

ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಉದ್ಘಾಟಕರಾಗಿ ನನ್ನನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿರುವುದು ತುಂಬಾ ಸಂತಸ ಉಂಟು ಮಾಡಿದ್ದು, ನಾನು ಕನ್ನಡಿಗರ ಪರವಾಗಿ ನಾಡಹಬ್ಬವನ್ನು ಉದ್ಘಾಟಿಸುತ್ತೇನೆ ಎಂದು ಸಾಹಿತಿ ಹಂಪ ನಾಗರಾಜಯ್ಯ ಹೇಳಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಇದುವರೆಗೆ 50 ದಸರಾ ಉತ್ಸವವನ್ನು ನೋಡಿರಬಹುದು. ದಸರಾ ಉತ್ಸವದ ಸಡಗರ, ಸಂಭ್ರಮ ನೋಡಿ ಪುಳಕಗೊಳ್ಳುತ್ತಿದ್ದೆ. ಆದರೆ, ಇದೀಗ ನನಗೆ ದಸರಾ ಮಹೋತ್ಸವ ಉದ್ಘಾಟನೆಗೆ ಅವಕಾಶ ದೊರೆತ್ತಿರುವುದು ನನ್ನ ಬದುಕಿನಲ್ಲಿ ದೊರೆತ ಅವಿಸ್ಮರಣೀಯ ಕ್ಷಣ. ಇಂತಹ ಒಂದು ಅವಕಾಶ ದೊರೆಯುವ ನಿರೀಕ್ಷೆ ಇರಲಿಲ್ಲ, ಅವಕಾಶ ಮಾಡಿಕೊಟ್ಟ ಸರ್ಕಾರಕ್ಕೆ ಧನ್ಯವಾದ ತಿಳಿಸಲು ಬಯಸುತ್ತೇನೆ ಎಂದರು.
ನಾನು ಮಹಾರಾಜ ಕಾಲೇಜಿನಲ್ಲಿ ಓದಿದವನು. ನನಗೆ ಈ ನಗರದಲ್ಲಿ ಜ್ಞಾನದ ಲೋಕ ತೆರೆಯಿತು. ಅಕ್ಷರ ಲೋಕಕ್ಕೆ ಬಾಗಿಲು ತೆರೆದು ಸರಸ್ವತಿ ದೇವಿ ನನ್ನನ್ನು ಬರ ಮಾಡಿಕೊಂಡ ನಗರ ಇದು. ಇಂತಹ ನಗರದಲ್ಲಿ ದಸರಾ ಉದ್ಘಾಟನೆಗೆ ಅತಿಥಿಯಾಗಿ ನನ್ನನ್ನು ಸರ್ಕಾರ ಆಯ್ಕೆ ಮಾಡಿರುವುದು ಸಂತಸ ಮೂಡಿದೆ. ದಸರಾ ಉದ್ಘಾಟನೆಯನ್ನು ನಾನು ಮಾಡುತ್ತಿದ್ದೇನೆ ಅಂದುಕೊಳ್ಳುವುದಿಲ್ಲ. ರಾಜ್ಯದ ಪ್ರಜೆಯಾದ ನನಗೆ ಉದ್ಘಾಟನೆಗೆ ದೊರೆತಿರುವ ಅವಕಾಶವನ್ನು ನಾನು ಕನ್ನಡಿಗರ ಪರವಾಗಿ ದಸರಾ ಉದ್ಘಾಟಿಸುತ್ತೇನೆ ಎಂದು ಹೇಳಿದರು.
ಹಂಪನಾಗೆ ಸಿಎಂ ಸನ್ಮಾನ: ದಸರಾ ಉದ್ಘಾಟಕರಾಗಿ ಆಯ್ಕೆಗೊಂಡ ಹಂಪಾ ನಾಗರಾಜಯ್ಯ ಅವರನ್ನು ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಕರ್ನಾಟಕ ಸಾಂಸ್ಕೃತಿಕ ಮುನ್ನೋಟ: ಚಿಂತನಾ ಸಮಾವೇಶ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿದರು. ‘ಹಂಪಾ ನಾಗರಾಜಯ್ಯ 2024ನೇ ದಸರಾ ಉತ್ಸವವನ್ನು ಉದ್ಘಾಟಿಸಲಿದ್ದು, ಈ ವಿಚಾರವನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ’ ಎಂದು ಸಿದ್ದರಾಮಯ್ಯ ಹೇಳಿದರು.