದು ನನ್ನನ್ನು ಎಳೆದಾಡಿದಾಗ ಅಮ್ಮ ಅಂತ ಕಿರುಚಿಕೊಂಡಿದ್ದರಿಂದ ಓಡಿಹೋಗಿದ್ದ. ಆತ ಮುಸುಕು ಹಾಕಿಕೊಂಡಿದ್ದರಿಂದ ತಕ್ಷಣಕ್ಕೆ ಯಾರು ಅಂತ ಗೊತ್ತಾಗದ್ದರಿಂದ ಮನೆಯವರಿಗೆ ಹೇಳಿರಲಿಲ್ಲ. ಆದರೆ ಆ ಬಳಿಕ ಅವನು ಊರಲ್ಲೆಲ್ಲ ಕೆಟ್ಟದಾಗಿ ಹೇಳಿಕೊಂಡು ತಿರುಗಾಡಿದ್ದರಿಂದ ಅವಮಾನವಾಗಿದೆ. ಅವನನ್ನು ಬಂಧಿಸಿ, ತಕ್ಕಶಾಸ್ತಿ ಮಾಡಿ. ನನ್ನ ಸಾವಿಗೆ ಸುಬ್ಬನೇ ಕಾರಣ ಎಂದು ಸುಬ್ರಹಣ್ಯ ಎಂಬಾತನ ಕುರಿತು ಬಾಲಕಿ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾಳೆ. ಬಾಲಕಿಯ ಪೋಷಕರು ನಂದಗುಡಿ ಠಾಣೆಯಲ್ಲಿ ದೂರು ನೀಡಿದ್ದಾರೆ.