

ಪಾಂಡವಪುರ: ಹಲವಾರು ವರ್ಷಗಳಿಂದ ಗುಡಿಸಲು ಕಟ್ಟಿಕೊಂಡು ವಾಸವಿರುವ ಮನೆ, ನಿವೇಶನಗಳಿಗೆ ಹಕ್ಕುಪತ್ರ ವಿತರಿಸುವಂತೆ ಆಗ್ರಹಿಸಿ ತಾಲೂಕಿನ ಗುಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಗಿಮುದ್ದನಹಳ್ಳಿ ಹೊಸ ಬಡಾವಣೆ ನಿವಾಸಿಗಳು ಅಧ್ಯಕ್ಷ ಮತ್ತು ಪಿಡಿಒಗೆ ಗುರುವಾರ ಘೇರಾವ್ ಹಾಕಿ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು.
ತಾಲೂಕಿನ ರಾಗಿಮುದ್ದನಹಳ್ಳಿ ಹೊಸ ಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಸ್ವಚ್ಛತಾ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದ ಗುಮ್ಮನಹಳ್ಳಿ ಗ್ರಾಪಂ ಅಧ್ಯಕ್ಷ ಎಂ.ಎಸ್.ರಘು ಹಾಗೂ ಪಿಡಿಒ ರಮೇಶ್ ಅವರನ್ನು ಸಾಮಾಜಿಕ ಹೋರಾಟಗಾರ ರಾ.ಸ.ಹನುಮಂತೇಗೌಡ ನೇತೃತ್ವದಲ್ಲಿ ತಡೆದು ಘೇರಾವ್ ಹಾಕಿದ ಬಡಾವಣೆಯ ನಿವಾಸಿಗಳು, ನಿವೇಶನಗಳ ಹಕ್ಕುಪತ್ರ ವಿತರಿಸಲು ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಗಿಮುದ್ದನಹಳ್ಳಿ ಗ್ರಾಮದ ಹೊರ ವಲಯದಲ್ಲಿರುವ ರಾಗಿಮುದ್ದನಹಳ್ಳಿ ಹೊಸ ಬಡಾವಣೆಯ ಸರ್ಕಾರಿ ಗೋಮಾಳದಲ್ಲಿ ಎಲ್ಲ ಜನಾಂಗ ಮತ್ತು ಕೋಮಿನ ಜನರು ಗುಡಿಸಲು ಮತ್ತು ತಗಡಿನ ಶೆಡ್ಡುಗಳನ್ನು ನಿರ್ಮಿಸಿಕೊಂಡು ಹಲವಾರು ವರ್ಷಗಳಿಂದ ವಾಸ ಮಾಡುತ್ತಿದ್ದಾರೆ. ಕೂಲಿ ಮತ್ತಿತರ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುವ ಬಡವರೇ ಈ ಸ್ಥಳದಲ್ಲಿ ಹೆಚ್ಚಾಗಿ ಇದ್ದಾರೆ. ದಶಕಗಳಿಂದಲೂ ಇದೇ ಸ್ಥಳದಲ್ಲಿ ವಾಸ ಮಾಡುತ್ತಿದ್ದರೂ ಇಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ಮತ್ತು ಮನೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡಲು ಗ್ರಾಪಂ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಕೂಲಿಯಿಂದ ಗಳಿಸಿದ ಹಣ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಿಗಳು ನಿವೇಶಗಳಿಗೆ ಸಂಬಂಧಿಸಿದಂತೆ ದಾಖಲೆ ಪತ್ರ ನೀಡಿದರೆ ಸಾಲವನ್ನಾದರೂ ಮಾಡಿ ಒಂದೊಳ್ಳೆ ಸೂರು ಕಟ್ಟಿಕೊಂಡು ನೆಮ್ಮದಿಯಿಂದ ಬದುಕುತ್ತೇವೆ. ಆದರೆ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರತಿಭಟನಾನಿರತರು ಅಸಮಾಧಾನ ಹೊರಹಾಕಿದರು.
ಸಾಮಾಜಿಕ ಹೋರಾಟಗಾರ ರಾ.ಸ.ಹನುಮಂತೇಗೌಡ ಮಾತನಾಡಿ, ಗ್ರಾಮದಲ್ಲಿ ಹಲವಾರು ವರ್ಷಗಳಿಂದ ವಾಸವಿರುವ ಬಡವರು ತುಂಬಾ ಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಕೆಲವರು ಗುಡಿಸಲು ಕಟ್ಟಿಕೊಂಡು ಹೇಗೋ ಜೀವನ ಮಾಡುತ್ತಿದ್ದರೆ, ಮತ್ತೆ ಕೆಲವರಿಗೆ ಕನಿಷ್ಟ ಗುಡಿಸಲು ನಿರ್ಮಾಣ ಮಾಡುವುದಕ್ಕೂ ಸಾಧ್ಯವಾಗಿಲ್ಲ. ಹೀಗಾಗಿ ಗೋಮಾಳದಲ್ಲಿ ಗುಡಿಸಲು ನಿರ್ಮಿಸಿಕೊಂಡು ಜೀವನ ನಡೆಸುತ್ತಿರುವ ಇಲ್ಲಿನ ನಿವಾಸಿಗಳಿಗೆ ಅನುಕೂಲವಾಗುವಂತೆ ಅಧಿಕಾರಿಗಳು ಕ್ರಮ ಕೈಗೊಂಡು ಶೀಘ್ರದಲ್ಲಿ ಮನೆ ಮತ್ತು ನಿವೇಶನಗಳಿಗೆ ಹಕ್ಕುಪತ್ರ ವಿತರಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮಸ್ಥರಾದ ವೆಂಕಟೇಶ್, ಕಿಶೋರ್, ಸೈಫ್‌ವುಲ್ಲಾ, ಸುಹೇಲ್, ಶ್ರೀಧರ್, ಅನಿತಾ, ಗೀತಾ, ಸರೋಜಮ್ಮ, ಜಯಲಕ್ಷ್ಮಮ್ಮ ಇತರರಿದ್ದರು.