ಮಗುವಿಗೆ ಜನ್ಮ ನೀಡಿದ ಬಾಲಕಿ, ತಂದೆ ಸೆರೆ

arrested
Published on

ಕಾಸರಗೋಡು: ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ 15ರ ಹರೆಯದ ಬಾಲಕಿ ಮಗುವಿಗೆ ಜನ್ಮ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕ ನಿವಾಸಿ, ಪತ್ನಿ ಹಾಗೂ ಐವರು ಮಕ್ಕಳೊಂದಿಗೆ ಕಾಞಂಗಾಡಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾತ ಬಂಧಿತ. ಬಾಲಕಿ ಗರ್ಭಿಣಿಯಾಗಿರುವ ಬಗ್ಗೆ ತಾಯಿ ಅಥವಾ ಶಾಲಾ ಶಿಕ್ಷಕಿಯರಿಗೆ ಮಾಹಿತಿಯಿರಲಿಲ್ಲ. ಇತ್ತೀಚೆಗೆ ಬಾಲಕಿ ಮನೆಯಲ್ಲಿ ಮಗುವಿಗೆ ಜನ್ಮ ನೀಡಿದ್ದು, ಅತಿಯಾದ ರಕ್ತಸ್ರಾವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆ ಅಧಿಕಾರಿಗಳು ನೀಡಿದ ಮಾಹಿತಿಯನ್ವಯ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದರು. ಆಸ್ಪತ್ರೆಯಲ್ಲಿ ಬಾಲಕಿಯಿಂದ ಹೇಳಿಕೆ ದಾಖಲಿಸಿಕೊಂಡಿದ್ದರೂ, ಕಾರಣರಾದವರ ಬಗ್ಗೆ ಬಾಲಕಿ ಮಾಹಿತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಗುವಿನ ಡಿಎನ್‌ಎ ತಪಾಸಣೆಗೆ ಮುಂದಾಗುತ್ತಿದ್ದಂತೆ ತಂದೆಯಿಂದಲೇ ದೌರ್ಜನ್ಯಕ್ಕೀಡಾಗಿರುವುದಾಗಿ ಹೇಳಿಕೆ ನೀಡಿದ್ದಾಳೆ. ಆರೋಪಿ ತಂದೆಯ ಡಿಎನ್‌ಎ ತಪಾಸಣೆಗೆ ಪೊಲೀಸರು ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net